ADVERTISEMENT

ಆರ್‌ಎಸ್‌ಎಸ್‌ಗೆ ಭೂಮಿ, ಸಂವಿಧಾನದ ಉಲ್ಲಂಘನೆ: ಬಿಕೆಸಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2023, 20:06 IST
Last Updated 19 ಜೂನ್ 2023, 20:06 IST

ಬೆಂಗಳೂರು: ‘ಸಂವಿಧಾನ ವಿರೋಧಿಯಾಗಿರುವ ಆರ್‌ಎಸ್‌ಎಸ್‌ಗೆ ಭೂಮಿ ಮಂಜೂರು ಮಾಡಿರುವುದೇ ಸಂವಿಧಾನದ ಉಲ್ಲಂಘನೆ’ ಎಂದು ಕಾಂಗ್ರೆಸ್‌ ನಾಯಕ ಬಿ.ಕೆ. ಚಂದ್ರಶೇಖರ್‌ ತಿಳಿಸಿದ್ದಾರೆ.

‘ಭಾರತೀಯ ಸಂವಿಧಾನವನ್ನು ಕಿತ್ತೊಗೆದು, ನಾಗರಿಕರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಹಿಂದೂ ರಾಷ್ಟ್ರದ ತತ್ವವನ್ನು ಅಳವಡಿಸಿ ಹೊಸ ಸಂವಿಧಾನ ರೂಪಿಸುವ ನಿರ್ಧಾರವನ್ನು ಆರ್‌ಎಸ್‌ಎಸ್ ಮತ್ತು ಬಿಜೆಪಿ ಪ್ರಕಟಿಸಿದೆ. ಇದರಿಂದ, ಆರ್‌ಎಸ್‌ಎಸ್‌ ಸಂವಿಧಾನ ವಿರೋಧಿ ಸಂಘಟನೆಯಾಗಿದೆ’ ಎಂದು ಚಂದ್ರಶೇಖರ್‌ ಹೇಳಿಕೆ ನೀಡಿದ್ದಾರೆ.

‘ಆರ್‌ಎಸ್‌ಎಸ್‌ಗೆ ಹಿಂದಿನ ಸರ್ಕಾರ ನೀಡಿರುವ ಭೂಮಿಯನ್ನು ಹಿಂಪಡೆಯುವ ಕುರಿತು ಚರ್ಚೆ ನಡೆಯುತ್ತಿದೆ. ಆರ್‌ಎಸ್‌ಎಸ್‌ ರಾಜಕೀಯ ಪಕ್ಷವಲ್ಲ. ತಾನೇ ಘೋಷಿಸಿಕೊಂಡಂತೆ ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಯೂ ಅಲ್ಲ. ಬಿಜೆಪಿಯನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಲೇ ಬೆಳೆದಿರುವ ಸಂಘಟನೆ’ ಎಂದು ಎಂದಿದ್ದಾರೆ.

ADVERTISEMENT

‘ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಹಿಂದುತ್ವದ ಪ್ರತಿಪಾದನೆಯ ಆಧಾರದಲ್ಲಿ ಪವಿತ್ರ ಸಂವಿಧಾನವನ್ನು ವಿರೋಧಿಸುತ್ತಲೇ ಬಂದಿವೆ. ವಿಶೇಷವಾಗಿ ಮುಸ್ಲಿಮರನ್ನು ಜೊತೆಗೆ ಕ್ರಿಶ್ಚಿಯನ್ನರನ್ನು ಉದ್ಧೇಶಿಸಿ ‘ಹೊರಗಿನಿಂದ ವಲಸೆ ಬಂದವರು. ಹಿಂದೂ ಸಮುದಾಯ, ಸಂಸ್ಕೃತಿ ಹಾಗೂ ಸಂಸ್ಕೃತ ಅಳವಡಿಸಿಕೊಂಡು ತಮ್ಮ ಪ್ರತ್ಯೇಕ ಅಸ್ತಿತ್ವದ ಅಸ್ಮಿತೆ ಮತ್ತು ವಿದೇಶಿ ಮೂಲವನ್ನು ಮರೆತು ರಾಷ್ಟ್ರೀಯ ಜನಾಂಗದಲ್ಲಿ ಸ್ವಾಭಾವಿಕವಾಗಿ ಬೆರೆತುಕೊಳ್ಳದಿದ್ದರೆ ಹೊರಗಿನವರಂತೆ ಬದುಕಬೇಕಾಗುತ್ತದೆ’ ಎಂದು ಎಚ್ಚರಿಕೆಯನ್ನೂ ಕೊಡುತ್ತಿದ್ದಾರೆ. ಅಂತಹ ಸಂಘಟನೆಯವರಿಗೆ ಭೂಮಿ ಕೊಡಬೇಕೇ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.