ADVERTISEMENT

ಚಿನ್ನಾಭರಣ ಸುಲಿಗೆ: ಸರಗಳ್ಳರ ಸೆರೆ- ಕೆಂಗೇರಿ ಠಾಣೆ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 14:49 IST
Last Updated 1 ನವೆಂಬರ್ 2025, 14:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಸ್ತೆಯಲ್ಲಿ ಹೋಗುವ ಒಂಟಿ ಮಹಿಳೆಯರನ್ನೇ ಗುರಿಯಾಗಿಸಿ ಚಿನ್ನದ ಸರ, ಮೊಬೈಲ್‌ ಹಾಗೂ ನಗದು ಸುಲಿಗೆ ಮಾಡಿ ಪರಾರಿ ಆಗುತ್ತಿದ್ದ ಐವರು ಸರಗಳ್ಳರನ್ನು ಕೆಂಗೇರಿ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಕೆಂಗೇರಿಯ ನವೀನ್ (32), ಮಹೇಶ್ (26), ಸುದೀಪ್ (24), ದರ್ಶನ್ (23) ಮತ್ತು ಕೋಲಾರದ ಆರ್‌ಆರ್ ನಗರದ ನಿವಾಸಿ ಹರ್ಷವರ್ಧನ್ (23) ಬಂಧಿತರು.

ಬಂಧಿತರಿಂದ 75 ಗ್ರಾಂ ಚಿನ್ನಾಭರಣ, ನಾಲ್ಕು ಮೊಬೈಲ್‌ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಹೇಮಾವತಿ ಅವರು ಅಕ್ಟೋಬರ್‌ 20ರಂದು ಸಂಜೆ 6.30ರ ಸುಮಾರಿಗೆ ಕೆಂಗೇರಿ ಉಪನಗರದ 80 ಅಡಿ ರಸ್ತೆಯ ಜೆ.ಕೆ ಮೋಟಾರ್ ಕಾರ್ ಕೇರ್ ಸೆಂಟರ್ ಎದುರಿನ ಪಾದಚಾರಿ ಮಾರ್ಗದಲ್ಲಿ ನಡೆದು ತೆರಳುತ್ತಿದ್ದರು. ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ಸರಗಳ್ಳರು, 75 ಗ್ರಾಂ ತೂಕದ ಎರಡು ಚಿನ್ನದ ಸರಗಳನ್ನು ಎಗರಿಸಿ ಪರಾರಿ ಆಗಿದ್ದರು. ಹೇಮಾವತಿ ಅವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಲು ಎರಡು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ದೃಶ್ಯಾವಳಿಯನ್ನು ಪರಿಶೀಲನೆ ನಡೆಸಿದಾಗ ಆರೋಪಿಗಳ ಸುಳಿವು ಲಭಿಸಿತ್ತು. ಬಳಿಕ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ಇನ್‌ಸ್ಪೆಕ್ಟರ್‌ ಜಗದೀಶ್ ಅವರನ್ನು ಒಳಗೊಂಡ ಸಿಬ್ಬಂದಿ ಕಾರ್ಯಾಚರಣೆ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.