
ಬೆಂಗಳೂರು: ‘ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತರು ನಗರ ಪಾಲಿಕೆಗಳ ಕಂದಾಯ ವಿಭಾಗದ ಅಧಿಕಾರಿ– ಸಿಬ್ಬಂದಿಗೆ ಮಾನಸಿಕ ಹಿಂಸೆ ನೀಡಿ, ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದಾರೆ. ಅವರು ಕ್ಷಮೆ ಕೇಳುವವರೆಗೂ ವಿಡಿಯೊ ಸಂವಾದಕ್ಕೆ ಹಾಜರಾಗುವುದು ಬೇಡ’ ಎಂದು ಅಧಿಕಾರಿ/ನೌಕರರು ತೀರ್ಮಾನಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಂಗಳವಾರ ನಡೆದ ಸಭೆಯಲ್ಲಿ ಈ ಕುರಿತು ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ.
‘ಪಾಲಿಕೆಯ ಉಪ ಆಯುಕ್ತರು, ಕಂದಾಯ ಅಧಿಕಾರಿ, ಸಹ ಕಂದಾಯ ಅಧಿಕಾರಿ, ಮೌಲ್ಯಮಾಪಕರು, ಕಂದಾಯ ಪರಿವೀಕ್ಷಕರು, ಕಂದಾಯ ವಸೂಲಿಗಾರರಿಗೆ ವಿಶೇಷ ಆಯುಕ್ತರು, ಪ್ರತಿ ದಿನ ವಿಡಿಯೊ ಸಂವಾದ ಸಭೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾನಸಿಕ ಕಿರುಕುಳ, ಮಾನಸಿಕ ಹಿಂಸೆ ನೀಡಿ, ಬೆದರಿಕೆ ಹಾಕಿ, ತೇಜೋವಧೆ ಮಾಡಿ, ಮಾನಹಾನಿ ಮಾಡುತ್ತಿದ್ದಾರೆ. ಇದರಿಂದ ಅಧಿಕಾರಿ/ನೌಕರರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಆದ್ದರಿಂದ ಇನ್ನು ಮುಂದೆ ಕಂದಾಯ ಅಧಿಕಾರಿಗಳು ಮತ್ತು ಸಹ ಕಂದಾಯ ಅಧಿಕಾರಿಗಳು, ವಿಶೇಷ ಆಯುಕ್ತರು ನಡೆಸುವ ವಿಡಿಯೊ ಸಂವಾದ ಸಭೆಯಲ್ಲಿ ಪಾಲ್ಗೊಳ್ಳಬಾರದು. ಅವರು ಕ್ಷಮೆಯಾಚಿಸಿದಲ್ಲಿ, ಸಂಘದ ವತಿಯಿಂದ ಸಭೆ ಸೇರಿ ಮುಂದಿನ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ’ ಎಂದು ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್ ತಿಳಿಸಿದರು.
‘ಉಪ ಆಯುಕ್ತ ಡಿ.ಕೆ.ಬಾಬು ಮತ್ತು ಕಂದಾಯ ಅಧಿಕಾರಿ ವರಲಕ್ಷ್ಮಿ ಅವರನ್ನು ಕಾನೂನುಬಾಹಿರವಾಗಿ ಅಮಾನತು ಮಾಡಲು ಪ್ರಸ್ತಾವ ಸಲ್ಲಿಸಲಾಗಿದೆ. ಇದನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಲಾಯಿತು’ ಎಂದರು.
ಚರ್ಚಿಸಿ ಕ್ರಮ: ಮಹೇಶ್ವರ್ ರಾವ್ ‘ನಗರ ಪಾಲಿಕೆಗಳ ಕಂದಾಯ ವಿಭಾಗದ ಅಧಿಕಾರಿ– ನೌಕರರು ಪ್ರತಿಭಟಿಸುತ್ತಿದ್ದು ಅವರೊಂದಿಗೆ ಮಂಗಳವಾರ ಮಾತುಕತೆ ನಡೆಸಲಾಗಿದೆ. ಎಲ್ಲವನ್ನೂ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಸುದ್ದಿಗಾರರಿಗೆ ತಿಳಿಸಿದರು. ‘ನಗರ ಪಾಲಿಕೆಗಳ ಕಂದಾಯ ವಿಭಾಗದ ಸಿಬ್ಬಂದಿ ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡುತ್ತಿರುವುದು ನಿಜ. ಇಬ್ಬರು ಅಧಿಕಾರಿಗಳನ್ನು ಅಮಾನತು ವಾಪಸ್ ಪಡೆಯುವಂತೆ ಅವರು ಪ್ರತಿಭಟನೆ ಮಾಡುತ್ತಿದ್ದಾರೆ. ಸಂಘದ ಸದಸ್ಯರೊಂದಿಗೆ ಮಾತುಕತೆ ನಡೆಸಲಾಗಿದೆ. ಖಾತಾ ವಿತರಣೆಯಲ್ಲಿ ಯಾವ ರೀತಿಯಲ್ಲಿ ಲೋಪವಾಗಿದೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಅದಕ್ಕಾಗಿ ಮೌಲ್ಯಮಾಪವನ್ನೂ ಮಾಡಲಾಗುತ್ತದೆ. ಕೆಲವು ಬಾರಿ ನಾವು ಕಠಿಣವಾಗಿ ನಡೆದುಕೊಂಡಿರುತ್ತೇವೆ. ತಪ್ಪಾಗಿದ್ದರೆ ಅದನ್ನು ಸರಿಪಡಿಸಲಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.