ADVERTISEMENT

ಗಬ್ಬು ನಾರುವ ಉದ್ಯಾನಗಳು

ನಾಗರತ್ನ ಜಿ.
Published 29 ಜುಲೈ 2019, 19:45 IST
Last Updated 29 ಜುಲೈ 2019, 19:45 IST
ಸಜ್ಜನ್‌ರಾವ್‌ ವೃತ್ತದ ಉದ್ಯಾನದಲ್ಲಿ ಮೊಬೈಲ್‌ ಕಣ್ಣಿಗೆ ಬಿದ್ದ ಅವಸ್ಥೆ, ತೆರೆದ ಸ್ಥಿತಿಯಲ್ಲಿರುವ ವಿದ್ಯುತ್‌ ಸಂಪರ್ಕ ವ್ಯವಸ್ಥೆ..
ಸಜ್ಜನ್‌ರಾವ್‌ ವೃತ್ತದ ಉದ್ಯಾನದಲ್ಲಿ ಮೊಬೈಲ್‌ ಕಣ್ಣಿಗೆ ಬಿದ್ದ ಅವಸ್ಥೆ, ತೆರೆದ ಸ್ಥಿತಿಯಲ್ಲಿರುವ ವಿದ್ಯುತ್‌ ಸಂಪರ್ಕ ವ್ಯವಸ್ಥೆ..   

ವಾಯುವಿಹಾರ,ವಿಶ್ರಾಂತಿಗೆಂದು ಬರುವ ವೃದ್ಧರು ಪಾರ್ಕ್‌ನ ವೈಖರಿ ಕಂಡು ಬೇಸತ್ತಿದ್ದಾರೆ. ನಿತ್ಯ ಹತ್ತಾರು ಮಂದಿ ವಿಶ್ರಾಂತಿ ಪಡೆಯುವ ಉದ್ಯಾನಗಳಲ್ಲಿ ನಿರ್ವಹಣೆ ಕಾರ್ಯ ನಿಂತ ನೀರಾಗಿದೆ.

ಉದ್ಯಾನ ನಗರಿ ಬೆಂಗಳೂರಿನಲ್ಲಿ ಉದ್ಯಾನವನ ಗಳಿಗೇನು ಕಡಿಮೆ ಇಲ್ಲ. ಗಲ್ಲಿಗೊಂದು ಕೇರಿಗೊಂದು ಎಂಬಂತೆ ಪಾರ್ಕ್‌ಗಳಿವೆ. ಆದರೆ ಬಹುತೇಕ ಉದ್ಯಾನವನಗಳು ಅವ್ಯವಸ್ಥೆಯಲ್ಲಿರುವುದು ಅರಗಿಸಿಕೊಳ್ಳಲಾಗದ ಸಂಗತಿಯಾಗಿದೆ.

ಅನೈತಿಕ ಚಟುವಟಕೆಗಳ ಆಗರ

ADVERTISEMENT

ಎಸ್‌.ಸಜ್ಜನ್‌ರಾವ್‌ ಸರ್ಕಲ್‌ನಲ್ಲಿರುವ ವಿಭಾಗ 47, ವಿವಿಪುರಂ ಉದ್ಯಾನವು ತೀರಾ ಚಿಂತಾಚನಕ ಸ್ಥಿತಿಯಲ್ಲಿದೆ. ಹಸಿರಿನಿಂದ ಕೂಡಬೇಕಾದ ಈ ಉದ್ಯಾನವನವು ಕಸಕಡ್ಡಿಯಿಂದ ತುಂಬಿದ್ದು ಗಬ್ಬು ನಾರುತ್ತಿದೆ. ರಾತ್ರಿ ವೇಳೆ ಈ ಪಾರ್ಕ್‌ ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತದೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ. ಸುಮಾರು ವರ್ಷಗಳ ಹಿಂದೆ ಈ ಪಾರ್ಕ್‌ನಲ್ಲಿ ಡಾ.ರಾಜ್‌ಕುಮಾರ್‌ ಗಿಡ ನೆಟ್ಟಿದ್ದರು ಎಂದು ಹೇಳಲಾಗುತ್ತದೆ. ಹಿರಿಯರಿಗೆ ವಿಶ್ರಾಂತಿ ತಾಣವಾಗಿದ್ದ, ಮಕ್ಕಳಿಗೆ ಆಟದ ಸ್ಥಳವಾಗಿದ್ದ ಸ್ವಚ್ಛ ಉದ್ಯಾನ ಇತ್ತೀಚೆಗೆ ನೈರ್ಮಲ್ಯದಿಂದ ಕೂಡಿದೆ. ಅಲ್ಲಿನ ಕಸ ರಾಶಿ ರಾಶಿಯಾಗಿ ಒಂದು ಮೂಲೆಯಲ್ಲಿ ಶೇಖರಣೆಯಾಗಿದೆ. ತಿಂಡಿ ತಿನಿಸುಗಳನ್ನು ತಿಂದು ಎಲ್ಲೆಂದರಲ್ಲಿ ಹಾಕುವ ಪರಿಪಾಠವಿದೆ. ಕಸದ ಬುಟ್ಟಿಗಳ ವ್ಯವಸ್ಥೆಯೇ ಇಲ್ಲ.

24 ಗಂಟೆಯೂ ತೆರೆದಿರುವ ಉದ್ಯಾನ

ಸಿಬ್ಬಂದಿಗಳಿಲ್ಲದ ಈ ಉದ್ಯಾನ ಯಾವ ಸಮಯದಲ್ಲಿ ಬಂದರೂ ತೆರೆದಿರುತ್ತದೆ. ಸಿಬ್ಬಂದಿಯ ಕೊರತೆಯನ್ನು ಇದು ಸೂಚಿಸುತ್ತದೆ. ‘ಈ ಮೊದಲು ಇದ್ದ ಸಿಬ್ಬಂದಿಗಳು ಸೂಕ್ತ ಸಮಯದಲ್ಲಿ ಸಂಬಳ ಸಿಗದೆ ಕೆಲಸ ತೊರೆ ದಿದ್ದಾರೆ. ಕಸದ ರಾಶಿಯನ್ನು ಮನ ಬಂದಂತೆ ತೆಗೆಯುತ್ತಾರೆ. ಏನನ್ನೂ ಹೇಳಿಕೊಳ್ಳದ ಸ್ಥಿತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ’ ಎನ್ನುತ್ತಾರೆ ಲಕ್ಷ್ಮಿ.

ಇವರು ಸುಮಾರು ಎರಡು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಮತ್ತೊಬ್ಬರನ್ನು ಕೆಲಸಕ್ಕೆ ತೆಗೆದುಕೊಳ್ಳುವಂತೆ ಅಲ್ಲಿನ ಅಧಿಕಾರಿಗಳಿಗೆ ಕೇಳಿದರೆ ಅವರು ಅಸಡ್ಡೆ ಮಾತುಗಳನ್ನಾಡಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ಮದ್ಯಪಾನ, ಧೂಮಪಾನ, ಪ್ಲಾಸ್ಟಿಕ್‌, ಕಸ ಎಸೆಯುವುದು, ಮರಗಿಡಗಳಿಗೆ ಹಾನಿ ಮಾಡುವುದು, ಹೀಗೆ ಹತ್ತಾರು ನಿಷೇಧಗಳನ್ನು ತಿಳಿಸುವ ಉದ್ದದ ಬೋರ್ಡ್‌ ಇದೆ. ಆದರೂ ಎಲ್ಲಾ ರಿತಿಯಲ್ಲೂ ಹಾನಿ ಅವ್ಯಾಹತವಾಗಿ ನಡೆಯುತ್ತಿದೆ.

ಉದ್ಯಾನದಲ್ಲಿಯೇ ಟ್ರಾನ್ಸ್‌ಫಾರ್ಮರ್‌

ಉದ್ಯಾನದಲ್ಲಿ ಕೂರಲು ಇರುವ ಆಸನದ ಪಕ್ಕದಲ್ಲಿಯೇ ಟ್ರಾನ್ಸ್‌ಫಾರ್ಮರ್‌ ಪೆಟ್ಟಿಗೆಯನ್ನು ಇರಿಸಲಾಗಿದೆ. ಈ ಪೆಟ್ಟಿಗೆ ತೆರೆದ ಸ್ಥಿತಿಯಲ್ಲಿದೆ. ವಯರ್‌ಗಳು ಪೆಟ್ಟಿಗೆಯಿಂದ ಹೊರಚಾಚಿಕೊಂಡಿವೆ. ಮಳೆಬಂದಾಗ ಸಾಕಷ್ಟು ಅಪಾಯ ಎದುರಾಗುವ ಸಂಭವವಿದ್ದರೂ ಅಲ್ಲಿನ ಸಿಬ್ಬಂದಿಗಳಾಗಲೀ ಅಥವಾ ಸಾರ್ವಜನಿಕರಾಗಲೀ ದೂರು ನೀಡುವ ಗೋಜಿಗೆ ಹೋಗಿಲ್ಲ.

‘ಮನೆಯ ಬಳಿ ಮಕ್ಕಳಿಗೆ ಸೂಕ್ತ ಆಟದ ಮೈದಾನ ಇಲ್ಲದ ಕಾರಣ ಮಕ್ಕಳನ್ನು ಈ ಪಾರ್ಕ್‌ಗೆ ಕರೆದುಕೊಂಡು ಬರುತ್ತೇವೆ. ಇಲ್ಲಿನ ಅವ್ಯವಸ್ಥೆ ಕಂಡು ಸುಮಾರು ಬಾರಿ ದೂರು ಸಲ್ಲಿಸಿದ್ದೇವೆ ಆದರೂ ಪಾರ್ಕ್‌ ಅಭಿವೃದ್ಧಿ ಕಂಡಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಶಿವು.

‘ಉದ್ಯಾನವನ ಪ್ರಾರಂಭವಾಗಿ ಸುಮಾರು 40–50 ವರ್ಷ ಕಳೆಯುತ್ತಿದೆ. ಮೊದಲು ಇಲ್ಲಿನ ನಿರ್ವಹಣೆ ಸರಿಯಾಗಿತ್ತು. ನಿತ್ಯವೂ ಸ್ವಚ್ಛ ಮಾಡುತ್ತಿದ್ದರು. ಇತ್ತೀಚೆಗೆ ಈ ಪಾರ್ಕ್‌ ಸ್ವಚ್ಛಗೊಳಿಸುವ ಕಾರ್ಯ ನಿಂತಿದೆ. ಕುಡುಕರಿಗೆ ನಿದ್ರಿಸಲು ಇದೊಂದು ಹಾಸಿಗೆ. ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದರೂ ಅವರು ಬಂದು ನೋಡಿ ಹೋಗುತ್ತಾರೆ. ಅದಾದ ಮೇಲೆ ಮತ್ತೆ ಇಲ್ಲಿಗೆ ಬರುವುದಿಲ್ಲ, ಕಸವನ್ನೂ ತೆಗೆಯುವುದಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಕೆಂಪಯ್ಯ.

ಅನಿವಾಸಿಗಳ ಬಿಡಾರ

ಊರು ಬಿಟ್ಟು ಬಂದವರ, ವಾಸಮಾಡಲು ಮನೆಗಳಿಲ್ಲದವರ ವಾಸಸ್ಥಾನ ಕೆ.ಆರ್‌ ರಸ್ತೆಯಲ್ಲಿರುವ ಶ್ರೀ ಕೃಷ್ಣರಾಜೇಂದ್ರ ಸಿಲ್ವರ್‌ ಜ್ಯುಬಿಲಿ ಉದ್ಯಾನ. ಇಲ್ಲಿನ ಬಹುತೇಕ ಕುರ್ಚಿಗಳು ಮತ್ತು ಮಂಟಪ ನಿರಾಶ್ರಿತರು ಮಲಗುವ ಸ್ಥಳವಾಗಿದೆ. ಯಾರ ಅಪ್ಪಣೆಯೂ ಇಲ್ಲದೆ ಪಾರ್ಕಿನ ಒಳಗೆ ಅಲ್ಲಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ಬಿಡಾರ ಹೂಡಿದ್ದಾರೆ. ನಿತ್ಯ ಕರ್ಮಗಳೂ ಇಲ್ಲಿಯೇ ನಡೆಯುತ್ತವೆ ಎಂದರೆ ಆಶ್ಚರ್ಯವಿಲ್ಲ.

ಈ ಉದ್ಯಾನದಲ್ಲಿ ವಾಸವಾಗಿರುವ ಸುಮಾರು 10 ರಿಂದ 15 ಮಂದಿ ತಮಿಳುನಾಡಿನ ಮೂಲದವರು ಎಂದು ಹೇಳಲಾಗುತ್ತದೆ. ಇವರು ಸುಮಾರು 10 ವರ್ಷಗಳಿಂದ ಹುಲ್ಲಿನ ಹಗ್ಗ ತಯಾರಿಸಿ ಅದನ್ನು ಮಾರಿ ಜೀವನ ಸಾಗಿಸುತ್ತಿದ್ದಾರೆ.

ಪಾರ್ಕ್‌ ಸಮೀಪದ ಪಾದಚಾರಿ ಮಾರ್ಗದಲ್ಲಿ ಹಾದು ಹೋಗುವ ಪುಡಾರಿಗಳು ಅಲ್ಲಿಯೇ ಮೂತ್ರ ವಿಸರ್ಜನೆ ಮಾಡಿ ಹೋಗುತ್ತಾರೆ. ಅಲ್ಲಿ ಅಲಂಕಾರಿಕವಾಗಿ ನಿರ್ಮಿಸಲಾದ ಕಾರಂಜಿಯು ನೀರಿಲ್ಲದೆ ಬತ್ತಿಹೋಗಿದೆ.

ರಕ್ಷಣೆಗೆ ನಾಯಿಗಳಿವೆ

ಇಲ್ಲಿ ವಾಸವಾಗಿರುವ ಜನರು ತಮ್ಮ ಸರಕುಗಳನ್ನು ಉದ್ಯಾನದ ಕಾಂಪೌಂಡ್‌ ಬಳಿ ಪರದೆಯಿಂದ ನಿರ್ಮಿಸಿರುವ ಗುಡಿಸಲು ಮತ್ತು ಮಂಟಪದ ಬಳಿ ಇರಿಸಿದ್ದಾರೆ. ಇವರು ಕೆಲಸದಲ್ಲಿ ತೊಡಗಿದ್ದಾಗ ತಮ್ಮ ವಸ್ತುಗಳಿಗೆ ರಕ್ಷಣೆ ಬೇಕೆಂದು ನಾಯಿಗಳನ್ನು ಸಾಕಿಕೊಂಡಿದ್ದಾರೆ. ಆ ಗುಡಿಸಲಿನ ಸಮೀಪ ಹೋಗುತ್ತಿದ್ದಂತೆ ಅವು ಜೋರು ಬೊಗಳಲು ಪ್ರಾರಂಭಿಸುತ್ತವೆ. ಹೀಗಾಗಿ ವಿಹಾರಕ್ಕೆ ಹೋಗಲೂ ಜನ ಹಿಂಜರಿಯುತ್ತಾರೆ.

‘ನಾನು ಇಲ್ಲಿಗೆ ಕೆಲಸಕ್ಕೆ ಸೇರಿ ಸುಮಾರು ಒಂದು ವರ್ಷ ಪೂರೈಸುತ್ತಿದೆ. ಇಲ್ಲಿಗೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇಬ್ಬರು ಉದ್ಯಾನ ಸ್ವಚ್ಛತಾ ಸಿಬ್ಬಂದಿಗಳಿದ್ದಾರೆ. ಆದರೂ ಪೂರ್ಣ ಪ್ರಮಾನದಲ್ಲಿ ಇಲ್ಲಿನ ನಿರ್ವಹಣೆ ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಸಿಬ್ಬಂದಿ ರಸೂನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.