ADVERTISEMENT

ಹಾ‍ಪ್‌ಕಾಮ್ಸ್‌ಗೆ ಬಜೆಟ್‌ನಲ್ಲಿ ₹25 ಕೋಟಿ ನೆರವು ನೀಡಿ- ಎನ್.ದೇವರಾಜ್ ಮನವಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 19:38 IST
Last Updated 26 ಜನವರಿ 2022, 19:38 IST
ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಕಾರ್ಯನಿರ್ವಹಿಸುವ ಮಾರಾಟಗಾರರಿಗೆ ಪ್ರಶಂಸಾ ಪತ್ರ ನೀಡಿ ಸನ್ಮಾನಿಸಲಾಯಿತು. ಹಾಪ್‌ಕಾಮ್ಸ್‌ ಅಧ್ಯಕ್ಷ ಎನ್.ದೇವರಾಜ್ ಇದ್ದಾರೆ.
ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಕಾರ್ಯನಿರ್ವಹಿಸುವ ಮಾರಾಟಗಾರರಿಗೆ ಪ್ರಶಂಸಾ ಪತ್ರ ನೀಡಿ ಸನ್ಮಾನಿಸಲಾಯಿತು. ಹಾಪ್‌ಕಾಮ್ಸ್‌ ಅಧ್ಯಕ್ಷ ಎನ್.ದೇವರಾಜ್ ಇದ್ದಾರೆ.   

ಬೆಂಗಳೂರು: ‘ಕೋವಿಡ್‌ನಿಂದ ನಷ್ಟಕ್ಕೆ ಸಿಲುಕಿರುವ ಹಾಪ್‌ಕಾಮ್ಸ್‌ಗೆ ಸರ್ಕಾರ ಈ ಬಜೆಟ್‌ನಲ್ಲಿ ₹25 ಕೋಟಿ ಆರ್ಥಿಕ ನೆರವು ಘೋಷಿಸಬೇಕು’ ಎಂದು ಬೆಂಗಳೂರು ಹಾಪ್‌ಕಾಮ್ಸ್‌ ಅಧ್ಯಕ್ಷ ಎನ್.ದೇವರಾಜ್ ಮನವಿ ಮಾಡಿದರು.

ಹಾಪ್‌ಕಾಮ್ಸ್‌ ವತಿಯಿಂದ ಗಣರಾಜ್ಯೋತ್ಸವ ದಿನದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಸಂಸ್ಥೆಯ ಮಾರಾಟಗಾರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೋವಿಡ್‌ ಜೊತೆಗೆ ಇತ್ತೀಚಿನ ದಿನಗಳಲ್ಲಿ ಖಾಸಗಿ ಸಂಸ್ಥೆಗಳ ಪೈಪೋಟಿ, ಹಣ್ಣು–ತರಕಾರಿ ಸರಬರಾಜು ಕುಂಠಿತ ಸೇರಿದಂತೆ ಹಲವು ಕಾರಣದಿಂದ ಹಾಪ್‌ಕಾಮ್ಸ್‌ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ’ ಎಂದರು.

ADVERTISEMENT

‘ಸರ್ಕಾರ ಹಾಲಿಗೆ ನೀಡುವಂತೆ ಹಾಪ್‌ಕಾಮ್ಸ್‌ನ ತರಕಾರಿಗಳಿಗೂ ಬೆಂಬಲ ಬೆಲೆ ನೀಡಿದರೆ, ಉತ್ಪನ್ನಗಳನ್ನು ಇನ್ನೂ ಕಡಿಮೆ ದರದಲ್ಲಿ ಗ್ರಾಹಕರಿಗೆ ನೀಡಬಹುದು. ಇದರಿಂದ ಸಂಸ್ಥೆಯೂ ಅಭಿವೃದ್ಧಿ ಹೊಂದುತ್ತದೆ’ ಎಂದು ಹೇಳಿದರು.

‘ಹಾಪ್‌ಕಾಮ್ಸ್‌ನ ನಿವೃತ್ತ ನೌಕರರಿಗೆ ಆರ್ಥಿಕ ಸೌಲಭ್ಯಗಳನ್ನು ಒದಗಿಸಲು ಪ್ರತ್ಯೇಕ ನಿಧಿ ಇಲ್ಲ. ನಿವೃತ್ತ ನೌಕರರ ಸಂಖ್ಯೆ ಹೆಚ್ಚಾಗುತ್ತಿದ್ದು, ಸದ್ಯ 120 ನಿವೃತ್ತ ನೌಕರರಿಗೆ ₹3.5 ಕೋಟಿ ಪಾವತಿಸಬೇಕಾಗಿದೆ.ಬಜೆಟ್‌ನಲ್ಲಿ ಆರ್ಥಿಕ ನೆರವು ನೀಡುವ ಮೂಲಕ ಹಾಪ್‌ಕಾಮ್ಸ್‌ ಅನ್ನು ಉಳಿಸಬೇಕಾಗಿದೆ’ ಎಂದು ಮನವಿ ಮಾಡಿದರು.

ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಉಮೇಶ್‌ ಎಸ್.ಮಿರ್ಜಿ,‘ಸಂಸ್ಥೆಯ ವ್ಯಾಪಾರಾಭಿವೃದ್ಧಿಗೆ ಕಾರಣರಾದ 20 ಮಾರಾಟಗಾರರನ್ನು ಗುರುತಿಸಿ, ಅವರನ್ನು ಸನ್ಮಾನಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇವರು ತಮ್ಮ ಮಳಿಗೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ವ್ಯಾಪಾರ ವೃದ್ಧಿಸಿದ್ದಾರೆ’ ಎಂದರು.

ಸಂಸ್ಥೆಯ ನಿರ್ದೇಶಕರಾದ ಎ.ಎಸ್.ಚಂದ್ರೇಗೌಡ, ನಾರಾಯಣಪ್ಪ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.