ADVERTISEMENT

ಐವರು ಸ್ಕೇಟಿಂಗ್‌ ಪಟುಗಳಿಗೆ ಸರ್ಕಾರದಿಂದ ನೆರವು: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2022, 19:30 IST
Last Updated 11 ಡಿಸೆಂಬರ್ 2022, 19:30 IST
ಬಸವನಗುಡಿ‌ಯಲ್ಲಿ ‘ಕ್ರೀಡಾ ಸಂಕೀರ್ಣ’ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಉದ್ಘಾಟಿಸಿದರು. ಸಚಿವ ಆರ್‌. ಅಶೋಕ, ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಮಣ್ಯ ಇದ್ದರು
ಬಸವನಗುಡಿ‌ಯಲ್ಲಿ ‘ಕ್ರೀಡಾ ಸಂಕೀರ್ಣ’ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಉದ್ಘಾಟಿಸಿದರು. ಸಚಿವ ಆರ್‌. ಅಶೋಕ, ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಮಣ್ಯ ಇದ್ದರು   

ಬೆಂಗಳೂರು: ‘ಐವರು ರಾಷ್ಟ್ರೀಯ ಸ್ಕೇಟಿಂಗ್‌ ಕ್ರೀಡಾಪಟುಗಳನ್ನುರಾಜ್ಯದ ಸರ್ಕಾರ ದತ್ತು ತೆಗೆದುಕೊಳ್ಳುತ್ತಿದ್ದು, ಪ್ಯಾರಿಸ್‌ ಒಲಿಪಿಂಕ್ಸ್‌ವರೆಗೆ ಎಲ್ಲ ರೀತಿಯ ನೆರವನ್ನು ನೀಡಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬಿಬಿಎಂಪಿ ಹಾಗೂ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಸಹಯೋಗದೊಂದಿಗೆ ಬಸವನಗುಡಿ‌ ವಿಧಾನಸಭಾ ಕ್ಷೇತ್ರ ವಿದ್ಯಾಪೀಠ ವಾರ್ಡ್‌ನ ಸಿ.ಟಿ ಬೆಡ್‌ನಲ್ಲಿ ನಿರ್ಮಿಸಿರುವ ‘ಕ್ರೀಡಾ ಸಂಕೀರ್ಣ’ ಹಾಗೂ 60ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಈಗಾಗಲೇ 75 ಕ್ರೀಡಾಪಟುಗಳನ್ನು ದತ್ತು ತೆಗೆದುಕೊಂಡಿದೆ. ಐವರು ಸ್ಕೇಟಿಂಗ್‌ಪಟುಗಳನ್ನು ಸರ್ಕಾರ ದತ್ತು ತೆಗೆದುಕೊಂಡು, ಅವರು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಿದೆ ಎಂದರು.

ADVERTISEMENT

ಬಸವನಗುಡಿಯಲ್ಲಿ ನಿರ್ಮಿಸಲಾಗಿರುವ ಈ ಕ್ರೀಡಾ ಸಂಕೀರ್ಣ ದೇಶದಲ್ಲಿ ಅತ್ಯಾಧುನಿಕ ಸೌಲಭ್ಯವನ್ನು ಒಳಗೊಂಡಿದೆ. ಸ್ಕೇಟಿಂಗ್‌ ಪಟುಗಳು ಇಲ್ಲಿಗೆ ಬಂದು ವಿಶ್ವದರ್ಜೆಯ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬಹುದು. ದೇಶಕ್ಕೆ ಪದಕ ತಂದುಕೊಡಲು ಶ್ರಮಿಸಬಹುದು ಎಂದರು.

60ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ರಾಷ್ಟ್ರದ ಎಲ್ಲಾ ರಾಜ್ಯದ ಸುಮಾರು 4 ಸಾವಿರ ಅಂತರ ರಾಷ್ಟ್ರೀಯ ಸ್ಪರ್ಧಿಗಳು ಭಾಗವಹಿಸಿದ್ದರು.

ಬಸವನಗುಡಿ ವಿಧಾನಸಭೆ ಕ್ಷೇತ್ರದ ಶಾಸಕ ರವಿ ಸುಬ್ರಮಣ್ಯ ಮಾತನಾಡಿ, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಸವನಗುಡಿಯ ಪಾರಂಪರಿಕ ತಾಣ ಯೋಜನೆಗೆ ಸದ್ಯವೇ ಚಾಲನೆ ನೀಡಲಿದ್ದಾರೆ. ಅಲ್ಲದೆ, ದೇವಸ್ಥಾನಗಳ ಪ್ರವಾಸಿ ಯೋಜನೆ ‘ಟೆಂಪರ್‌ ಸರ್ಕ್ಯೂಟ್‌’ ಕೂಡ ಆರಂಭವಾಗಲಿದೆ’ ಎಂದರು.

ಕಂದಾಯ ಸಚಿವ ಆರ್. ಅಶೋಕ, ಸಂಸದ ತೇಜಸ್ವಿ ಸೂರ್ಯ,ಆಡಳಿತಾಧಿಕಾರಿ ರಾಕೇಶ್ ಸಿಂಗ್, ವಲಯ ಆಯುಕ್ತ ಜಯರಾಮ್ ರಾಯಪುರ, ವಲಯ ಜಂಟಿ ಆಯುಕ್ತ ಜಗದೀಶ್ ನಾಯ್ಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.