ADVERTISEMENT

ಮಹನೀಯರ ಜಯಂತಿಗಳ ಸರ್ಕಾರಿ ರಜೆ ರದ್ದಾಗಲಿ: ವೂಡೇ ಪಿ. ಕೃಷ್ಣ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 9:35 IST
Last Updated 2 ಅಕ್ಟೋಬರ್ 2021, 9:35 IST

ಬೆಂಗಳೂರು: 'ಮಹಾತ್ಮ ಗಾಂಧಿ ಜಯಂತಿ ರಜೆ ಸೇರಿದಂತೆ ಎಲ್ಲ ನಾಯಕರಿಗೆ ನೀಡಲಾಗಿರುವ ಸರ್ಕಾರಿ ರಜೆಗಳನ್ನು ರದ್ದು ಮಾಡಬೇಕು'ಎಂದು ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರೂ ಆದ 'ನಾಡೋಜ"ವೂಡೇ ಪಿ.ಕೃಷ್ಣ ಸರ್ಕಾರಕ್ಕೆ ಆಗ್ರಹಿಸಿದರು.

ಶನಿವಾರ, ಗಾಂಧಿ ಭವನದಲ್ಲಿ ನಡೆದ "2020ನೇ ಸಾಲಿನ ಗಾಂಧಿ ಸೇವಾ ಪ್ರಶಸ್ತಿ" ‌ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾರಂಭದಲ್ಲಿ ಹಾಜರಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಈ ಕುರಿತು ಮನವಿ ಮಾಡಿದರು.

"ನಾವು ಮಹನೀಯರ ಜಯಂತಿಗಳನ್ನು ಸರ್ಕಾರಿ ರಜೆಯ ಮೂಲಕ ಆಚರಿಸುವ ಬದಲಿಗೆ ಅಂದು ಶಾಲಾ-ಕಾಲೇಜು ಕಚೇರಿಗಳಲ್ಲಿ ಹಾಜರಿದ್ದು ಕೆಲಸ ಮಾಡಬೇಕು. ಈ ಮೂಲಕ ನಾಡಿಗೆ ಕೊಡುಗೆ ನೀಡಿದ ಹಿರಿಯರ ವಿಚಾರಗಳನ್ನು ಅಂತರ್ಗತ ಮಾಡಿಕೊಳ್ಳಬೇಕು" ಎಂದರು.

ADVERTISEMENT

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ನಾವಿವತ್ತು ಅಪ್ರಯೋಜಕ ಸುಳ್ಳುಗಳನ್ನು ರೂಢಿಸಿಕೊಂಡಿದ್ದೇವೆ. ಸಮಾಜದಲ್ಲಿ ನಾಗರಿಗಕರ ಜವಾಬ್ದಾರಿ ಕೊರತೆ ಎದ್ದು ಕಾಣುತ್ತಿದೆ" ಎಂದು ವಿಷಾದಿಸಿದರು.

"ಅಧಿಕಾರಸ್ಥರು ಸೇರಿದಂತೆ ಎಲ್ಲರೂ ಸುಳ್ಳು ಹೇಳುವುದನ್ನು ಕಡಿಮೆ ಮಾಡಿ ಬದ್ಧತೆಯೊಂದಿಗೆ ಕೆಲಸ ಮಾಡಬೇಕು" ಎಂದರು.

ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಶೋಕ ಬಿ.ಹಿಂಚಿಗೇರಿ ಮಾತನಾಡಿ, ಸಿದ್ದಗಂಗಾ ಮಠ ಮತ್ತು ಮೀರಾತಾಯಿಯವರ ಕೊಡುಗೆಗಳನ್ನು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.