ಬಿಬಿಎಂಪಿ
ಬೆಂಗಳೂರು: ರಾಜ್ಯ ಸರ್ಕಾರ ‘ವಿಶೇಷ ಮೂಲಸೌಕರ್ಯಕ್ಕೆ ಬಂಡವಾಳ ಬೆಂಬಲ’ ಯೋಜನೆಯಡಿ 2024–25ನೇ ಸಾಲಿನ ಮೊದಲ ಕಂತು ₹750 ಕೋಟಿ ಅನುದಾನವನ್ನು ಬಿಬಿಎಂಪಿಗೆ ಜುಲೈ 11ರಂದು ಬಿಡುಗಡೆ ಮಾಡಿದೆ.
ಬೃಹತ್ ರಸ್ತೆಗಳು, ಮೇಲ್ಸೇತುವೆ, ಕಾರಿಡಾರ್ ಮುಂತಾದ ಯೋಜನೆಗಳನ್ನು ‘ವಿಶೇಷ ಮೂಲಸೌಕರ್ಯಕ್ಕೆ ಬಂಡವಾಳ ಬೆಂಬಲ’ ಯೋಜನೆಯಡಿ ಬಿಬಿಎಂಪಿ ಅನುಷ್ಠಾನಗೊಳಿಸುತ್ತಿದ್ದು, ಇದಕ್ಕಾಗಿ ಈ ಆರ್ಥಿಕ ವರ್ಷದಲ್ಲಿ ₹3 ಸಾವಿರ ಕೋಟಿ ನಿಗದಿ ಮಾಡಲಾಗಿದೆ. ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ವಹಿಸಲಾಗಿರುವ ಕಾಮಗಾರಿಗಳಿಗೆ ₹2,400 ಕೋಟಿ ಮೌಲ್ಯದ ಬಿಲ್‌ಗಳನ್ನು ಇನ್ನೂ ಪಾವತಿಸಬೇಕಿದೆ.
ಮೊದಲನೇ ತ್ರೈಮಾಸಿಕದ ಕಂತು ₹750 ಕೋಟಿಯನ್ನು ಈ ಯೋಜನೆಯಡಿಯ ಕಾಮಗಾರಿಗಳಿಗೆ ಮಾತ್ರ ಬಳಸಿಕೊಳ್ಳಬೇಕು. ಹಣ ಬಿಡುಗಡೆ ಮಾಡಿದ ವರದಿಯೊಂದಿಗೆ ಪ್ರಮಾಣ ಪತ್ರವನ್ನೂ ಸಲ್ಲಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ.
‘ಬಿಬಿಎಂಪಿಯಲ್ಲಿ ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ವಹಿಸಲಾಗಿರುವ ಕಾಮಗಾರಿಗಳನ್ನು ಪರಿಶೀಲಿಸುವ ಕಾರಣದಿಂದ ಬಿಲ್ ಮೊತ್ತದಲ್ಲಿ ಕಳೆದ ವರ್ಷದಿಂದ ಶೇ 75ರಷ್ಟು ಮಾತ್ರ ಪಾವತಿ ಮಾಡಲಾಗುತ್ತಿದೆ. ಬಾಕಿ ಉಳಿಸಿಕೊಂಡಿರುವ ಶೇ 25ರಷ್ಟು ಮೊತ್ತವೇ ₹1 ಸಾವಿರ ಕೋಟಿಯಷ್ಟಿದೆ. ಇದೀಗ ₹750 ಕೋಟಿ ಪಾವತಿ ಮಾಡಿದರೂ ಇನ್ನೂ ₹2,650 ಕೋಟಿಯಷ್ಟು ಬಾಕಿ ಉಳಿಯಲಿದೆ’ ಎಂದು ಬಿಬಿಎಂಪಿ ಗುತ್ತಿಗೆದಾರರು ತಿಳಿಸಿದ್ದಾರೆ.
‘ಬಿಬಿಎಂಪಿ ಅನುದಾನದಲ್ಲಿ ನಿರ್ವಹಿಸಲಾಗಿರುವ ಕಾಮಗಾರಿಗಳಿಗೆ 2022ರ ನವೆಂಬರ್ ಅಂತ್ಯದವರೆಗೆ ಬಿಲ್ ಪಾವತಿ ಮಾಡಲಾಗುತ್ತಿದೆ. 24 ತಿಂಗಳು ಬಾಕಿ ಉಳಿದಿದ್ದ ಬಿಲ್ ಪಾವತಿ ಅವಧಿ 19 ತಿಂಗಳಿಗೆ ಇಳಿದಿದೆಯಾದರೂ ಇನ್ನೂ ₹2,500 ಕೋಟಿಗೂ ಹೆಚ್ಚು ಮೊತ್ತ ಬಾಕಿ ಉಳಿದಂತಾಗುತ್ತದೆ’ ಎಂದಿದ್ದಾರೆ.
‘ಕಳೆದ ವರ್ಷದ ಆಗಸ್ಟ್ ವೇಳೆಗೆ ಬಿಬಿಎಂಪಿ ಗುತ್ತಿಗೆದಾರರಿಗೆ ಒಟ್ಟಾರೆಯಾಗಿ ₹6 ಸಾವಿರ ಕೋಟಿಯಷ್ಟು ಬಿಲ್ ಪಾವತಿಸಬೇಕಾಗಿತ್ತು. ರಾಜ್ಯ ಸರ್ಕಾರ ಜುಲೈ 11ರಂದು ₹750 ಕೋಟಿ ಹಾಗೂ ಬಿಬಿಎಂಪಿ ಸುಮಾರು ₹250 ಕೋಟಿಯನ್ನು ಬಿಡುಗಡೆ ಮಾಡಿರುವುದರಿಂದ ಸುಮಾರು ₹1 ಸಾವಿರ ಕೋಟಿಯಷ್ಟು ಬಾಕಿ ಕಡಿಮೆಯಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ಬಹುತೇಕ ಎಲ್ಲ ಬಾಕಿ ಪಾವತಿಯಾಗುವ ಭರವಸೆ ದೊರೆತಿದೆ’ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.