ಬೆಂಗಳೂರು: ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ನಂಬಿಕೆ ದ್ರೋಹ ಮತ್ತು ಮೋಸ ಮಾಡಿ ಚಿನ್ನಾಭರಣ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಹಲಸೂರು ಗೇಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ತಸ್ಲಿಂ ಆರೀಫ್ ಮೊಲ್ಲಾ, ಆತನ ಪುತ್ರ ಎಂ.ಡಿ.ಸಮೀವುಲ್ಲಾ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
‘ದೂರುದಾರ ಹುಸೇನ್ ಅಲಿ ಶೇಖ್ ಅವರು ನಗರ್ತಪೇಟೆಯಲ್ಲಿ ಆಲ್ಫಿ ಕಾತೂನ್ ಹೆಸರಿನ ಚಿನ್ನಾಭರಣ ಅಂಗಡಿ ನಡೆಸುತ್ತಿದ್ದಾರೆ. ಅವರ ಅಂಗಡಿಯಲ್ಲಿ ಆರೋಪಿಗಳಾದ ತಸ್ಲಿಂ ಆರೀಫ್ ಮೊಲ್ಲಾ ಹಾಗೂ ಎಂ.ಡಿ.ಸಮೀವುಲ್ಲಾ ಅವರು ಕೆಲಸ ಮಾಡುತ್ತಿದ್ದರು. ಮಾಲೀಕರು ತಂದುಕೊಡುತ್ತಿದ್ದ ಚಿನ್ನದ ಗಟ್ಟಿಯನ್ನು ಬಳಸಿ ಆಭರಣ ತಯಾರಿಸಿ ಕೊಡುತ್ತಿದ್ದರು. ಜನವರಿ 2ರಿಂದ 7ರವರೆಗೆ ಮಾಲೀಕರು 257 ಗ್ರಾಂ. ಚಿನ್ನದ ಗಟ್ಟಿಯನ್ನು ತಂದುಕೊಟ್ಟು ಆಭರಣ ತಯಾರಿಸಿಕೊಡುವಂತೆ ಸೂಚಿಸಿದ್ದರು. ಆದರೆ, ಆರೋಪಿಗಳನ್ನು ಚಿನ್ನದ ಗಟ್ಟಿಯಿಂದ ಆಭರಣ ತಯಾರಿಸಿಕೊಡದೇ ತಮ್ಮ ರಾಜ್ಯಕ್ಕೆ ಪರಾರಿ ಆಗಿದ್ದರು’ ಎಂದು ಪೊಲೀಸರು ಹೇಳಿದರು.
‘ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಪಶ್ಚಿಮ ಬಂಗಾಳದ ಬರ್ಧಮಾನ್‌ನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ನಗರಕ್ಕೆ ಕರೆತರಲಾಯಿತು’ ಎಂದು ಪೊಲೀಸರು ಹೇಳಿದರು.
ನಗರ್ತಪೇಟೆಯಲ್ಲಿ ನಿಲುಗಡೆ ಮಾಡಿದ್ದ ಬೈಕ್‌ನಲ್ಲಿ ಇಟ್ಟಿದ್ದ ಚಿನ್ನದ ಗಟ್ಟಿಯನ್ನು ಕಳ್ಳತನ ಮಾಡಿದ್ದ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.