
ಬೆಂಗಳೂರು: ‘18 ವರ್ಷ ತುಂಬಿದ ಎಲ್ಲರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕಡ್ಡಾಯವಾಗಿ ಸೇರಿಸಿ, ಯಾವುದೇ ಆಮಿಷ, ಒತ್ತಡಗಳಿಗೆ ಒಳಗಾಗದೇ ಮತ ಚಲಾಯಿಸಬೇಕು’ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ತಿಳಿಸಿದರು.
ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಭಾನುವಾರ ಆಯೋಜಿಸಿದ್ದ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಮತದಾನದ ದಿನ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವವನ್ನು, ನಮ್ಮ ದೇಶವನ್ನು ರಕ್ಷಣೆ ಮಾಡಬೇಕು‘ ಎಂದು ಕಿವಿಮಾತು ಹೇಳಿದರು.
‘ಭಾರತದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನವು ಮತದಾನದ ಹಕ್ಕನ್ನು ನೀಡಿದೆ. ಈ ಹಕ್ಕನ್ನು ಬಳಸಿಕೊಂಡು ಜವಾಬ್ದಾರಿಯುತ ಸರ್ಕಾರ ರಚನೆಗೆ ಕಾರಣವಾಗಬಹುದು. ಒಳ್ಳೆಯ ಸರ್ಕಾರ ರಚನೆಯಾದಾಗ ದೇಶದ ಪ್ರಗತಿಯಾಗಲಿದೆ. ದೇಶದ ಅಭಿವೃದ್ದಿಯಲ್ಲಿ ಮತದಾರನ ಪಾಲು ಇರುವುದನ್ನು ಮರೆಯಬಾರದು’ ಎಂದರು.
‘ಸಣ್ಣ ಪುಟ್ಟ ದೋಷಗಳ ನಡುವೆಯೂ ನಿಷ್ಪಕ್ಷ, ನ್ಯಾಯಯುತ ಮತದಾನ ನಡೆಯುತ್ತದೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿ ಮುಂದಿನ ದಶಕಗಳಲ್ಲಿ ಭಾರತವನ್ನು ಇನ್ನಷ್ಟು ಗಟ್ಟಿಗೊಳಿಸಲು ಇಂತಹ ಒಳಗೊಳ್ಳುವಿಕೆಯ ಪ್ರಕ್ರಿಯೆ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.
ರಾಜ್ಯದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಮಾತನಾಡಿ, ‘ರಾಜ್ಯದಲ್ಲಿ ಈಗಾಗಲೇ 18 ವರ್ಷ ತುಂಬಿದವರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಕ್ರಮ ವಹಿಸಲಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆಯಾ ಜಿಲ್ಲೆಗಳಲ್ಲಿ ವ್ಯವಸ್ಥಿತವಾಗಿ ಚಟುವಟಿಕೆ ನಡೆಸಲಾಗಿದೆ. ಮತದಾನದ ಮಹತ್ವವನ್ನು ಸ್ವೀಪ್ ಕಾರ್ಯಕ್ರಮಗಳ ಮೂಲಕ ತಿಳಿಸಲಾಗಿದೆ’ ಎಂದರು.
ಜಿಬಿಎ ಆಯುಕ್ತ ಎಂ.ಮಹೇಶ್ವರ ರಾವ್ ಮಾತನಾಡಿ, ‘ಚುನಾವಣೆಯು ಪ್ರಜಾಪ್ರಭುತ್ವದ ಪ್ರಮುಖ ಭಾಗ. ನಿರಂತರವಾಗಿ ಚಟುವಟಿಕೆಗಳು ನಡೆಯುತ್ತಿರುತ್ತವೆ. ಹಿರಿಯ ಅಧಿಕಾರಿಗಳು ಮಾತ್ರವಲ್ಲದೇ ಕೆಳ ಹಂತದ ಸಿಬ್ಬಂದಿಯೂ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ’ ಎಂದು ಹೇಳಿದರು.
ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳಾದ ಶುಭಾ ಕಲ್ಯಾಣ್, ಶಿಲ್ಪಾನಾಗ್, ವಿಜಯ ಮಹಾಂತೇಶ ದಾನಮ್ಮನವರ, ಜಿ. ಜಗದೀಶ್, ಬಿ. ಸುಶೀಲ, ಸುರೇಶ್ ಇಟ್ನಾಳ ಅವರನ್ನು ಮತ್ತು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ, ತಹಶೀಲ್ದಾರ್, ವಿವಿಧ ಹಂತದ ಅಧಿಕಾರಿಗಳು, ಬಿಎಲ್‌ಒಗಳನ್ನು ಗೌರವಿಸಲಾಯಿತು. ಮತದಾನದ ಕುರಿತು ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.