ADVERTISEMENT

ಸಮಾಜವಾದದತ್ತ ಯುವಕರನ್ನು ಸೆಳೆಯಿರಿ

‘ಪರ್ಯಾಯ ವ್ಯವಸ್ಥೆಗಾಗಿ ರಾಷ್ಟ್ರಮಟ್ಟದ ಸಮಾಜವಾದಿ ಸಮಾಗಮ’ದಲ್ಲಿ ರೈತ ನಾಯಕ ಕೆ.ಟಿ.ಗಂಗಾಧರ್ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 21:33 IST
Last Updated 14 ಡಿಸೆಂಬರ್ 2019, 21:33 IST
ಕಾರ್ಯಕ್ರಮದಲ್ಲಿ ಸಮಾಜವಾದಿ ಮುಖಂಡ ಮೈಕೆಲ್‌ ಬಿ. ಫರ್ನಾಂಡಿಸ್‌ ಅವರು ಕಸ್ತೂರ ಬಾ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿದರು. (ಎಡದಿಂದ) ಬಿ.ಟಿ.ಲಲಿತಾ ನಾಯಕ್‌, ಪ್ರಾಧ್ಯಾಪಕ ರಾಜ್‌ಕುಮಾರ್‌ ಜೈನ್‌, ಸಮಾಜವಾದಿ ಮುಖಂಡ ಬಿ.ಆರ್‌. ಪಾಟೀಲ್‌, ಪ್ರಾಧ್ಯಾಪಕರಾದ ಪ್ರೊ.ಆನಂದ್ ಕುಮಾರ್, ವರ್ಗೀಸ್‌ ಜಾರ್ಜ್‌ ಇದ್ದಾರೆ
ಕಾರ್ಯಕ್ರಮದಲ್ಲಿ ಸಮಾಜವಾದಿ ಮುಖಂಡ ಮೈಕೆಲ್‌ ಬಿ. ಫರ್ನಾಂಡಿಸ್‌ ಅವರು ಕಸ್ತೂರ ಬಾ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿದರು. (ಎಡದಿಂದ) ಬಿ.ಟಿ.ಲಲಿತಾ ನಾಯಕ್‌, ಪ್ರಾಧ್ಯಾಪಕ ರಾಜ್‌ಕುಮಾರ್‌ ಜೈನ್‌, ಸಮಾಜವಾದಿ ಮುಖಂಡ ಬಿ.ಆರ್‌. ಪಾಟೀಲ್‌, ಪ್ರಾಧ್ಯಾಪಕರಾದ ಪ್ರೊ.ಆನಂದ್ ಕುಮಾರ್, ವರ್ಗೀಸ್‌ ಜಾರ್ಜ್‌ ಇದ್ದಾರೆ   

ಬೆಂಗಳೂರು: ‘ಸಮಾಜವಾದದ ಬಗ್ಗೆ ಸಂಪೂರ್ಣ ಅಪನಂಬಿಕೆಯನ್ನು ಹೊಂದಿರುವ ಯುವಜನತೆಗೆ ಈ ಕುರಿತು ಅರಿವು ಮೂಡಿಸಿ, ಕರೆತಂದಲ್ಲಿ ದೇಶವನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು’ ಎಂದುರೈತ ನಾಯಕ ಕೆ.ಟಿ.ಗಂಗಾಧರ್ ಅಭಿಮತ ವ್ಯಕ್ತಪಡಿಸಿದರು.

ಮಹಾತ್ಮ ಗಾಂಧಿ–ಕಸ್ತೂರಬಾ 150ನೇ ಜನ್ಮ ವರ್ಷಾಚರಣೆಯ ಅಂಗವಾಗಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಪರ್ಯಾಯ ವ್ಯವಸ್ಥೆಗಾಗಿ ರಾಷ್ಟ್ರಮಟ್ಟದ ಸಮಾಜವಾದಿ ಸಮಾಗಮ’ ಕಾರ್ಯಕ್ರಮದಲ್ಲಿ ಸಮಾಜವಾದಿ ಪ್ರಣಾಳಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಸ್ವಾತಂತ್ರ್ಯ ನಂತರ ಸಮಸಮಾಜ ನಿರ್ಮಿಸುವಲ್ಲಿ ಸಮಾಜವಾದಿಗಳ ಪಾತ್ರ ಮಹತ್ವದ್ದು. ಶೋಷಿತ ವರ್ಗಗಳು ಹಾಗೂ ದುಡಿಯುವವರ ಧ್ವನಿಯಾಗಿ ನಿಂತಿದ್ದ ಸಮಾಜವಾದ ಆಕರ್ಷಣೆಯನ್ನು ಕಳೆದುಕೊಳ್ಳುತ್ತಿದೆ. ಸಮಾಜವಾದದ ಬಗ್ಗೆ ನಂಬಿಕೆಯನ್ನು ಮರು ಸೃಷ್ಟಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ’ ಎಂದರು.

ADVERTISEMENT

‘ಜನರನ್ನು ಕಾಡುತ್ತಿರುವ ಅನೇಕ ಸಮಸ್ಯೆಗಳ ವಿರುದ್ಧ ಹೋರಾಟ ರೂಪಿಸುವ ಕುರಿತು ಸಮಾಜವಾದಿಗಳು ಚಿಂತನೆ ಮಾಡಬೇಕು. ಈ ಬಗ್ಗೆ ವಿದ್ಯಾರ್ಥಿಗಳು, ಯುವಜನರು, ಕೃಷಿ ಕೂಲಿ ಕಾರ್ಮಿಕರು, ರೈತರು ಸೇರಿದಂತೆ ಎಲ್ಲರನ್ನೂ ಸೆಳೆಯಬೇಕು. ವಿದ್ಯಾವಂತರು, ಉದ್ಯೋಗಸ್ಥ ಯುವಜನರು, ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು’ ಎಂದು ಸಲಹೆ ನೀಡಿದರು.

ಸಂವಿಧಾನ ವಿರೋಧಿ ಕಾಯ್ದೆ:ಲೇಖಕಿ ಬಿ.ಟಿ.ಲಲಿತಾ ನಾಯಕ್, ‘ಸಮಾಜವಾದಿ ಚಿಂತನೆಗಳು ಕಮ್ಯುನಿಸ್ಟ್ ಚಿಂತನೆಗಳ ಮತ್ತೊಂದು ಸ್ವರೂಪ. ಪಂಚಾಯಿತಿ ಮಟ್ಟದಿಂದ ಹಿಡಿದು ರಾಜ್ಯ, ದೇಶದಲ್ಲಿ ಎಲ್ಲರಿಗೂ ಅಧಿಕಾರ ಹಂಚಿಕೆಯಾಗಬೇಕು ಎಂಬುದೇ ಸಮಾಜವಾದದ ಮೂಲ ಆಶಯ. ಆದರೆ, ಇದು ಎಲ್ಲಿಯೂ ಚಾಲನೆಗೆ ಬಂದಿಲ್ಲ’ ಎಂದರು.

ಸಮಾಜವಾದಿ ಅಧ್ಯಯನ ಕೇಂದ್ರ, ರಾಷ್ಟ್ರ ಸೇವಾ ದಳ, ಹಿಂದ್ ಮಜ್ದೂರ್ ಸಭಾ, ಕರ್ನಾಟಕ ರಾಜ್ಯ ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಸೇರಿ ಈ ಕಾರ್ಯಕ್ರಮ ಆಯೋಜಿಸಿದ್ದವು.

‘ಕಾಯ್ದೆ ವಿರುದ್ಧ ಧ್ವನಿ ಎತ್ತಿ’
‘ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನ ವಿರೋಧಿಯಾಗಿದೆ. ಅಪಾಯಕಾರಿ ಕಾಯ್ದೆಯ ವಿರುದ್ಧ ಎಲ್ಲರೂ ಧ್ವನಿ ಎತ್ತಬೇಕು. ಅಲ್ಲದೆ, ಮಹಿಳೆಯರ ಮೇಲಿನ ಅನ್ಯಾಯ, ದೌರ್ಜನ್ಯ, ದಬ್ಬಾಳಿಕೆಗಳು ಹೆಚ್ಚಲು ಸರ್ಕಾರದ ಜನವಿರೋಧಿ ನೀತಿಗಳು ಕಾರಣವಾಗುತ್ತಿದ್ದು, ಈ ಬಗ್ಗೆ ಹೋರಾಟ ನಡೆಸಬೇಕು’ ಎಂದು ಲಲಿತಾ ನಾಯಕ್‌ ಅಭಿಪ್ರಾಯಪಟ್ಟರು.

70 ವರ್ಷಗಳಾದರೂ ಪರಿಹಾರ ಸಿಕ್ಕಿಲ್ಲ
ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಯಾವುದೇ ಮೂಲಭೂತ ಸಮಸ್ಯೆಗಳಿಗೂ ಪರಿಹಾರ ಸಿಕ್ಕಿಲ್ಲ. ಈ ಅವಧಿಯಲ್ಲಿ ಅಧಿಕಾರ ನಡೆಸಿದ ಎಲ್ಲ ರಾಜಕೀಯ ಪಕ್ಷಗಳೂ ಇದಕ್ಕೆ ಹೊಣೆಗಾರರು ಎಂದು ರೈತ ನಾಯಕ ಕೆ.ಟಿ.ಗಂಗಾಧರ್ ಅಭಿಪ್ರಾಯಪಟ್ಟರು

*
ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಯಾವುದೇ ಮೂಲಭೂತ ಸಮಸ್ಯೆಗಳಿಗೂ ಪರಿಹಾರ ಸಿಕ್ಕಿಲ್ಲ. ಈ ಅವಧಿಯಲ್ಲಿ ಅಧಿಕಾರ ನಡೆಸಿದ ಎಲ್ಲ ರಾಜಕೀಯ ಪಕ್ಷಗಳೂ ಇದಕ್ಕೆ ಹೊಣೆಗಾರರು
–ಕೆ.ಟಿ.ಗಂಗಾಧರ್, ರೈತ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.