ADVERTISEMENT

ಯುವಜನರ ಬಗ್ಗೆ ಸರ್ಕಾರಗಳಿಗಿಲ್ಲ ಕಾಳಜಿ: ಬಿ. ಸುರೇಶ್

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 15:39 IST
Last Updated 26 ಜೂನ್ 2025, 15:39 IST
ಆಲ್‌ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಯುವಜನರ ಆಗ್ರಹ ದಿನ ಕಾರ್ಯಕ್ರಮದಲ್ಲಿ ವಿನಯ ಸಾರಥಿ, ಶರಣಪ್ಪ ಉದ್ಭಾಳ್, ಸಿದ್ದಲಿಂಗ ಬಾಗೇವಾಡಿ, ಬಿ. ಸುರೇಶ್, ಡಾ.ಶಶಿಧರ್, ಶಶಿಕುಮಾರ್ ಮತ್ತು ವಿದ್ಯಾರ್ಥಿಗಳು ಘೋಷಣೆ ಕೂಗಿದರು.
ಪ್ರಜಾವಾಣಿ ಚಿತ್ರ
ಆಲ್‌ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಯುವಜನರ ಆಗ್ರಹ ದಿನ ಕಾರ್ಯಕ್ರಮದಲ್ಲಿ ವಿನಯ ಸಾರಥಿ, ಶರಣಪ್ಪ ಉದ್ಭಾಳ್, ಸಿದ್ದಲಿಂಗ ಬಾಗೇವಾಡಿ, ಬಿ. ಸುರೇಶ್, ಡಾ.ಶಶಿಧರ್, ಶಶಿಕುಮಾರ್ ಮತ್ತು ವಿದ್ಯಾರ್ಥಿಗಳು ಘೋಷಣೆ ಕೂಗಿದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ಕಾರ್ಮಿಕರನ್ನು ಹೆಚ್ಚು ದುಡಿಸಿಕೊಂಡು ಹೆಚ್ಚು ಲಾಭ ಮಾಡಿಕೊಳ್ಳುವ ನೀತಿ ಎಲ್ಲ ಕಾರ್ಪೊರೇಟ್‌ ಸಂಸ್ಥೆಗಳದ್ದಾಗಿದೆ. ಕಾರ್ಮಿಕರ ಬಗ್ಗೆ, ಯುವಜನರ ಬಗ್ಗೆ ಸರ್ಕಾರಗಳಿಗೂ ಕಾಳಜಿ ಇಲ್ಲ ಎಂದು ಸಿನಿಮಾ ನಿರ್ದೇಶಕ ಬಿ. ಸುರೇಶ್‌ ತಿಳಿಸಿದರು.

ಆಲ್ ಇಂಡಿಯಾ ಡೆಮಾಕ್ರೆಟಿಕ್‌ ಯೂತ್‌ ಆರ್ಗನೈಸೇಷನ್‌ (ಎಐಡಿವೈಒ) 60ನೇ ಸಂಸ್ಥಾಪನಾ ವರ್ಷಾಚರಣೆಯ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಯುವಜನರ ಆಗ್ರಹ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರಮ ಪಡಬೇಕು, ನಿಜ. ಆದರೆ, ಮನುಷ್ಯನಿಗೆ ದುಡಿಮೆಯೊಂದೇ ಅಲ್ಲ, ನೆಮ್ಮದಿ, ಸಂತೋಷ, ಕುಟುಂಬದೊಂದಿಗೆ ಕಾಲ ಕಳೆಯಲು ಸಮಯ ಎಲ್ಲವೂ ಇರಬೇಕು. ಅದಕ್ಕಾಗಿಯೇ ಎಂಟು ಗಂಟೆ ಕೆಲಸ ಎಂದು ಕಾನೂನು ಮಾಡಲಾಗಿತ್ತು. ಈಗ ದಿನಕ್ಕೆ 10 ಗಂಟೆಗೂ ಅಧಿಕ ಸಮಯ ದುಡಿಸಿಕೊಳ್ಳಲು ಕಾರ್ಪೊರೇಟ್‌ ಸಂಸ್ಥೆಗಳು ಮುಂದಾಗಿವೆ. ಸರ್ಕಾರಗಳೂ ಅವರ ಪರ ಇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಸರ್ಕಾರವು ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ. ರಾಜ್ಯದಲ್ಲಿ ನಿರುದ್ಯೋಗಿ ಯುವಪಡೆಯೇ ಸೃಷ್ಟಿಯಾಗಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿದ್ದ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಮರೆತುಬಿಟ್ಟಿದೆ. ರಾಜ್ಯದ 44 ಇಲಾಖೆಗಳಲ್ಲಿ 2.75 ಲಕ್ಷ ಹುದ್ದೆಗಳು ಖಾಲಿ ಇವೆ. ಎಲ್ಲ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಎಐಡಿವೈಒ ಅಖಿಲ ಭಾರತ ಉಪಾಧ್ಯಕ್ಷ ಶಶಿಕುಮಾರ್‌ ಆಗ್ರಹಿಸಿದರು.

ಹಕ್ಕೊತ್ತಾಯ ಮಂಡನೆ: ಸಾಮಾಜಿಕ ಜಾಲತಾಣಗಳು ಮತ್ತು ಸಮೂಹ ಮಾಧ್ಯಮಗಳಲ್ಲಿನ ಅಶ್ಲೀಲ ವಿಡಿಯೊಗಳು, ಹಿಂಸೆ ಮತ್ತು ಕ್ರೌರ್ಯವನ್ನು ನಿಷೇಧಿಸಬೇಕು. ಯುವಜನರನ್ನು ವ್ಯಸನಕ್ಕೀಡುಮಾಡುತ್ತಿರುವ ಆನ್‌ಲೈನ್‌ ಗೇಮ್‌, ಬೆಟ್ಟಿಂಗ್‌ ಹಾಗೂ ಮಾದಕ ದ್ರವ್ಯಗಳನ್ನು ನಿಷೇಧಿಸಬೇಕು. ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೆ ಕೂಡಲೇ ನೇಮಕಾತಿ ಆದೇಶವನ್ನು ನೀಡಬೇಕು. ಕೆ‍ಪಿಎಸ್‌ಸಿಯಲ್ಲಿ ನಡೆಯುವ ಅಕ್ರಮ ಮತ್ತು ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕಬೇಕು. ನೇಮಕಾತಿ ಶುಲ್ಕಗಳನ್ನು ಕೈಬಿಡಬೇಕು. ನೇಮಕಾತಿ ಪ್ರವೇಶ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಗೆ ಬಜೆಟ್‌ ಅನುದಾನವನ್ನು ಹೆಚ್ಚಿಸಬೇಕು. ಕೂಲಿಯನ್ನು ₹600ಕ್ಕೆ, ಮಾನವ ಕೆಲಸದ ದಿನಗಳನ್ನು 200ಕ್ಕೆ ಹೆಚ್ಚಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಲಾಯಿತು.

ಎಐಡಿವೈಒ ರಾಜ್ಯ ಘಟಕದ ಅಧ್ಯಕ್ಷ ಶರಣಪ್ಪ ಉದ್ಭಾಳ್ ಅಧ್ಯಕ್ಷತೆ ವಹಿಸಿದ್ದರು. ಮನೋವೈದ್ಯ ಡಾ. ಶಶಿಧರ್‌ ಬೀಳಗಿ, ಯುಎಫ್‌ಡಿಪಿಯು ರಾಜ್ಯ ಘಟಕದ ಅಧ್ಯಕ್ಷ ವಿನಯ್‌ ಸಾರಥಿ, ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಉಪಸ್ಥಿತರಿದ್ದರು.

ಯುವಜನರ ಆಗ್ರಹ ದಿನ ಕಾರ್ಯಕ್ರಮದಲ್ಲಿ ‘ಅಂಕುರ ಸಾಂಸ್ಕೃತಿಕ ವೇದಿಕೆ’ಯ ಕಲಾವಿದರು ಕಿರುನಾಟಕ ಪ್ರದರ್ಶಿಸಿದರು. ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.