ADVERTISEMENT

ರೈತರ ಮೇಲಿನ ಗೂಂಡಾಗಿರಿ ಸಹಿಸುವುದಿಲ್ಲ: ಶಾಸಕ ಸೋಮಶೇಖರ್‌

ಸೋಮನಹಳ್ಳಿ ರಾ.ಹೆ.ಯಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಮೇ 2025, 16:21 IST
Last Updated 21 ಮೇ 2025, 16:21 IST
ಪ್ರತಿಭಟನೆಯಲ್ಲಿ ಎಸ್.ಟಿ.ಸೋಮಶೇಖರ್‌ ಮಾತನಾಡಿದರು. ಸಂತೋಷ್‌ ಹೆಗ್ಡೆ,  ಸಿ.ಪುಟ್ಟಸ್ವಾಮಿ, ನದೀಂ ಉಪಸ್ಥಿತರಿದ್ದರು
ಪ್ರತಿಭಟನೆಯಲ್ಲಿ ಎಸ್.ಟಿ.ಸೋಮಶೇಖರ್‌ ಮಾತನಾಡಿದರು. ಸಂತೋಷ್‌ ಹೆಗ್ಡೆ,  ಸಿ.ಪುಟ್ಟಸ್ವಾಮಿ, ನದೀಂ ಉಪಸ್ಥಿತರಿದ್ದರು   

ಕೆಂಗೇರಿ: ಟೋಲ್‌ ಸಂಗ್ರಹ ನೆಪದಲ್ಲಿ ರೈತರ ಮೇಲಿನ ಗೂಂಡಾಗಿರಿಯನ್ನು ಎಂದಿಗೂ ಸಹಿಸುವುದಿಲ್ಲ ಎಂದು ಶಾಸಕ ಎಸ್.ಟಿ. ಸೋಮಶೇಖರ್‌ ಹೇಳಿದರು.

ಸೋಮನಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಳೀಯ ಗ್ರಾಮಸ್ಥರು ಹಾಗೂ ರೈತರಿಂದ ಟೋಲ್‌ ಸಂಗ್ರಹ ಮಾಡುತ್ತಿರುವುದನ್ನು ಖಂಡಿಸಿ ರಾಜ್ಯ ರೈತ ಹಿತ ರಕ್ಷಣಾ ಸಂಘದ ಕಗ್ಗಲಿಪುರ ಘಟಕದ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ರಾಷ್ಟ್ರೀಯ ಹೆದ್ದಾರಿ ಇನ್ನೂ ಸಂಪೂರ್ಣಗೊಂಡಿಲ್ಲ. ಮಾರ್ಗಸೂಚಿಯಂತೆ ಸರ್ವಿಸ್‌ ರಸ್ತೆ ನಿರ್ಮಾಣ ಮಾಡಲಾಗಿಲ್ಲ. ಗೂಂಡಾಗಿರಿ ವರ್ತನೆ ತೋರಿ ರೈತರಿಂದ ಹಣ ವಸೂಲಿ ಮಾಡಲಾಗುತ್ತಿದೆ. ರೈತರೊಡನೆ ಗೂಂಡಾಗಿರಿ ಬೇಡ. ನಾನು ಕ್ಷೇತ್ರದ ಶಾಸಕನಿದ್ದೇನೆ. ಧೈರ್ಯವಿದ್ದರೆ ನನ್ನ ಮೇಲೆ ನಿಮ್ಮ ದರ್ಪ ತೋರಿ’ ಎಂದು ಸವಾಲು ಹಾಕಿದರು.

ADVERTISEMENT

ಟೋಲ್‌ ಸಿಬ್ಬಂದಿ ಕಾನೂನು ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಬೇಕು. ರೈತರ ಮೇಲೆ ದರ್ಪ ತೋರಿದ ಗೂಂಡಾಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯ ಪೊಲೀಸ್‌ ಅಧಿಕಾರಿಗೆ ಸೂಚಿಸಿದರು.

‘ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರು ಕಾನೂನು ಪರಿಮಿತಿಯಲ್ಲಿ ರೈತರಿಗೆ ಪರಿಹಾರ ದೊರಕುವ ಮಾರ್ಗ ವಿವರಿಸಿದ್ದು, ನಾಳೆ ನಿಗದಿಯಾಗಿರುವ ಜಿಲ್ಲಾಧಿಕಾರಿಯವರ ಸಭೆಯಲ್ಲಿ ಚರ್ಚಿಸಿ ಟೋಲ್‌ ರದ್ದತಿಗೆ ಒತ್ತಾಯಿಸುವುದಾಗಿ’ ತಿಳಿಸಿದರು.

‘ಜನಪರವಾಗಿ ಕಾರ್ಯ ನಿರ್ವಹಿಸುವುದು, ಮೂಲಸೌಕರ್ಯ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ. ಅವೈಜ್ಞಾನಿಕವಾಗಿ ಟೋಲ್‌ ಸಂಗ್ರಹಣೆ ಮಾಡುವುದು ಜನ ವಿರೋಧಿ ನೀತಿ’ ಎಂದು ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಹೇಳಿದರು.

ರೈತ ಹಿತ ರಕ್ಷಣಾ ಸಂಘ– ಕಗ್ಗಲಿಪುರ ಘಟಕದ ಅಧ್ಯಕ್ಷ ನದೀಂ, ರೈತ ಮುಖಂಡ ಸಿ.ಪುಟ್ಟಸ್ವಾಮಿ, ಸೋಮನಹಳ್ಳಿ ಪವನ್‌ ಮುನಿರಾಜೇಗೌಡ, ನೆಲಗುಳಿ ಸಂಪತ್‌, ಕುಮಾರ ಸ್ವಾಮಿ, ಹಾಗೂ ನೆಲಗುಳಿ, ಸೋಮನಹಳ್ಳಿ ಹಾಗೂ ಕಗ್ಗಲಿಪುರ ಪಂಚಾಯಿತಿ ವ್ಯಾಪ್ತಿಯ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.