ADVERTISEMENT

ಘನತ್ಯಾಜ್ಯ ವಿಲೇವಾರಿ ಪ್ರಕರಣ: ಬೈ–ಲಾ ಅನುಮೋದನೆ ಕ್ರಮಕ್ಕೆ ಆದೇಶ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 19:16 IST
Last Updated 6 ಸೆಪ್ಟೆಂಬರ್ 2019, 19:16 IST

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ರೂಪಿಸಲಾಗಿರುವ ಬೈ–ಲಾಗೆ (ಉಪ ನಿಯಮ) ಅನುಮೋದನೆ ನೀಡುವ ದಿಸೆಯಲ್ಲಿ ಒಂದು ತಿಂಗಳಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಸಲ್ಲಿಸಲಾಗಿರುವ 13ಕ್ಕೂ ಹೆಚ್ಚು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

‘ಬೈಲಾ ಅಂತಿಮಗೊಳಿಸುವಲ್ಲಿ ಎರಡೂವರೆ ವರ್ಷ ವಿಳಂಬವಾಗಿದೆ’ ಎಂದು ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಪೀಠ, ‘ಮುಂದಿನ ಹತ್ತು ದಿನಗಳಲ್ಲಿ ಬಿಬಿಎಂಪಿ ಕರಡು ಬೈ–ಲಾ ಅನ್ನು ಸರ್ಕಾರಕ್ಕೆ ಕಳುಹಿಸಿಕೊಡಬೇಕು. ಮೊದಲು ಸಾರ್ವಜನಿಕರಿಂದ ಆಕ್ಷೇಪಣೆ ಪಡೆದು ನಂತರ ನಿಯಮದಂತೆ ಅದನ್ನು ಗೆಜೆಟ್‌ನಲ್ಲಿ ಪ್ರಕಟಿಸಬೇಕು’ ಎಂದು ನಿರ್ದೇಶಿಸಿದೆ.

ADVERTISEMENT

ವರದಿ ಸಲ್ಲಿಕೆಗೆ ಆದೇಶ: ‘ಘನತ್ಯಾಜ್ಯ ನಿರ್ವಹಣಾ ನಿಯಮ–2000ಕ್ಕೆ ಅನುಸಾರವಾಗಿ ಈಗ ಮೂರು ವರ್ಷಗಳಿಂದ ನಗರದಲ್ಲಿ ನಿತ್ಯವೂ ಎಷ್ಟು ಪ್ರಮಾಣದಲ್ಲಿ ಕಸ ಸಂಗ್ರಹಣೆಯಾಗುತ್ತಿದೆ, ಅದನ್ನು ಯಾವ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ, ಎಷ್ಟು ತ್ಯಾಜ್ಯ ಸಂಸ್ಕರಣಾ ಘಟಕಗಳಿವೆ, ಅವುಗಳ ಸಾಮರ್ಥ್ಯವೇನು ಎಂಬ ವಿವರಗಳನ್ನು ಸಲ್ಲಿಸಿ’ ಎಂದು ನ್ಯಾಯಪೀಠ ಬಿಬಿಎಂಪಿಗೆ ತಾಕೀತು ಮಾಡಿದೆ.

‘ಘನತ್ಯಾಜ್ಯ ನಿರ್ವಹಣಾ ನಿಯಮ–2016ಕ್ಕೆ ಅನುಗುಣವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಕೆಎಸ್‌ಪಿಸಿಬಿ) ಘನತ್ಯಾಜ್ಯ ವಿಲೇವಾರಿ ಬಗ್ಗೆ ಪರಿಶೀಲನೆ ನಡೆಸಿರುವ ವರದಿಯನ್ನು ಸಲ್ಲಿಸಬೇಕು’ ಎಂದೂ ನ್ಯಾಯಪೀಠ ನಿರ್ದೇಶಿಸಿದೆ. ಈ ಎಲ್ಲಾ ಪಿಐಎಲ್‌ಗಳನ್ನು 2012, 2013 ಮತ್ತು 2018ರಲ್ಲಿ ಸಲ್ಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.