ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲದಿಂದ ನೀರು, ಮೇವಿಲ್ಲದೆ ಜಾನುವಾರುಗಳು ಸಂಕಟ ಅನುಭವಿಸುತ್ತಿವೆ. ಎಲ್ಲೆಲ್ಲಿ ಅಗತ್ಯವೋ ಅಲ್ಲಿ ಗೋಶಾಲೆಗಳನ್ನು ಆರಂಭಿಸುವಂತೆ ಸರ್ಕಾರ ಆದೇಶ ಹೊರಡಿಸಿದ ಬಳಿಕವೂ ಚಿತ್ರದುರ್ಗವನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಈವರೆಗೂ ಗೋಶಾಲೆಗಳನ್ನು ಆರಂಭಿಸಿಲ್ಲ.
30 ಜಿಲ್ಲೆಗಳ ಪೈಕಿ 100 ತಾಲ್ಲೂಕುಗಳಲ್ಲಿ ಕಣ್ಣು ಬಿಡಲೂ ಸಾಧ್ಯವಿಲ್ಲದಷ್ಟು ಬಿಸಿಲಿನ ಪ್ರಖರತೆ ಇದೆ. ಕೆಲ ಹಳ್ಳಿಗಳಲ್ಲಿ ನೀರು, ಮೇವಿಲ್ಲದೆ ಜಾನುವಾರುಗಳು ನಿತ್ಯ ಆಹಾರಕ್ಕಾಗಿ ಮೇಲೆ–ಕೆಳಗೆ ನೋಡುವಂತಾಗಿದೆ. ಅವುಗಳ ರಕ್ಷಣೆಗೆ ಗೋಶಾಲೆಗಳನ್ನು ಆರಂಭಿಸಲು ಜಿಲ್ಲಾಧಿಕಾರಿಗಳು ಸ್ಥಳ ಗುರುತು ಮಾಡಿ ಸುಮ್ಮನಿದ್ದಾರೆ.
ಬರದ ಛಾಯೆ ಈ ಬಾರಿ ಬೇಗನೇ ಆವರಿಸಿದೆ. ಮಾರ್ಚ್–ಏಪ್ರಿಲ್‌ವರೆಗೂ ಕಾಯದೆ ಅಗತ್ಯವಿದ್ದಲ್ಲಿ ಗೋಶಾಲೆಗಳನ್ನು ಪ್ರಾರಂಭಿಸುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತುಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮುಖ್ಯಮಂತ್ರಿ ಮತ್ತು ಸಚಿವರು ಸೂಚಿಸಿದ್ದಾರೆ. ಆದರೂ, ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ.
ಈಗಾಗಲೇ ಚಿತ್ರದುರ್ಗದಲ್ಲಿ ಆರಂಭಿಸಿರುವ ಮೂರು ಗೋಶಾಲೆಗಳಲ್ಲಿ 975 ಜಾನುವಾರುಗಳಿಗೆ ಮಾತ್ರ ರಕ್ಷಣೆ ಸಿಕ್ಕಿದೆ.
ಪುಡಿಗಾಸಿಗೆ ಜಾನುವಾರುಗಳ ಮಾರಾಟ: ‘ಜಾನುವಾರುಗಳಿಗೆ ಮೇವು ಹೊಂದಿಸಲು ಆಗದ ಕಾರಣ ಅವುಗಳನ್ನು ಪುಡಿಗಾಸಿಗೆ ಮಾರುತ್ತಿದ್ದಾರೆ. ನಮ್ಮ ಹೊಟ್ಟೆಗೆ ಹಿಟ್ಟಿಲ್ಲ. ಇನ್ನು ಅವುಗಳನ್ನು ಹೇಗೆ ಸಾಕುವುದು? ಬರದ ಪರಿಸ್ಥಿತಿ ಅರಿತು ಗೋಶಾಲೆ ಆರಂಭಿಸಿದ್ದರೆ ಜಾನುವಾರುಗಳನ್ನು ಅಲ್ಲಿ ಬಿಡಬಹುದಾಗಿತ್ತು. ಸರ್ಕಾರ ಮತ್ತು ವಿರೋಧ ಪಕ್ಷದವರು ಕಿತ್ತಾಡಿಕೊಳ್ಳುವುದರಲ್ಲಿ ರೈತರನ್ನು ಮರೆತಿದ್ದಾರೆ’ ಎಂದು ಆರೋಪಿಸುತ್ತಾರೆ ಮುದ್ದೇ ಬಿಹಾಳದ ಯಲಗೂರಿನ ರೈತ ಶಾಂತಯ್ಯ ಹಿರೇಮಠ.
‘ಬೆಳೆ ಕೈಗೆ ಸಿಗದ ಕಾರಣ, ಮೇವು ಇರುವವರ ಬಳಿ ಖರೀದಿಗೆ ಹಣದ ಕೊರತೆ ಎದುರಾಗಿದೆ. ಇದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಲವು ಕುಟುಂಬಗಳು ಕೂಲಿ ಅರಿಸಿ ಗುಳೆ ಹೋಗುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
‘ಏಪ್ರಿಲ್, ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿಯಿತು. ಬಳಿಕ ಜೂನ್, ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಮಳೆ ಸುರಿಯಲಿಲ್ಲ. ಭಾರಿ ಮಳೆಯ ಕೊರತೆಯಿಂದ ಬಿತ್ತನೆ ಕಾರ್ಯ ಹೇಳಿಕೊಳ್ಳುವಷ್ಟು ಪ್ರಮಾಣದಲ್ಲಿ ಇರಲಿಲ್ಲ. ಬಿತ್ತನೆ ಮಾಡಿರುವ ಬೆಳೆ ತೇವಾಂಶವಿಲ್ಲದೆ ಒಣಗಿಹೋಗಿದೆ. ಜತೆಗೆ ಕೆರೆಗಳ ಒಡಲೂ ಬತ್ತಿಹೋಗಿದೆ. ಜಾನುವಾರುಗಳ ಸಂಕಟ ಕಣ್ಣಿಗೆ ಕಾಣುತ್ತಿದ್ದರೂ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ’ ಎಂದು ರೈತರು ದೂರುತ್ತಾರೆ.
‘ಹೈದರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಬರಪೀಡಿತ ಪ್ರದೇಶಗಳು. ರೈತ ಪರ ಸರ್ಕಾರ ಎಂದುಕೊಂಡೇ ಕಾಲ ಕಳೆಯುತ್ತಿದೆ. ಆದರೆ, ಪರಿಹಾರ ಮಾತ್ರ ದೊರೆಯುತ್ತಿಲ್ಲ. ಬರದ ಪರಿಶೀಲನೆ ಅಂತ ಐಷಾರಾಮಿ ಹೋಟೆಲ್‌ಗಳಲ್ಲಿ ಕುಳಿತು ಚರ್ಚಿಸುತ್ತಾರೆ. ನಮ್ಮ ಸಮಸ್ಯೆಗಳು ಮಾತ್ರ ಹಾಗೆಯೇ ಉಳಿ ಯುತ್ತವೆ ಎಂದು ರಾಯಬಾಗದ ರೈತ ಮಹೇಶ್ ಎಸ್. ಬಾಡಗಿ ಹೇಳುತ್ತಾರೆ.
‘ಬರ ತೀವ್ರವಾಗಿರುವ ಪ್ರದೇಶಗಳ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿಗಳುಪರಿಶೀಲಿಸಿದ್ದಾರೆ. ಸುಮಾರು 300–350 ಗೋಶಾಲೆಗಳ ಪ್ರಾರಂಭಕ್ಕೆ ಜಾಗ ಗುರುತಿಸಿರುವ ಅವರು, ಪರಿಹಾರ ಮಾರ್ಗೋಪಾಯಗಳನ್ನು ಸಿದ್ಧಪಡಿಸುತ್ತಿದ್ದಾರೆ’ ಎಂದು ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ಶಾಖೆಯ ಅಧಿಕಾರಿಗಳು ವಿವರಿಸುತ್ತಾರೆ.
ಮಾರ್ಚ್‌ನಲ್ಲಿ ಆರಂಭ
ಡಿಸೆಂಬರ್‌ನಲ್ಲಿ ದಕ್ಷಿಣ ಕರ್ನಾಟಕ ಮತ್ತು ಜನವರಿಯಲ್ಲಿ ಉತ್ತರ ಕರ್ನಾಟಕದಲ್ಲಿ ಬೆಳೆಗಳನ್ನು ಕಟಾವು ಮಾಡುತ್ತಾರೆ. ಅದರಂತೆ ರಾಗಿ ಮತ್ತು ಮೆಕ್ಕೆಜೋಳ ಎಲ್ಲೆಲ್ಲಿ ಹೆಚ್ಚಾಗಿ ದೊರೆಯುತ್ತದೋ ಅಲ್ಲಿಯೂ ಗೋಶಾಲೆ ಆರಂಭಕ್ಕೆ ಸ್ಥಳಗಳನ್ನು ಗುರುತು ಮಾಡಿರುವುದಾಗಿ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಕಂದಾಯ ಇಲಾಖೆ ಮೂಲಗಳು ಹೇಳಿವೆ.
***
ಅಂಕಿ ಅಂಶ
₹ 6,000- ನಿಗದಿಪಡಿಸಿರುವ ಟನ್ ಮೇವಿನ ಬೆಲೆ
₹ 270 ಕೋಟಿ -ಸರ್ಕಾರದಿಂದ ಬರ ಪರಿಹಾರ ಕಾರ್ಯಕ್ಕೆ ಬಿಡುಗಡೆಯಾದ ಅನುದಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.