ಸಾವು
(ಸಾಂದರ್ಭಿಕ ಚಿತ್ರ)
ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಮೇಲೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹೆದ್ದಾರಿ ಗಸ್ತು ತಂಡದ ಸಿಬ್ಬಂದಿಯೊಬ್ಬರು ಮೃತಪಟ್ಟು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ತಿಪಟೂರಿನ ಪಿ.ಮಂಜುನಾಥ್ (52) ಮೃತ ವ್ಯಕ್ತಿ. ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಸ್ತು ತಂಡದಲ್ಲಿ ಅಧಿಕಾರಿಯಾಗಿದ್ದರು. ಗಾಯಗೊಂಡಿರುವ ಸಿಬ್ಬಂದಿ ರಾಜಣ್ಣ ಮತ್ತು ಗೂಡ್ಸ್ ವಾಹನ ಚಾಲಕ ಸಂದೀಪ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೇಲ್ಸೇತುವೆ ಮೇಲೆ ಶನಿವಾರ ತಡರಾತ್ರಿ ಪಶ್ಚಿಮ ಬಂಗಾಳದ ಭಕ್ತ ಎಂಬುವರ ಕಾರು ಕೆಟ್ಟು ನಿಂತಿತ್ತು. ಮಂಜುನಾಥ್ ಅವರು ಟೋಯಿಂಗ್ ವಾಹನ ಕರೆಸಿ ಸಿಬ್ಬಂದಿ ನೆರವಿನೊಂದಿಗೆ ತೆರವು ಮಾಡಿಸುತ್ತಿದ್ದ ವೇಳೆ ವೇಗವಾಗಿ ಬಂದ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆಯಲ್ಲಿ ಟೋಯಿಂಗ್ ವಾಹನ ಮತ್ತು ಕಾರು ಸಂಪೂರ್ಣ ನಜ್ಜುಗುಜ್ಜಾಗಿವೆ.
ಮಂಜುನಾಥ್ ಅವರ ತಲೆಗೆ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವವಾಗಿತು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ. ಆರೋಪಿ ಸಂದೀಪ್ ಕಾಲು ಮುರಿದಿದ್ದು, ಟೋಲ್ ಸಿಬ್ಬಂದಿ ರಾಜಣ್ಣ ಅವರಿಗೂ ಪೆಟ್ಟು ಬಿದ್ದಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಆಗಸ್ಟ್ 10ರಂದು ಮಂಜುನಾಥ್ ಅವರ ಮಗಳ ಮದುವೆ ನಿಶ್ಚಯವಾಗಿದೆ. ಮಗಳ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಅವರು, ಶನಿವಾರ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಆಮಂತ್ರಣ ಪತ್ರಿಕೆ ವಿತರಿಸಿ ಬಂದಿದ್ದರು. ರಾತ್ರಿ ಪಾಳಿ ಕೆಲಸಕ್ಕೆ ಹಾಜರಾಗಿದ್ದ ವೇಳೆ ಈ ಅವಘಡ ಸಂಭವಿಸಿದೆ. ಹುಳಿಮಾವು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.