ADVERTISEMENT

ಅನಿಲ ಸೋರಿಕೆಯಿಂದ ಬೆಂಕಿ; ಇಬ್ಬರು ಬಾಲಕರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 14:44 IST
Last Updated 12 ಸೆಪ್ಟೆಂಬರ್ 2021, 14:44 IST
ಅನಿಲ ಸಿಲಿಂಡರ್
ಅನಿಲ ಸಿಲಿಂಡರ್   

ಬೆಂಗಳೂರು: ಕಲಾಸಿಪಾಳ್ಯ ಠಾಣೆ ವ್ಯಾಪ್ತಿಯ ಮಳಿಗೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಅವಘಡ ಸಂಭವಿಸಿದ್ದು, ಇಬ್ಬರು ಬಾಲಕರು ಗಾಯಗೊಂಡಿದ್ದಾರೆ.

ಕುಂಬಾರ ಓಣಿಯಲ್ಲಿರುವ ‘ಮನ್ಸೂರ್ ಎಂಟರ್‌ಪ್ರೈಸಸ್’ ವಾಣಿಜ್ಯ ಉಪಯೋಗಿ ಅಡುಗೆ ಅನಿಲ ಸಿಲಿಂಡರ್ ಮಾರಾಟ ಮಳಿಗೆಯಲ್ಲಿ ಶನಿವಾರ ಮಧ್ಯಾಹ್ನ ಈ ಅವಘಡ ಸಂಭವಿಸಿದೆ. ಗಾಯಗೊಂಡಿರುವ ಬಾಲಕರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಮಳಿಗೆಯ ಪಕ್ಕದ ಮನೆಯಲ್ಲಿ ಬಾಲಕರು ವಾಸವಿದ್ದರು. ಮಳಿಗೆ ಮಾಲೀಕ ಇಮ್ರಾನ್, ಕೆಲಸ ನಿಮಿತ್ತ ಹೊರಗಡೆ ಹೋಗಿದ್ದರು. ಮನೆ ಎದುರು ಆಟವಾಡುತ್ತಿದ್ದ ಬಾಲಕರು, ಮಳಿಗೆಯೊಳಗೆ ಹೋಗಿದ್ದರು. ಸಿಲಿಂಡರ್ ಮುಚ್ಚಳವನ್ನು ತೆರೆದಿದ್ದರು. ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಬೆಂಕಿ ಕಂಡ ಬಾಲಕರು ಕೂಗಾಡಿದ್ದರು. ರಕ್ಷಣೆಗೆ ಹೋಗಿದ್ದ ಸ್ಥಳೀಯರು, ಬಾಲಕರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ’ ಎಂದೂ ತಿಳಿಸಿವೆ.

ಮಾಲೀಕನ ವಿರುದ್ಧ ಪ್ರಕರಣ: ‘ನಿರ್ಲಕ್ಷ್ಯ ವಹಿಸಿದ್ದ ಆರೋಪದಡಿ ಮಳಿಗೆ ಮಾಲೀಕ ಇಮ್ರಾನ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಾಲಕರಿಬ್ಬರು ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ನಂತರ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದೂ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.