ಬೆಂಗಳೂರು: ಗೆದ್ದಲಹಳ್ಳಿಯಲ್ಲಿ ಇತ್ತೀಚೆಗೆ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವರುಣ್ ಕೊಲೆಯಾದ ಯುವಕ. ಕೊಲೆ ಪ್ರಕರಣ ಸಂಬಂಧ ಉಡುಪಿಯ ಕಿದಿಯೂರು ಗ್ರಾಮದ ದಿವೇಶ್ ಹೆಗಡೆ(24) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಸೆ.21ರಂದು ಬೆಳಿಗ್ಗೆ 8.45ರ ಸುಮಾರಿಗೆ ವರುಣ್ ಅವರ ಕೊಲೆಯಾಗಿತ್ತು.
‘ಗೆದ್ದಲಹಳ್ಳಿಯ 14ನೇ ಕ್ರಾಸ್‌ನ ವಿಸ್ತಾರ ಅಪಾರ್ಟ್‌ಮೆಂಟ್ ಹಿಂಭಾಗ ವರುಣ್ ಹಾಗೂ ಆರೋಪಿ ದಿವೇಶ್ ಅವರು ಗಲಾಟೆ ಮಾಡಿಕೊಳ್ಳುತ್ತಿದ್ದರು. ಬಳಿಕ, ಆರೋಪಿ ವರುಣ್‌ನನ್ನು ನೆಲಕ್ಕೆ ಬೀಳಿಸಿ ಕಲ್ಲು ಎತ್ತಿಹಾಕಿ ನಂತರ ಇಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದ. ತಾಂತ್ರಿಕ ಸಾಕ್ಷ್ಯ ಹಾಗೂ ಬಾತ್ಮೀದಾರರು ನೀಡಿದ ಮಾಹಿತಿ ಆಧರಿಸಿ ಸಂಜಯನಗರದ ಇಸ್ರೊ ರಸ್ತೆಯಲ್ಲಿರುವ ಸೌಂದರ್ಯ ಉದ್ಯಾನದ ಬಳಿ ಆರೋಪಿಯನ್ನು ಬಂಧಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.
‘ಕೊಲೆಯಾದ ಯುವಕ, ಆರೋಪಿ ಹಾಗೂ ಆರೋಪಿಯ ಸ್ನೇಹಿತೆ ಮೂವರೂ ಶಾಲಾ ದಿನಗಳಿಂದಲೂ ಸ್ನೇಹಿತರು. ಆರೋಪಿ ದಿವೇಶ್ ಸ್ನೇಹಿತೆಯನ್ನು ಪ್ರೀತಿಸುತ್ತಿದ್ದ. ವರುಣ್ ಬೇರೆ ಯುವತಿಯನ್ನು ಪ್ರೀತಿಸುತ್ತಿದ್ದರೂ, ಆರೋಪಿಯ ಸ್ನೇಹಿತೆಯೊಂದಿಗೆ ತುಂಬಾ ಸಲುಗೆಯಿಂದ ಇದ್ದ. ಸೆ.20ರಂದು ವರುಣ್ ಜನ್ಮದಿನಾಚರಣೆ ಇತ್ತು. ಕೋರಮಂಗಲದ ಪಬ್‌ನಲ್ಲಿ ಮೂವರು ಸೇರಿ ಪಾರ್ಟಿ ಮಾಡಿದ್ದರು. ಪಾರ್ಟಿ ವೇಳೆ ಕೊಲೆಯಾದ ವರುಣ್ ಹಾಗೂ ಆರೋಪಿ ಪ್ರೀತಿಸುತ್ತಿದ್ದ ಹುಡುಗಿ ಸಲುಗೆಯಿಂದ ಇದ್ದರು. ಇದನ್ನು ಕಂಡ ಆರೋಪಿ ಬೇಸರ ಪಟ್ಟುಕೊಂಡು ಕೊಲೆಗೆ ಸಂಚು ರೂಪಿಸಿದ್ದ. ಇದೇ ವಿಚಾರಕ್ಕೆ ಸೆ.21ರಂದು ಇಬ್ಬರ ಮಧ್ಯೆ ಗಲಾಟೆ ನಡೆದಿತ್ತು. ಆಗ ಕಲ್ಲಿನಿಂದ ಜಜ್ಜಿ ವರುಣ್‌ನನ್ನು ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು. ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.