ಬೆಂಗಳೂರು: ‘ಗಾರ್ಮೆಂಟ್ಸ್‌ನಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಪಡಿಸುವಲ್ಲಿ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ’ ಎಂದು ಗಾರ್ಮೆಂಟ್ ಆ್ಯಂಡ್ ಟೆಕ್ಸ್‌ಟೈಲ್ ವರ್ಕರ್ಸ್ ಯೂನಿಯನ್‌ನ ಅಧ್ಯಕ್ಷೆ ಆರ್. ಪ್ರತಿಭಾ ಆರೋಪಿಸಿದರು.
ಭಾನುವಾರ ನಡೆದ ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರ ಸಮಾವೇಶದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಸುಮಾರು ನಾಲ್ಕು ಲಕ್ಷ ಮಹಿಳೆಯರು ಗಾರ್ಮೆಂಟ್ಸ್ ಉದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯ ಸರ್ಕಾರ ಇವರಿಗೆ ತಿಂಗಳಿಗೆ ಕನಿಷ್ಠ ₹12,800 ವೇತನ ನಿಗದಿಪಡಿಸಿದೆ. 45 ವರ್ಷಗಳಿಂದ ಪರಿಷ್ಕರಣೆಯೇ ಆಗಿಲ್ಲ. ಇದರಲ್ಲಿ ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಗಾರ್ಮೆಂಟ್ಸ್ ಕಾರ್ಮಿಕರಿಗೆ ಒಂದು ತಿಂಗಳಿಗೆ ₹42 ಸಾವಿರ ಕನಿಷ್ಠ ವೇತನ ನಿಗದಿಪಡಿಸಬೇಕು’ ಎಂದು ಆಗ್ರಹಿಸಿದರು.
‘ಮಹಿಳೆಯರ ದುಡಿಮೆಗೆ ಸರ್ಕಾರ ಹಾಗೂ ಬಂಡವಾಳಶಾಹಿ ವ್ಯವಸ್ಥೆ ಬೆಲೆ ಕೊಡುತ್ತಿಲ್ಲ. ಮಹಿಳೆಯರ ಆದಾಯ ಪೂರಕ ಆದಾಯವೆಂದು ಪರಿಗಣಿಸಿ, ಗಾರ್ಮೆಂಟ್ಸ್ ಮಾಲೀಕರ ಒತ್ತಡಕ್ಕೆ ಮಣಿದು, ರಾಜ್ಯ ಸರ್ಕಾರ ವೇತನ ಪರಿಷ್ಕರಣೆ ಮಾಡುತ್ತಿಲ್ಲ. 2025ರ ಏಪ್ರಿಲ್‌ನಲ್ಲಿ ಇತರೆ ಅನುಸೂಚಿತ ಉದ್ಯಮ ಕಾರ್ಮಿಕರಿಗೆ ತಿಂಗಳಿಗೆ ₹23 ಸಾವಿರ ಕನಿಷ್ಠವೇತನ ನಿಗದಿಪಡಿಸಿದೆ. ಆದರೆ, ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಇದು ಅನ್ವಯವಾಗುತ್ತಿಲ್ಲ’ ಎಂದು ದೂರಿದರು.
‘ರಾಜ್ಯ ಸರ್ಕಾರ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರಲು ಹೊರಟಿರುವುದು ಮಹಿಳಾ ಕಾರ್ಮಿಕರಿಗೆ ಮಾರಕವಾಗಿದೆ. ರಾತ್ರಿ ಪಾಳಿಯಲ್ಲಿ ದುಡಿಸಲು ಮಾಲೀಕರಿಗೆ ಷರತ್ತುರಹಿತವಾಗಿ ಅವಕಾಶ ನೀಡಿರುವುದು ಖಂಡನೀಯ. ಕೆಲಸದ ಅವಧಿಯನ್ನು 8ರಿಂದ 10 ಗಂಟೆಗೆ ವಿಸ್ತರಿಸುವುದು ಅಪಾಯಕಾರಿಯಾಗಿದೆ. ಇದರಿಂದ ಮಹಿಳೆಯರ ಮೇಲೆ ದೌರ್ಜನ್ಯವೆಸಗಲು ಹಾಗೂ ಕಿರುಕುಳ ನೀಡಲು ದಾರಿ ಮಾಡಿಕೊಡುತ್ತದೆ’ ಎಂದು ಗಾರ್ಮೆಂಟ್ಸ್‌ನಲ್ಲಿ ಕಾರ್ಯನಿರ್ವಹಿಸುವ ರಂಗಮ್ಮ, ಚಿಕ್ಕಮ್ಮ, ರೇಣುಕಾ ತಿಳಿಸಿದರು.
‘ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಕಾಯ್ದೆಗಳನ್ನು ರದ್ದುಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಲೇಖಕಿ ದು.ಸರಸ್ವತಿ, ಕಾರ್ಮಿಕ ಮುಖಂಡರಾದ ಕ್ಲಿಫ್ಟನ್ ಡಿ. ರೋಜಾರಿಯೊ, ಮೈತ್ರೇಯಿ ಕೃಷ್ಣನ್, ನಿರ್ಮಲಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.