ADVERTISEMENT

ಜಿಬಿಎ: ತೆರಿಗೆ ಬಾಕಿ ಇರುವ ಆಸ್ತಿಗಳ ಪಟ್ಟಿ ಮಾಡಿ–ಆಯುಕ್ತ ಎಂ.ಮಹೇಶ್ವರ ರಾವ್

ಎ-ಖಾತಾಗೆ ಪರಿವರ್ತನೆಗೆ ಸಂಬಂಧಿಸಿದ ಸಭೆಯಲ್ಲಿ ಮಹೇಶ್ವರ ರಾವ್ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 22:30 IST
Last Updated 24 ನವೆಂಬರ್ 2025, 22:30 IST
ಮಹೇಶ್ವರ ರಾವ್‌
ಮಹೇಶ್ವರ ರಾವ್‌   

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ಸ್ವತ್ತುಗಳ ಪಟ್ಟಿ ಮಾಡಿ, ತೆರಿಗೆ ವಸೂಲಿ ಮಾಡಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಸೂಚನೆ ನೀಡಿದರು.

ಆಸ್ತಿ ತೆರಿಗೆ ಸಂಗ್ರಹ, ‘ಇ’ ಖಾತಾ, ‘ಬಿ’ ಖಾತಾದಿಂದ ‘ಎ’ ಖಾತಾಗೆ ಪರಿವರ್ತನೆ ಮಾಡುವ ಕುರಿತು ಸೋಮವಾರ ನಡೆದ ವರ್ಚುವಲ್ ಸಭೆಯಲ್ಲಿ ಅವರು ಮಾತನಾಡಿದರು.

‘ಆಯಾ ನಗರ ಪಾಲಿಕೆಗಳಲ್ಲಿ ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು, ಆಸ್ತಿ ತೆರಿಗೆ ಪರಿಷ್ಕರಣೆ ಪ್ರಕರಣಗಳನ್ನು ಪತ್ತೆ ಹಚ್ಚಬೇಕು. ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದವರನ್ನು ಹುಡುಕಿ, ಅವರನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರಬೇಕು’ ಎಂದು ಹೇಳಿದರು.

ADVERTISEMENT

ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಮಾತನಾಡಿ, ‘ನಗರದ 5 ನಗರ ಪಾಲಿಕೆಗಳಲ್ಲಿ ₹ 6,700 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಇದೆ. ಈವರೆಗೆ ₹ 3,533 ಕೋಟಿ ಸಂಗ್ರಹಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಐದು ನಗರ ಪಾಲಿಕೆಗಳಲ್ಲಿ 24 ಸಾವಿರ ಆಸ್ತಿಗಳ ಆಸ್ತಿತೆರಿಗೆ ಪರಿಷ್ಕರಣೆ ಪ್ರಕರಣಗಳಿವೆ. ಅದರಿಂದ ಸುಮಾರು ₹ 170 ಕೋಟಿ ಸಂಗ್ರಹಿಬೇಕಿದೆ. ಅಲ್ಲದೆ ಸುಮಾರು 22 ಸಾವಿರ ಸುಸ್ತಿದಾರರಿಂದ ₹ 598 ಕೋಟಿ ಬಾಕಿ ಇದೆ ಎಂದರು.

ಆಯಾ ನಗರ ಪಾಲಿಕೆಗಳಲ್ಲಿ ವಿಭಾಗವಾರು 100 ಪರಿಷ್ಕರಣೆ ಪ್ರಕರಣಗಳು, 100 ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರನ್ನು ಪಟ್ಟಿ ಮಾಡಿಕೊಂಡು, ಕಂದಾಯ ಪರಿವೀಕ್ಷಕರು/ಕಂದಾಯ ವಸೂಲಿಗಾರರಿಗೆ ನಿಗದಿತ ಗುರಿ ನೀಡಿ ವಾಣಿಜ್ಯ ಸ್ವತ್ತುಗಳನ್ನು ಸೀಲ್ ಮಾಡಿ ಬಾಕಿ ಇರುವ ತೆರಿಗೆಯನ್ನು ವಸೂಲಿ ಮಾಡಬೇಕು ಎಂದು ಮುಖ್ಯ ಆಯುಕ್ತರು ಸೂಚನೆ ನೀಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ಖಾತಾಗಳನ್ನು ಪಡೆಯಲು ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ಅವುಗಳಿಗೆ ಕೂಡಲೇ ಖಾತೆ ನೀಡುವ ಕಾರ್ಯವಾಗಬೇಕು. ಇದರಿಂದ ಪಾಲಿಕೆಗೆ ಹೆಚ್ಚು ಆದಾಯ ಬರಲಿದೆ. ಅದಲ್ಲದೆ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆಗೆ ಬಂದಿರುವಂತಹ ಅರ್ಜಿಗಳನ್ನು ಪರಿಶೀಲಿಸಿ ಕಾಲಮಿತಿಯೊಳಗಾಗಿ ಎ-ಖಾತಾ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ನಗರ ಪಾಲಿಕೆಗಳ ಆಯುಕ್ತರಾದ ರಾಜೇಂದ್ರ ಚೋಳನ್, ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಡಿ.ಎಸ್, ರಮೇಶ್ ಕೆ.ಎನ್, ರಾಜೇಂದ್ರ ಕೆ.ವಿ, ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು.

‘ನೀರು ಸೋರಿಕೆ ಸ್ಥಳ ಪತ್ತೆಹಚ್ಚಿ ದುರಸ್ತಿ ಮಾಡಿ’

ಜಿಬಿಎ ವ್ಯಾಪ್ತಿಯಲ್ಲಿ ನೀರು ಸೋರಿಕೆಯಾಗುವ ಸ್ಥಳಗಳನ್ನು ಗುರುತಿಸಿ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಮುಖ್ಯ ಆಯುಕ್ತ ಮಹೇಶ್ವರ ರಾವ್‌ ಸೂಚನೆ ನೀಡಿದರು. ಇಲಾಖೆವಾರು ಸಮನ್ವಯ ಸಾಧಿಸುವ ಉದ್ದೇಶದಿಂದ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ನಗರದ ರಸ್ತೆಗಳಲ್ಲಿ ನೀರು ಸೋರಿಕೆ ಮ್ಯಾನ್‌ಹೋಲ್‌ ಚೇಂಬರ್‌ಗಳಿಂದ ನೀರು ಹೊರಬರುವ ಸ್ಥಳಗಳನ್ನು ಗುರುತಿಸಿ ಆ ಪಟ್ಟಿಯನ್ನು ಜಲಮಂಡಳಿಗೆ ನೀಡಬೇಕು. ಜಲಮಂಡಳಿಯು ‘ಮಾರ್ಕ್ಸ್’ ತಂತ್ರಾಂಶದ ಮೂಲಕ ರಸ್ತೆ ಕತ್ತರಿಸಲು ಅನುಮತಿ ಪಡೆದು ದುರಸ್ತಿಯನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಮುಖ್ಯ ಆಯುಕ್ತರ ಸೂಚನೆಗಳು

* ಬೆಸ್ಕಾಂ ವತಿಯಿಂದ ನೆಲದಡಿ ಕೇಬಲ್‌ಗಳನ್ನು ಅಳವಡಿಸಿರುವ ಕಡೆಗಳಲ್ಲಿ ಬಳಕೆ ಇಲ್ಲದ ಕಂಬಗಳನ್ನು ತೆರವುಗೊಳಿಸಿ

* ಬಳ್ಳಾರಿ ರಸ್ತೆಯಲ್ಲಿ ನಡೆಯುತ್ತಿರುವ ಮೆಟ್ರೊ ನೀಲಿ ಮಾರ್ಗದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು ವೇಗ ನೀಡಿ

* ಅನುಪಯುಕ್ತ ವಾಹನಗಳನ್ನು ತೆರವುಗೊಳಿಸಲು ನಗರ ಪಾಲಿಕೆಗಳು ಟೋಯಿಂಗ್ ವಾಹನಗಳನ್ನು ಖರೀದಿಸಬೇಕು. ಟೋಯಿಂಗ್ ಮಾಡಿದ ವಾಹನಗಳನ್ನು ಇರಿಸಲು ಸ್ಥಳ ಗುರುತಿಸಿ

* ನಗರದಲ್ಲಿ ಸಂಚಾರ ದಟ್ಟಣೆಗೆ ಅಡಚಣೆ ಉಂಟುಮಾಡುವ ಬಸ್ ತಂಗುದಾಣಗಳನ್ನು ಸಂಚಾರ ಪೊಲೀಸರು ಗುರುತಿಸಿದ್ದಾರೆ. ಅವುಗಳನ್ನು ಸ್ಥಳಾಂತರಿಸಿ

* ಮಳೆಗಾಲದ ಸಮಯದಲ್ಲಿ ಹಾಳಾಗಿರುವ ರಸ್ತೆಗಳು ಕೆರೆಗಳು ರಾಜಕಾಲುವೆಗಳ ದುರಸ್ತಿ ಕಾರ್ಯಗಳಿಗಾಗಿ ವಿಪತ್ತು ನಿರ್ವಹಣೆಯಡಿ ₹ 200 ಕೋಟಿ ಮೀಸಲಿಡಲಾಗಿದೆ. ಪಾಲಿಕೆವಾರು ದುರಸ್ತಿ ಕಾರ್ಯಗಳ ಪಟ್ಟಿಯನ್ನು ತಯಾರಿಸಿ ಕಾಮಗಾರಿ ಕೈಗೊಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.