ADVERTISEMENT

ಮಾವಿನ ತೋಟದಲ್ಲಿ ಗಾಂಜಾ ಗಿಡಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 19:25 IST
Last Updated 1 ಸೆಪ್ಟೆಂಬರ್ 2018, 19:25 IST
ತೋಟದಲ್ಲಿ ಬೆಳೆಯಲಾಗಿದ್ದ ಗಾಂಜಾ ಗಿಡಗಳನ್ನು ಅಧಿಕಾರಿಗಳು ಕಿತ್ತುಹಾಕಿರುವುದು
ತೋಟದಲ್ಲಿ ಬೆಳೆಯಲಾಗಿದ್ದ ಗಾಂಜಾ ಗಿಡಗಳನ್ನು ಅಧಿಕಾರಿಗಳು ಕಿತ್ತುಹಾಕಿರುವುದು   

ಬೆಂಗಳೂರು: ಬಿದರಹಳ್ಳಿ ಬಳಿಯ ಕಮ್ಮಸಂದ್ರ ಗ್ರಾಮದಮಾವಿನ ತೋಟವೊಂದರಲ್ಲಿ ಗಾಂಜಾ ಗಿಡಗಳನ್ನು ಬೆಳೆಯುತ್ತಿದ್ದುದನ್ನು ಪತ್ತೆ ಹಚ್ಚಿರುವ ರಾಜ್ಯ ಅಬಕಾರಿ ವಿಚಕ್ಷಣಾ ದಳದ ಅಧಿಕಾರಿಗಳು, ತೋಟದ ಮಾಲೀಕ ಎಂ. ನಾರಾಯಣಪ್ಪ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಬಿದರಹಳ್ಳಿ ಹಾಗೂ ಸುತ್ತಮುತ್ತಲ ಕೆಲವು ತೋಟಗಳಲ್ಲಿ ಗಾಂಜಾ ಬೆಳೆಯುತ್ತಿದ್ದ ಬಗ್ಗೆ ಮಾಹಿತಿ ಇತ್ತು. ಎರಡು ತಂಡಗಳು ಏಕಕಾಲದಲ್ಲೇ ದಾಳಿ ನಡೆಸಿ, ನಾರಾಯಣಪ್ಪ ಅವರ ತೋಟದಲ್ಲಿದ್ದ 350 ಕೆ.ಜಿ ಗಾಂಜಾವನ್ನು ಜಪ್ತಿ ಮಾಡಿವೆ. ಸದ್ಯ ನಾರಾಯಣಪ್ಪ ತಲೆಮರೆಸಿಕೊಂಡಿದ್ದಾರೆ’ ಎಂದು ವಿಚಕ್ಷಣಾ ದಳದ ಅಧಿಕಾರಿಯೊಬ್ಬರು ತಿಳಿಸಿದರು.

‘ತೋಟದಲ್ಲಿ ಗುಲಾಬಿ ಹೂವು, ಪೇರಲ ಹಾಗೂ ಮಾವಿನ ಹಣ್ಣುಗಳ ಗಿಡಗಳನ್ನು ಬೆಳೆಸಲಾಗುತ್ತಿದೆ. ಅವುಗಳ ನಡುವೆಯೇ 28ಕ್ಕೂ ಹೆಚ್ಚು ಗಾಂಜಾ ಗಿಡಗಳನ್ನು ಸಹ ಬೆಳೆಯಲಾಗಿತ್ತು. ಆ ಗಿಡಗಳು 10ರಿಂದ 12 ಅಡಿಯಷ್ಟಿದ್ದವು. ಈಗ ಎಲ್ಲ ಗಿಡಗಳನ್ನು ಕಿತ್ತು ಹಾಕಲಾಗಿದೆ’ ಎಂದರು.

ADVERTISEMENT

ಒಣಗಿಸಿ ಮಾರಾಟ: ವಿಚಕ್ಷಣಾ ದಳದ ಡೆಪ್ಯೂಟಿ ಸೂಪರಿಟೆಂಡೆಂಟ್ ಎಚ್.ಜೆ. ಅಶೋಕ, ‘ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಆರೋಪಿ, ಗಾಂಜಾ ಗಿಡಗಳನ್ನು ಬೆಳೆಸಿದ್ದರು. ಹೂವು ಬಿಟ್ಟ ಬಳಿಕ ಗಿಡವನ್ನು ಕತ್ತರಿಸಿ, ತೋಟದಲ್ಲೇ ಒಣಗಿಸಿ ಮಾರಾಟ ಮಾಡುತ್ತಿದ್ದರು’ ಎಂದರು.

‘ನಾರಾಯಣಪ್ಪರ ಮನೆ ಮೇಲೆಯೂ ದಾಳಿ ಮಾಡಲಾಯಿತು. ಅಷ್ಟರಲ್ಲೇ ಆರೋಪಿ, ಕುಟುಂಬಸಮೇತ ಮನೆ ಬಿಟ್ಟು ಹೋಗಿದ್ದಾರೆ. ಅದೇ ಮನೆಯಲ್ಲಿ 4 ಕೆ.ಜಿ ಗಾಂಜಾ ಸಿಕ್ಕಿದೆ. ಅವರಿಂದ ಗಾಂಜಾ ಖರೀದಿಸಿ ಬೆಂಗಳೂರಿನ ಹಲವೆಡೆ ಮಾರಾಟ ಮಾಡುತ್ತಿದ್ದ ಆರೋಪಿಗಳು ಯಾರು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದರು.

‘ಅದೇ ಗ್ರಾಮದ ವೆಂಕಟರಾಮಪ್ಪ ಎಂಬುವರ ತೋಟದಲ್ಲೂ ಗಾಂಜಾ ಗಿಡಗಳು ಪತ್ತೆಯಾಗಿವೆ. ಅವರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.