
ಬೆಂಗಳೂರು: ‘ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಕಾಯಂ ಬೋಧಕ, ಬೋಧಕೇತರ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡುವುದರ ಜತೆಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ತಿಳಿಸಿದರು.
ಬಾಗಲೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ‘ಸರ್ಕಾರವು ಕೌಶಲ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಪದವಿ ವ್ಯಾಸಂಗ ಮಾಡುತ್ತಿರುವ ಬಾಲಕಿಯರಿಗೆ ₹30 ಸಾವಿರ ಪ್ರೋತ್ಸಾಹಧನ ನೀಡಲು ಅಜೀಂ ಪ್ರೇಮ್‌ಜೀ ಪ್ರತಿಷ್ಠಾನದ ನೆರವಿನೊಂದಿಗೆ ದೀಪಿಕಾ ಯೋಜನೆ ಆರಂಭಿಸಿದೆ. ಪ್ರತಿಭಾನ್ವಿತ ಮಕ್ಕಳು ವಿದೇಶಿ ಶಿಕ್ಷಣ ಪಡೆಯಲು ವಿದೇಶಿ ವಿಶ್ವವಿದ್ಯಾಲಯಗಳ ಜತೆಗೂ ಒಡಂಬಡಿಕೆ ಮಾಡಿಕೊಂಡಿದ್ದೇವೆ’ ಎಂದರು.
‘ಸ್ನಾತಕೋತ್ತರ ಕೇಂದ್ರಕ್ಕೆ ಅಗತ್ಯ ಜಾಗ ಒದಗಿಸಬೇಕು. ಇದರಿಂದ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೂ ಗುಣಮಟ್ಟದ ಉನ್ನತ ಶಿಕ್ಷಣ ನೀಡಲು ಸೌಲಭ್ಯ ನೀಡಲು ಸಹಕಾರಿಯಾಗಲಿದೆ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ‘ಬಾಗಲೂರು ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಸಕ್ತ ವರ್ಷ ಎಂ.ಕಾಂ ಮತ್ತು ಎಂಸಿಎ ಕೋರ್ಸ್ ಆರಂಭವಾಗಿದ್ದು, ಮುಂದಿನ ವರ್ಷದಿಂದ ಬಿಸಿಎ, ಬಿಬಿಎ, ಬಿ.ಕಾಂ ಪ್ರವೇಶಕ್ಕೆ ಅವಕಾಶ ಸಿಗಲಿದೆ. ಕೇಂದ್ರಕ್ಕೆ ಅಗತ್ಯವಿರುವ ಜಮೀನು ಮತ್ತು ಮೂಲಸೌಕರ್ಯ ಒದಗಿಸಲಾಗುತ್ತದೆ’ ಎಂದು ಹೇಳಿದರು.
ಕುಲಪತಿ ಬಿ. ರಮೇಶ್ ಮಾತನಾಡಿ, ‘ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸಲು ಸ್ನಾತಕೋತ್ತರ ಕೇಂದ್ರ ಮಹತ್ವದ ಹೆಜ್ಜೆಯಾಗಿದೆ. ವಿ.ವಿಯಲ್ಲಿ 85 ವೃತ್ತಿಪರ ಪದವಿ ಕೋರ್ಸ್ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಕೋರ್ಸ್‌ಗಳನ್ನು ಹೆಚ್ಚಿಸಲಾಗುವುದು’ ಎಂದು ತಿಳಿಸಿದರು.
ಕುಲಸಚಿವರಾದ ಎ.ನವೀನ್ ಜೋಸೆಫ್(ಆಡಳಿತ), ರಮೇಶ್ ಬಿ. ಕುಡೇನಟ್ಟಿ( ಮೌಲ್ಯಮಾಪನ), ವಿತ್ತಾಧಿಕಾರಿ ಎಂ.ವಿ. ವಿಜಯಲಕ್ಷ್ಮೀ, ಬಾಗಲೂರು ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ರಿತಿಕಾ ಸಿನ್ಹಾ, ಬಾಗಲೂರು ಗ್ರಾ.ಪಂ ಅಧ್ಯಕ್ಷ ಎ. ಕೆಂಪೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.