ADVERTISEMENT

ಸರ್ಕಾರಿ ಶಾಲೆಗಳಿಗೂ ವೆಬ್‌ಸೈಟ್‌

ಒಂದೂವರೆ ತಿಂಗಳಲ್ಲಿ 49 ಸಾವಿರ ಸರ್ಕಾರಿ ಶಾಲೆಗಳ ಮಾಹಿತಿ ಬೆರಳ ತುದಿಯಲ್ಲಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 20:51 IST
Last Updated 3 ಜೂನ್ 2019, 20:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸರ್ಕಾರಿ ಶಾಲೆಗಳ ಸಹಿತ ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಾಹಿತಿಬೆರಳ ತುದಿಯಲ್ಲೇ ಸಿಗುವ ನಿಟ್ಟಿನಲ್ಲಿ ವೆಬ್‌ಸೈಟ್‌ ಒಂದನ್ನು ಶಿಕ್ಷಣ ಇಲಾಖೆ ಅಭಿವೃದ್ಧಿ‍ಪಡಿಸುತ್ತಿದ್ದು, ಒಂದೂವರೆ ತಿಂಗಳಲ್ಲಿ ಇದು ಕಾರ್ಯರೂಪಕ್ಕೆ ಬರುವ ನಿರೀಕ್ಷೆ ಇದೆ.

‘ನಿಮ್ಮ ಶಾಲೆಯ ಬಗ್ಗೆ ತಿಳಿಯಿರಿ’ (know your school) ಎಂಬ ಅಭಿಯಾನದ ಅಡಿಯಲ್ಲಿ ರಾಜ್ಯದ ಪ್ರತಿ ಶಾಲೆಯ ವಿವರವನ್ನು ಸಂಗ್ರಹಿಸುವ ಕಾರ್ಯ ಕೆಲವು ವರ್ಷಗಳ ಹಿಂದೆಆರಂಭವಾಗಿತ್ತು. ಎರಡು ವರ್ಷಗಳಿಂದೀಚೆಗೆ ಆನ್‌ಲೈನ್‌ನಲ್ಲಿ ಮಾಹಿತಿ ತರಿಸಿಕೊಂಡು ಅಪ್‌ಲೋಡ್‌ ಮಾಡಲಾಗುತ್ತಿತ್ತು. ಅದು ಬಹುತೇಕ ಕೊನೆಯ ಹಂತಕ್ಕೆ ಬಂದಿದೆ.

‘ಪ್ರತಿ ಶಾಲೆಯಿಂದ ತಲಾ ಎರಡು ಫೋಟೊಗಳನ್ನು ತರಿಸಿಕೊಂಡಿದ್ದೇವೆ. ವೆಬ್‌ಸೈಟ್‌ನಲ್ಲಿ ಅದನ್ನು ಅಪ್‌ಲೋಡ್‌ ಮಾಡಿದ್ದೇವೆ. ಶಾಲೆಯ ಬಗ್ಗೆ ಮಾಹಿತಿ ಪಡೆಯಲು ಲಾಗಿನ್‌ ಆದಾಗಫೋಟೊ ಸಹಿತ ಶಾಲೆಯಲ್ಲಿರುವ ಮಕ್ಕಳು, ಆಟದ ಮೈದಾನ, ಇತರ ಸೌಲಭ್ಯಗಳ ಮಾಹಿತಿ ದೊರೆಯುತ್ತದೆ. ವೆಬ್‌ಸೈಟ್‌ನಲ್ಲಿ ಖಾಸಗಿ ಶಾಲೆಗಳ ಮಾಹಿತಿಯೂ ಇರುತ್ತದೆ. ಆದರೆ ‍ಪೋಟೊ ಇರುವುದಿಲ್ಲ ಅಷ್ಟೇ’ ಎಂದು ಈ ವೆಬ್‌ಸೈಟ್‌ ಸಿದ್ಧತಾ ಕಾರ್ಯದಲ್ಲಿ ತೊಡಗಿರುವ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಶಾಲೆಗಳ ರಿಪೋರ್ಟ್‌ ಕಾರ್ಡ್‌ ಸಹ ಮಾಹಿತಿಯಲ್ಲಿ ಅಡಕವಾಗಿರುತ್ತದೆ. ಇದರಿಂದ ಅನುದಾನ ದುರ್ಬಳಕೆ ತಡೆಯಬಹುದು. ಖಾಸಗಿ ಶಾಲೆಗಳ ರಿಪೋರ್ಟ್‌ ಕಾರ್ಡ್‌ ಸಹ ಸಿಗಲಿದೆ’ ಎಂದು ಅವರು ಹೇಳಿದರು.

ಎಲ್ಲಿ ಲಭ್ಯ: www.schooleducation.kar.nic.in ವೆಬ್‌ಸೈಟ್‌ನ ‘ಶಿಕ್ಷಣ ಕಿರಣ’ ಸಾಫ್ಟ್‌ವೇರ್‌ ಲಿಂಕ್‌ನಲ್ಲಿ ಎಲ್ಲ ಶಾಲೆಗಳ ಮಾಹಿತಿ ಲಭ್ಯವಾಗಲಿದೆ.

**

48,752 - ಒಟ್ಟು ಸರ್ಕಾರಿ ಶಾಲೆಗಳು

7,309 - ಖಾಸಗಿ ಅನುದಾನಿತಶಾಲೆಗಳು

20,312 - ಖಾಸಗಿ ಅನುದಾನರಹಿತ ಶಾಲೆಗಳು

1,532 - ಇತರ ಶಾಲೆಗಳು

77,905 - ಒಟ್ಟು ಶಾಲೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.