
ಡಿಕೆಶಿ
ಬೆಂಗಳೂರು: ‘ಮುಂಬೈನಲ್ಲೂ ಮೂಲೆ, ಮೂಲೆಯಲ್ಲಿ ಕಸದ ರಾಶಿ ಬಿದ್ದಿತ್ತು. ಬೇರೆ, ಬೇರೆ ಕಡೆಯಲ್ಲಿಯೂ ಬಿದ್ದಿರಬಹುದು. ಅಲ್ಲಿಗೆ ಶುಕ್ರವಾರ ಹೋಗಿದ್ದಾಗ ನಾನೇ ಅದನ್ನು ನೋಡಿದ್ದೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
‘ಮುಂಬೈ ನಗರದಲ್ಲಿ ಪ್ರಮುಖ ರಸ್ತೆಗಳ ಕಾಮಗಾರಿ ಹಾಗೂ ನಿರ್ವಹಣೆ ನಡೆಸಿದವರಿಗೆ ಆ ರಸ್ತೆ ಬದಿಗಳ ಕಸ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ನೀಡಲಾಗಿದೆ ಎನ್ನುವ ಮಾಹಿತಿಯಿದೆ. ಬೆಂಗಳೂರಿನಲ್ಲೂ ಈ ಮಾದರಿ ಜಾರಿ ಮಾಡುವ ಕುರಿತು ಚರ್ಚೆ ಮತ್ತು ಆಲೋಚನೆ ನಡೆಸಲಾಗುತ್ತಿದೆ’ ಎಂದು ಸುದ್ದಿಗಾರರಿಗೆ ಶನಿವಾರ ಮಾಹಿತಿ ನೀಡಿದರು.
‘ರಸ್ತೆಬದಿ ಕಸ ಎಸೆದರೆ ಮತ್ತೆ ಅದು ಮರಳಿ ನಿಮ್ಮ ಮನೆಗೇ ಬರುತ್ತದೆ ಎನ್ನುವ ಎಚ್ಚರಿಕೆ ನೀಡುವುದರ ಜೊತೆಗೆ, ಇನ್ನೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸ್ ಇಲಾಖೆ ಹಾಗೂ ಪಾಲಿಕೆ ನೆರವಿನಿಂದ ಅಳವಡಿಸಲಾಗುವುದು’ ಎಂದರು.
ಕಸ ಸಂಗ್ರಹಣೆಗೆ ಸರಿಯಾದ ವ್ಯವಸ್ಥೆಯಿಲ್ಲ ಎನ್ನುವ ನಾಗರಿಕರ ಆರೋಪದ ಬಗ್ಗೆ ಸುದ್ದಿಗಾರರು ಕೇಳಿದಾಗ, ‘ಇದೆಲ್ಲವೂ ಸುಳ್ಳು. ಪ್ರತಿದಿನವೂ ಮನೆಗಳಲ್ಲಿ ಕಸ ಸಂಗ್ರಹ ನಡೆಯುತ್ತಿದೆ. ಸಮಸ್ಯೆ ಎದುರಾಗಿದ್ದರೆ ಸೂಚಿತ ದೂರವಾಣಿ ಸಂಖ್ಯೆಗೆ ದೂರು ನೀಡಲಿ. ಇಡೀ ದೇಶದಲ್ಲಿಯೇ ಅತ್ಯುತ್ತಮ ವ್ಯವಸ್ಥೆ ರೂಪಿಸಿದ್ದೇವೆ’ ಎಂದು ಶಿವಕುಮಾರ್ ಹೇಳಿದರು.
ತಂತ್ರಜ್ಞಾನ: ‘ಕನಿಷ್ಠ ಹತ್ತು ವರ್ಷ ಬಾಳಿಕೆ ಬರುವ ಡಾಂಬರ್ ರಸ್ತೆ ತಂತ್ರಜ್ಞಾನ ಬಳಸಿ ಹೈದರಾಬಾದ್‌ನಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಇದರ ಬಗ್ಗೆ ನಾವೂ ಪರಿಶೀಲನೆ ನಡೆಸುತ್ತಿದ್ದೇವೆ. ಕಾಮಗಾರಿ ನಡೆಸುವ ಯಂತ್ರಗಳು ಸಾಕಷ್ಟು ದುಬಾರಿಯಾದ ಕಾರಣಕ್ಕೆ ಕನಿಷ್ಠ ಹತ್ತು ಕಿಲೋಮೀಟರ್ ಕಾಮಗಾರಿಗೆ ಅವಕಾಶ ನೀಡಬೇಕು ಎಂದು ಈ ತಂತ್ರಜ್ಞಾನ ಹೊಂದಿರುವವರು ತಿಳಿಸಿದ್ದಾರೆ. ಇದರ ಬಗ್ಗೆ ಚಿಂತನೆ ಮಾಡಲಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.