ADVERTISEMENT

ಗೌರಿ ಲಂಕೇಶ್ ಹತ್ಯೆ: ವಿಶೇಷ ನ್ಯಾಯಾಲಯ ಸ್ಥಾಪನೆಗೆ ಒತ್ತಾಯ

ಗೌರಿ ಫೈಲ್ಸ್‌– ಪತ್ರಕರ್ತೆಯೊಬ್ಬರ ಹತ್ಯೆ, ಅದರ ಪರಿಣಾಮಗಳ ಕುರಿತ ಸಂವಾದ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 23:30 IST
Last Updated 25 ಜುಲೈ 2025, 23:30 IST
ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಸಂವಾದದಲ್ಲಿ ಲೇಖಕ ರೋಲೋ ರೋಮಿಗ್‌ ಮಾತನಾಡಿದರು. ಪುಷ್ಪಮಾಲಾ ಮತ್ತು ಶಿವಸುಂದರ ಉಪಸ್ಥಿತರಿದ್ದರು. ಪ್ರಜಾವಾಣಿ ಚಿತ್ರ
ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಸಂವಾದದಲ್ಲಿ ಲೇಖಕ ರೋಲೋ ರೋಮಿಗ್‌ ಮಾತನಾಡಿದರು. ಪುಷ್ಪಮಾಲಾ ಮತ್ತು ಶಿವಸುಂದರ ಉಪಸ್ಥಿತರಿದ್ದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕೆಂಬುದು ಅವರ ಅಭಿಮಾನಿಗಳು, ಹಿತೈಷಿಗಳು ಮತ್ತು ಒಡನಾಡಿಗಳ ಒತ್ತಾಯವಾಗಿದೆ’ ಎಂದು ಅಂಕಣಕಾರ ಶಿವಸುಂದರ್ ಹೇಳಿದರು.

ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಶುಕ್ರವಾರ ರೋಲೋ ರೋಮಿಗ್ ಅವರ ‘ಐ ಆ್ಯಮ್ ಆನ್‌ ದಿ ಹಿಟ್ ಲಿಸ್ಟ್‌’ಎಂಬ ಪುಸ್ತಕ ಕುರಿತು ಹಾಗೂ ಗೌರಿ ಫೈಲ್ಸ್‌– ಪತ್ರಕರ್ತೆಯೊಬ್ಬರ ಹತ್ಯೆ ಮತ್ತು ಅದರ ಪರಿಣಾಮಗಳ ಕುರಿತು ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

‘2017ರಲ್ಲಿ ಗೌರಿ ಲಂಕೇಶ್ ಹತ್ಯೆಯಾಯಿತು. 18 ಆರೋಪಿಗಳನ್ನು ಬಂಧಿಸಿದ್ದು,  ಒಬ್ಬ ಆರೋಪಿ ಮಾತ್ರ ತಲೆಮರೆಸಿಕೊಂಡಿದ್ದಾನೆ. 2022ರಲ್ಲಿ ವಿಚಾರಣೆ ಆರಂಭವಾಯಿತು. ವಿಚಾರಣೆ ವಿಳಂಬವಾದ ಕಾರಣ ಎಲ್ಲಾ ಆರೋಪಿಗಳಿಗೂ ಜಾಮೀನು ದೊರೆತಿದ್ದು, ಈ ಪೈಕಿ ಕೆಲ ಆರೋಪಿಗಳು ಸಾಕ್ಷಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ವಿಚಾರಣೆ ತ್ವರಿತವಾಗಿ ನಡೆಯಲು ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡುವಂತೆ ಹೈಕೋರ್ಟ್‌ಗೆ ಸರ್ಕಾರ ಪತ್ರ ಬರೆದಿತ್ತು. ಆದರೆ ನ್ಯಾಯಾಲಯ ಇದನ್ನು ಪರಿಗಣಿಸಲಿಲ್ಲ. 80 ಸಾಕ್ಷಿಗಳ ವಿಚಾರಣೆ ಬಾಕಿ ಇದೆ. ತಿಂಗಳಲ್ಲಿ 4–5 ದಿನ ವಿಚಾರಣೆ ನಡೆಯುತ್ತದೆ. ನ್ಯಾಯ ಸಿಗುವುದು ವಿಳಂಬವಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಲೇಖಕ ರೋಲೋ ರೋಮಿಗ್‌ ಮಾತನಾಡಿ, ‘ದಕ್ಷಿಣ ಭಾರತದಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದರಿಂದ ಗೌರಿ ಲಂಕೇಶ್‌ ಹತ್ಯೆ ಕುರಿತು ಪುಸ್ತಕ ಬರೆದೆ. ಅವರು ತಮಗೆ ಅನಿಸಿದ್ದನ್ನು ನೇರವಾಗಿ ಬರೆಯುತ್ತಿದ್ದರು. ಸಮಾಜದಲ್ಲಿ ಬದಲಾವಣೆಗೆ ಕಾರಣರಾಗಿದ್ದರು. ಹಲವು ಗ್ರಂಥಾಲಯಗಳಿಗೆ ಭೇಟಿ ನೀಡಿ ಅನುವಾದಕರ ನೆರವು ಪಡೆದು ಅವರ ಕುರಿತು ಪ್ರಕಟಗೊಂಡಿದ್ದ ಲೇಖನಗಳನ್ನು ಓದಿ, ಮಾಹಿತಿ ಪಡೆದೆ. ಆಕೆಯ ಹತ್ಯೆಯ ಸುದ್ದಿ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲೂ ಪ್ರಕಟಗೊಂಡಿತು’ ಎಂದು ವಿವರಿಸಿದರು.

‘ಭಾರತ ದೇಶದಲ್ಲಿ ಮುಸ್ಲಿಮರು ದಾಳಿಗೆ ಒಳಗಾಗುತ್ತಿದ್ದಾರೆ. ವಿಶೇಷವಾಗಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮುಸ್ಲಿಂ ಸಮುದಾಯದ ಮೇಲೆ ದಾಳಿ ಮಾಡುತ್ತಿದ್ದಾರೆ. ಮುಸ್ಲಿಂ ಪರ ಧ್ವನಿ ಎತ್ತುವ ಕೆಲಸ ಕೆಲವರು ಮಾತ್ರ ಮಾಡುತ್ತಿದ್ದು, ಅವರು ಟೀಕೆ ಒಳಗಾಗುತ್ತಿದ್ದಾರೆ. ಧ್ವನಿ ಎತ್ತುವ ಕೆಲಸವನ್ನು ಪತ್ರಕರ್ತರು  ಮಾಡಬೇಕು. ಗೌರಿ ಅದನ್ನೇ ಮಾಡಿದ್ದರು’ ಎಂದರು.

ಗೌರಿ ಲಂಕೇಶ್ ಅವರ ಜತೆಗಿನ ಒಡನಾಟಗಳನ್ನು ಸ್ಮರಿಸಿಕೊಂಡ ಕಲಾವಿದೆ ಎನ್.ಪುಷ್ಪಮಾಲಾ,  ‘ನಾವಿಬ್ಬರೂ ಒಟ್ಟಿಗೆ ಸಭೆ, ಸಮಾರಂಭಗಳಿಗೆ ಹೋಗುತ್ತಿದ್ದೆವು. ಎಲ್ಲರೂ ಅಂದುಕೊಂಡಂತೆ ಗೌರಿ ನಾಸ್ತಿಕಳಲ್ಲ. ಅವರ ಮನೆಯ ಪೂಜಾ ಕೊಠಡಿಯಲ್ಲಿ ಶಿವ ಲಿಂಗವನ್ನು ಪೂಜೆ ಮಾಡುತ್ತಿದ್ದಳು. ಅವರ ತಂದೆಯ ನಿಧನದ ಬಳಿಕ ಪತ್ರಿಕೆ ನಡೆಸುವ ಜವಾಬ್ದಾರಿ ಹೊತ್ತುಕೊಂಡಳು. ಪತ್ರಿಕೆ ನಷ್ಟದಲ್ಲಿದ್ದರಿಂದ  ಸಿಬ್ಬಂದಿಗೆ ಸಂಬಳ ನೀಡಲು ಕಷ್ಟವಾಗಿತ್ತು. ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸಿದ್ದಳು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.