ADVERTISEMENT

ವ್ಯಾಪಾರಿಯ ಬೆದರಿಸಿ ಚಿನ್ನಾಭರಣ ಸುಲಿಗೆ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 21:36 IST
Last Updated 19 ಮಾರ್ಚ್ 2022, 21:36 IST

ಬೆಂಗಳೂರು: ವ್ಯಾಪಾರಿಯನ್ನು ಬೆದರಿಸಿ ಚಿನ್ನಾಭರಣ ಸುಲಿಗೆ ಮಾಡಿದ್ದ ಆರೋಪದಡಿ ಮೂವರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.

‘ನಾಗ್ಪುರದ ರಾಜಾ ಅಲಿ, ನಾದಿರ್ ಜೈಬಿ, ವಿಕಾಸ್ ಬಂಧಿತರು. ಅವರಿಂದ 1 ಕೆ.ಜಿ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ರಾಜಾಜಿನಗರದ ಚಿನ್ನದ ವ್ಯಾಪಾರಿ ಚೇತನ್ ಎಂಬುವರ ಬಳಿ ಪ್ರಭುರಾಮ್ ಕೆಲಸ ಮಾಡುತ್ತಿದ್ದರು. ಮಾಲೀಕನ ಸೂಚನೆಯಂತೆ ಪ್ರಭುರಾಮ್, 1 ಕೆ.ಜಿ 700 ಗ್ರಾಂ ಚಿನ್ನಾಭರಣ ತೆಗೆದುಕೊಂಡು ಫೆ. 12ರಂದು ಬೈಕ್‌ನಲ್ಲಿ ಹೊರಟಿದ್ದರು. ಅವರನ್ನು ಅಡ್ಡಗಟ್ಟಿದ್ದ ಆರೋಪಿಗಳು, ತಮ್ಮ ಬ್ಯಾಗ್‌ನಲ್ಲಿ ಪಿಸ್ತೂಲ್ ಇರುವುದಾಗಿ ಹೇಳಿ ಬೆದರಿಸಿ ಚಿನ್ನಾಭರಣ ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದರು’ ಎಂದೂ ತಿಳಿಸಿದರು.

ADVERTISEMENT

‘ಕೃತ್ಯದ ಬಗ್ಗೆ ಪ್ರಭುರಾಮ್ ದೂರು ನೀಡಿದ್ದರು. ತನಿಖೆ ಕೈಗೊಂಡಾಗ ಆರೋಪಿಗಳ ಸುಳಿವು ಸಿಕ್ಕಿತ್ತು. ನಾಗ್ಪುರಕ್ಕೆ ಹೋದ ತಂಡ, ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತಂದಿದೆ. ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲೂ ಆರೋಪಿಗಳು ಸುಲಿಗೆ ಮಾಡಿರುವುದು ಗೊತ್ತಾಗಿದೆ’ ಎಂದರು.

‘ಪ್ರಭುರಾಮ್ ಅವರನ್ನು ತಡೆದಿದ್ದ ಆರೋಪಿಗಳು, ‘ದೇವರು ನಿನಗೆ ಒಳ್ಳೆಯದು ಮಾಡುತ್ತಾನೆ’ ಎಂದು ಮಾತು ಆರಂಭಿಸಿದ್ದ. ಅದೇ ಸಮಯದಲ್ಲೇ ಇನ್ನಿಬ್ಬರು ಆರೋಪಿಗಳು, ಪಿಸ್ತೂಲ್ ಇರುವುದಾಗಿ ಬೆದರಿಸಿ ಸುಲಿಗೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.