ADVERTISEMENT

‘ಪ್ರಸಕ್ತ ಸಾಲಿನಲ್ಲಿ 2.50 ಲಕ್ಷ ಅನಿಲ ಸಂಪರ್ಕ’

ಇಂಡಿಯನ್ ಆಯಿಲ್ ಸಂಸ್ಥೆಯ ಡಿ.ಎಲ್. ಪ್ರಮೋದ್

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 4:16 IST
Last Updated 25 ಅಕ್ಟೋಬರ್ 2019, 4:16 IST
   

ಬೆಂಗಳೂರು: ‘ಪ್ರಸಕ್ತ ಸಾಲಿನಲ್ಲಿ ರಾಜ್ಯದಾದ್ಯಂತ ಒಟ್ಟು 2.50 ಲಕ್ಷ ಅನಿಲ ಸಂಪರ್ಕಗಳನ್ನು ಕಲ್ಪಿಸುವ ಯೋಜನೆಯನ್ನು ಸಂಸ್ಥೆ ಹಮ್ಮಿಕೊಂಡಿದೆ’ ಎಂದು ಇಂಡಿಯನ್ ಆಯಿಲ್ ಸಂಸ್ಥೆಯ ಕರ್ನಾಟಕ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಎಲ್. ಪ್ರಮೋದ್ ತಿಳಿಸಿದರು.

ನಗರದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿ,‘ಎಲ್‍ಪಿಜಿ ಬಾಟ್ಲಿಂಗ್ ಘಟಕದಲ್ಲಿ ಪ್ರತಿ ನಿತ್ಯ 35 ಸಾವಿರ ಸಿಲಿಂಡರ್‌ಗಳನ್ನು ಮರು ಭರ್ತಿ (ರೀಫಿಲ್) ಮಾಡಲಾಗುತ್ತಿದೆ. ಈಗಾಗಲೇ ರಾಜ್ಯದಾದ್ಯಂತ 2.38 ಲಕ್ಷ ಅನಿಲ ಸಂಪರ್ಕಗಳನ್ನು ಕಲ್ಪಿಸಲಾಗಿದೆ. ಈ ಪೈಕಿ 1.47 ಲಕ್ಷ ಸಂಪರ್ಕಗಳನ್ನು ಉಜ್ವಲ ಯೋಜನೆ ಅಡಿಯಲ್ಲಿ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು 1.76 ಕೋಟಿ ಎಲ್‍ಪಿಜಿ ಗ್ರಾಹಕರಿದ್ದು, ಇದರಲ್ಲಿ ಇಂಡಿಯನ್ ಆಯಿಲ್ ಸಂಸ್ಥೆಯ ಗ್ರಾಹಕರ ಸಂಖ್ಯೆ 75 ಲಕ್ಷದಷ್ಟಿದೆ’ ಎಂದರು.

‘ಬಿಎಸ್-6 ಇಂಧನ ತಯಾರಿ ಕಾರ್ಯ ಅಂತಿಮ ಹಂತದಲ್ಲಿದ್ದು, 2020ಕ್ಕೆ ಬಿಎಸ್-6 ಇಂಧನವನ್ನು ಮಾರುಕಟ್ಟೆಗೆ ಪರಿಚಯಿಸಲಾಗುವುದು.ಸದ್ಯ ಸಂಸ್ಥೆಯು ಬಿಎಸ್-4 ಇಂಧನವನ್ನು ಪೂರೈಕೆ ಮಾಡುತ್ತಿದೆ. ದೇವನಗೊಂದಿ ಟರ್ಮಿನಲ್‍ನಲ್ಲಿ ಭದ್ರತೆ ಮತ್ತು ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಇಂಧನ ಭರ್ತಿ ಮಾಡುವ ಎಲ್ಲ ಪ್ರಕ್ರಿಯೆಗಳನ್ನು ಸ್ವಯಂ ಚಾಲಿತ ವ್ಯವಸ್ಥೆಯನ್ನಾಗಿ ಪರಿವರ್ತಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

50 ಲಕ್ಷ ಟನ್‍ ಇಂಧನ ಮಾರಾಟ: ‘ಸಂಸ್ಥೆಯು ರಾಜ್ಯದಲ್ಲಿ ವಾರ್ಷಿಕ 50 ಲಕ್ಷ ಟನ್‍ಗಳಷ್ಟು ಇಂಧನವನ್ನು ಮಾರಾಟ ಮಾಡುತ್ತಿದೆ. ದೇವನಗೊಂದಿ ಟರ್ಮಿನಲ್ ಮತ್ತು ಬಾಟ್ಲಿಂಗ್ ಘಟಕದಲ್ಲಿ ಪೆಟ್ರೋಲ್, ಡೀಸೆಲ್, ವಿಮಾನಗಳಿಗೆ ಬಳಸುವ ಇಂಧನ ಮತ್ತು ಎಲ್‍ಪಿಜಿ ಉತ್ಪನ್ನಗಳನ್ನು ಪೂರೈಕೆ ಮಾಡಲಾಗುತ್ತಿದೆ. ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ದಾವಣಗೆರೆ, ಚಿತ್ರದುರ್ಗ, ಕೋಲಾರ, ಬಳ್ಳಾರಿ, ಮಂಡ್ಯ, ಮೈಸೂರು ಸೇರಿದಂತೆ ತಮಿಳುನಾಡು ಮತ್ತು ಆಂಧ್ರಪ್ರದೇಶದ ಕೆಲವು ಜಿಲ್ಲೆಗಳಿಗೆ ಕೂಡಾ ಇಂಧನ ಪೂರೈಕೆಯಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.