ADVERTISEMENT

ಬೆಳ್ಳಹಳ್ಳಿ ಗ್ರಾಮಸ್ಥರ ಧರಣಿ; ಕಸ ಹೊತ್ತು ನಿಂತ 250 ಟ್ರಕ್

ಕಸ ವಿಲೇವಾರಿ ಸಮಸ್ಯೆ ಉಲ್ಬಣವಾಗುವ ಭೀತಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2019, 19:34 IST
Last Updated 24 ಜನವರಿ 2019, 19:34 IST
ಕಸದ ವಾಹನಗಳು ಸಂಚರಿಸದಂತೆ ಬೆಳ್ಳಹಳ್ಳಿಯ ಕ್ವಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಟ್ರ್ಯಾಕ್ಟರ್‌ ಟ್ರೇಲರ್‌ಗಳನ್ನು ಅಡ್ಡವಾಗಿ ನಿಲ್ಲಿಸಲಾಗಿದೆ   
ಕಸದ ವಾಹನಗಳು ಸಂಚರಿಸದಂತೆ ಬೆಳ್ಳಹಳ್ಳಿಯ ಕ್ವಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಟ್ರ್ಯಾಕ್ಟರ್‌ ಟ್ರೇಲರ್‌ಗಳನ್ನು ಅಡ್ಡವಾಗಿ ನಿಲ್ಲಿಸಲಾಗಿದೆ      

ಬೆಂಗಳೂರು: ಬೆಳ್ಳಹಳ್ಳಿ ಕಲ್ಲು ಕ್ವಾರಿಯಲ್ಲಿ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿರುವುದನ್ನು ವಿರೋಧಿಸಿ ಬುಧವಾರದಿಂದ (ಜ. 22) ಗ್ರಾಮಸ್ಥರು ಧರಣಿ ಆರಂಭಿಸಿದ್ದು, ಕಸ ತುಂಬಿಕೊಂಡ 250ಕ್ಕೂ ಹೆಚ್ಚು ಟ್ರಕ್‌ಗಳು ಕ್ವಾರಿಯತ್ತ ಹೋಗಲಾಗದೇ ರಸ್ತೆ ಬದಿಯಲ್ಲೇ ನಿಂತಿವೆ.

ಗ್ರಾಮಸ್ಥರು ಪ್ರತಿಭಟನೆ ಮುಂದುವರಿಸಿದರೆ ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಇದೆ.

ಕಣ್ಣೂರು ಪಂಚಾಯಿತಿ ವ್ಯಾಪ್ತಿಯ ಬೆಳ್ಳಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಒಟ್ಟಾಗಿ ಈ ಧರಣಿ ಕೈಗೊಂಡಿದ್ದಾರೆ.ಮಂಗಳವಾರ ಬೆಳಿಗ್ಗೆ ಎಂದಿನಂತೆ 350 ಟ್ರಕ್‌ಗಳು ಕ್ವಾರಿಯತ್ತ ಹೋಗಿ ಕಸ ಸುರಿದು ವಾಪಸು ಬಂದಿದ್ದವು. ಅದಾದ ಬಳಿಕ ಯಾವುದೇ ವಾಹನಗಳನ್ನು ಕ್ವಾರಿಯತ್ತ ಹೋಗಲು ಗ್ರಾಮಸ್ಥರು ಬಿಟ್ಟಿಲ್ಲ.

ADVERTISEMENT

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಅಕ್ಕ–ಪಕ್ಕದಲ್ಲಿರುವ ಪ್ರದೇಶಗಳಲ್ಲಿ ಮನೆಯಿಂದ ಮನೆಗೆ ಕಸ ಸಂಗ್ರಹಿಸುವುದನ್ನು ನಿಲ್ಲಿಸಲಾಗಿದೆ. ರಸ್ತೆ ಹಾಗೂ ಖಾಲಿ ಜಾಗದಲ್ಲಿ ನಿವಾಸಿಗಳು ಕಸ ಸಂಗ್ರಹಿಸಿಟ್ಟಿದ್ದು, ಅದರ ವಿಲೇವಾರಿಗೂ ವಾಹನಗಳು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.

‘ವೈಜ್ಞಾನಿಕವಾಗಿ ವಿಂಗಡಣೆ ಮಾಡದ ಕಸವನ್ನು ಮೂರು ವರ್ಷಗಳಿಂದ ಬಿಬಿಎಂಪಿಯವರು ಕ್ವಾರಿಗೆ ತಂದು ಸುರಿಯುತ್ತಿದ್ದಾರೆ. ಮುಂದೆ ಆಗುವ ಅಪಾಯವೇನು ಎಂಬುದನ್ನು ತಿಳಿದುಕೊಳ್ಳುತ್ತಿಲ್ಲ. ಇನ್ನೆರಡು ತಿಂಗಳಿನಲ್ಲಿ ಪೂರ್ತಿಯಾಗಿ ಕ್ವಾರಿ ಕಸದಿಂದ ತುಂಬಲಿದೆ. ಪಕ್ಕದ ಮತ್ತೊಂದು ಕ್ವಾರಿಗೆ ಕಸ ಸುರಿಯುವ ಕೆಲಸವನ್ನು ಬಿಬಿಎಂಪಿ ಈಗಾಗಲೇ ಆರಂಭಿಸಿದೆ’ ಎಂದು ಸ್ಥಳೀಯ ನಿವಾಸಿ ರಮೇಶ್ ದೂರಿದರು.

‘ವೈಜ್ಞಾನಿಕವಾಗಿ ಕಸ ವಿಂಗಡಣೆ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ. ಚಾಲಕರು ವಾಹನಗಳಲ್ಲಿ ಕಸ ತಂದು ಎಸೆದು ಹೋಗುವುದಷ್ಟೇ ಮಾಡುತ್ತಿದ್ದಾರೆ. ಇದರಿಂದಾಗಿ ಸ್ಥಳೀಯ ವಾತಾವರಣ ಹಾಳಾಗುತ್ತಿದ್ದು, ಉಸಿರಾಡಲು ಶುದ್ಧ ಗಾಳಿ ಇಲ್ಲದ ಸ್ಥಿತಿ ಇದೆ. ಕೆರೆಗಳ ನೀರು ಸಹ ವಿಷಯುಕ್ತವಾಗುತ್ತಿದೆ’ ಎಂದು ಹೇಳಿದರು.

‘ಬಿಬಿಎಂಪಿ ಆಯುಕ್ತರು ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಬೇಕು. ಜೊತೆಗೆ, ವೈಜ್ಞಾನಿಕವಾಗಿ ಕಸ ವಿಂಗಡಣೆ ಆಗುವವರೆಗೂ ವಾಹನಗಳನ್ನು ಕ್ವಾರಿಯತ್ತ ಸಂಚರಿಸಲು ಬಿಡುವುದಿಲ್ಲ’ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ಅಧಿಕಾರಿ ಭೇಟಿ ಇಂದು: ‘ಪಾಲಿಕೆಯ ಜಂಟಿ ಆಯುಕ್ತ (ಆರೋಗ್ಯ ಮತ್ತು ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್‌ ಖಾನ್‌, ಕೆಲಸ ನಿಮಿತ್ತ ದೆಹಲಿಗೆ ಹೋಗಿದ್ದಾರೆ. ಅವರ ಬದಲಿಗೆ ಹಿರಿಯ ಅಧಿಕಾರಿಯೊಬ್ಬರು ಬೆಳ್ಳಹಳ್ಳಿ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಲಿದ್ದಾರೆ’ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

*ಕಸ ವಿಲೇವಾರಿಗೆ ಪರ್ಯಾಯ ಕ್ವಾರಿಗಳನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಸದ್ಯ ಧರಣಿ ನಡೆಸುತ್ತಿರುವ ಗ್ರಾಮಸ್ಥರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವೆ.

– ಎನ್‌.ಮಂಜುನಾಥ್‌ ಪ್ರಸಾದ್, ಬಿಬಿಎಂಪಿ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.