ADVERTISEMENT

ಆ್ಯಪ್‌ ಪ್ರತಿನಿಧಿ ಸೋಗಿನಲ್ಲಿ ಡ್ರಗ್ಸ್ ಸಾಗಣೆ: ಮತ್ತೊಬ್ಬ ಆರೋಪಿ ಬಂಧನ

ಗೋವಿಂದಪುರ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 21:37 IST
Last Updated 3 ಸೆಪ್ಟೆಂಬರ್ 2021, 21:37 IST
ಅಬ್ದುಲ್ ಖಾದರ್
ಅಬ್ದುಲ್ ಖಾದರ್   

ಬೆಂಗಳೂರು: ಆಹಾರ ಪೂರೈಕೆ ಆ್ಯಪ್‌ ಪ್ರತಿನಿಧಿ ಸೋಗಿನಲ್ಲಿ ಡ್ರಗ್ಸ್ ಸಾಗಣೆ ಮಾಡುತ್ತಿದ್ದ ಜಾಲವನ್ನು ಗೋವಿಂದಪುರ ಠಾಣೆ ಪೊಲೀಸರು ಭೇದಿಸಿದ್ದು, ಈ ಸಂಬಂಧ ಆರೋಪಿ ಅಬ್ದುಲ್ ಖಾದರ್ ಎಂಬಾತನನ್ನು ಬಂಧಿಸಿದ್ದಾರೆ.

ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ನೈಜೀರಿಯಾದ ಥಾಮಸ್ ಕಲ್ಲು ಎಂಬಾತನನ್ನು ಪೊಲೀಸರು ಇತ್ತೀಚೆಗಷ್ಟೇ ಬಂಧಿಸಿದ್ದರು. ತನಿಖೆ ಮುಂದುವರಿಸಿ, ಮಹಿಳಾ ಉದ್ಯಮಿ ಸೋನಿಯಾ ಅಗರವಾಲ್ ಹಾಗೂ ಆಕೆಯ ಸ್ನೇಹಿತ ಡಾ. ದಿಲೀಪ್‌ನನ್ನೂ ಸೆರೆಹಿಡಿದಿದ್ದರು.

‘ಆ್ಯಪ್‌ ಪ್ರತಿನಿಧಿ ಮೂಲಕ ಡ್ರಗ್ಸ್ ತರಿಸುತ್ತಿದ್ದ ಬಗ್ಗೆ ಸೋನಿಯಾ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದರು. ಅದೇ ಮಾಹಿತಿ ಆಧರಿಸಿ ಕೇರಳದ ಅಬ್ದುಲ್‌ ಖಾದರ್‌ನನ್ನು ಗುರುವಾರ ಬಂಧಿಸಲಾಗಿದೆ. ಆತನ ಬಳಿ ಎಕ್ಸೈಟೆಸ್ಸಿ ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ’ ಎಂದೂ ಪೊಲೀಸರು ಹೇಳಿದರು.

ADVERTISEMENT

‘ಬಿಟಿಎಂ ಬಡಾವಣೆಯಲ್ಲಿ ವಾಸವಿದ್ದ ಖಾದರ್, ನೈಜೀರಿಯಾ ಪ್ರಜೆಗಳ ಜೊತೆ ಒಡನಾಡವಿಟ್ಟುಕೊಂಡು ಕಡಿಮೆ ದರಕ್ಕೆ ಡ್ರಗ್ಸ್ ಖರೀದಿಸುತ್ತಿದ್ದ. ಸ್ವಿಗ್ಗಿ, ಡನ್ಜೊ ಹಾಗೂ ಇತರೆ ಆ್ಯಪ್‌ಗಳ ಪ್ರತಿನಿಧಿಗಳ ಸೋಗಿನಲ್ಲಿ ಸುತ್ತಾಡಿ ಗ್ರಾಹಕರಿಗೆ ಡ್ರಗ್ಸ್ ಮಾರುತ್ತಿದ್ದ’ ಎಂದೂ ತಿಳಿಸಿದರು.

ಡ್ರಗ್ಸ್ ಕಾಯ್ದಿರಿಸಲು ‘ಸ್ಮೈಲಿ’ ಎಮೋಜಿ: ‘ಆಹಾರ ಪದಾರ್ಥಗಳ ಪೊಟ್ಟಣಗಳಲ್ಲಿ ಡ್ರಗ್ಸ್ ಬಚ್ಚಿಟ್ಟು ಗ್ರಾಹಕರಿಗಾಗಿ ಕಳುಹಿಸಲಾಗುತ್ತಿತ್ತು. ಇಂಥ ಪೊಟ್ಟಣವನ್ನೇ ಸೋನಿಯಾ ಹಾಗೂ ದಿಲೀಪ್ ಖರೀದಿಸಿದ್ದರು’ ಎಂದು ಪೊಲೀಸರು ವಿವರಿಸಿದರು.

‘ಆರೋಪಿ ಡ್ರಗ್ಸ್‌ಗೆ ‘ಸ್ಮೈಲ್’ ಎಮೋಜಿ ಸಂಕೇತ ನೀಡಿದ್ದ. ವಾಟ್ಸ್‌ಆ್ಯಪ್‌ನಲ್ಲಿ ಯಾರಾದರೂ ‘ಸ್ಮೈಲ್’ ಎಮೋಜಿ ಕಳುಹಿಸಿದರೆ ಅವರಿಗೆ ಗಾಂಜಾ, ಎಕ್ಸೈಟೆಸ್ಸಿ ಹಾಗೂ ಎಂಡಿಎಂಎ ಮಾತ್ರೆಗಳನ್ನು ತಲುಪಿಸುತ್ತಿದ್ದ. ಆ್ಯಪ್‌ ಪ್ರತಿನಿಧಿಗಳ ರೀತಿಯಲ್ಲೇ ಬಟ್ಟೆ ಧರಿಸಿ ಹಾಗೂ ದ್ವಿಚಕ್ರ ವಾಹನದಲ್ಲಿ ಸುತ್ತಾಡುತ್ತಿದ್ದ. ಈತನ ಜೊತೆ ಮತ್ತಷ್ಟು ಮಂದಿ ಕೃತ್ಯದಲ್ಲಿ ಭಾಗಿಯಾಗಿರುವ ಅನುಮಾನವಿದೆ’ ಎಂದೂ ಪೊಲೀಸರು ಹೇಳಿದರು.

ಡ್ರಗ್ಸ್; ಯುವತಿ ಸೇರಿ ಇಬ್ಬರು ವಶಕ್ಕೆ
ಬೆಂಗಳೂರು:
ಮಣಿಪುರದಿಂದ ಡ್ರಗ್ಸ್ ತಂದು ನಗರದಲ್ಲಿ ಮಾರುತ್ತಿದ್ದ ಆರೋಪದಡಿ ಯುವತಿ ಸೇರಿ ಇಬ್ಬರನ್ನು ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಖಾಲಿದಾ ಹಾಗೂ ಸುಹೇಲ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಅವರಿಂದ ಸುಮಾರು ₹ 16 ಲಕ್ಷ ಮೌಲ್ಯದ ಹೆರಾಯಿನ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಣಿಪುರದಿಂದ ರೈಲಿನಲ್ಲಿ ನಗರಕ್ಕೆ ಬಂದಿದ್ದ ಆರೋಪಿಗಳು, ಅಗತ್ಯ ವಸ್ತುಗಳ ಬ್ಯಾಗ್‌ನಲ್ಲಿ ಬಚ್ಚಿಟ್ಟುಕೊಂಡು ಹೆರಾಯಿನ್ ತಂದಿದ್ದರು. ನಗರದಲ್ಲಿ ಪೆಡ್ಲರ್ ಮೂಲಕ ಗ್ರಾಹಕರಿಗೆ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.