ADVERTISEMENT

ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡಿದ್ದ ಜಮೀನು ಮಾರಾಟ: ಆರ್‌. ಅಶೋಕ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 21:55 IST
Last Updated 22 ಸೆಪ್ಟೆಂಬರ್ 2021, 21:55 IST
ಆರ್‌. ಅಶೋಕ
ಆರ್‌. ಅಶೋಕ   

ಬೆಂಗಳೂರು: ವಿವಿಧ ಸಂಘ, ಸಂಸ್ಥೆಗಳು ಗುತ್ತಿಗೆಗೆ ಪಡೆದಿರುವ ಜಮೀನುಗಳನ್ನು ಸ್ಥಿರಾಸ್ತಿ ಮಾರ್ಗಸೂಚಿ ದರದ ಆಧಾರದಲ್ಲಿ ನಿಗದಿತ ಮೌಲ್ಯಕ್ಕೆ ಖರೀದಿಸಲು ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ಬುಧವಾರ ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಹತ್ತಾರು ವರ್ಷಗಳಿಂದ ಬಿಡಿಗಾಸಿನ ಬಾಡಿಗೆ ಆಧಾರದಲ್ಲಿ ಸರ್ಕಾರಿ ಜಮೀನುಗಳನ್ನು ಗುತ್ತಿಗೆಗೆ ನೀಡಲಾಗಿದೆ. ಅವುಗಳಿಂದ ಸರ್ಕಾರದ ಬೊಕ್ಕಸಕ್ಕೆ ವರಮಾನ ಬರುತ್ತಿಲ್ಲ. ಕಟ್ಟಡ ಮತ್ತು ಇತರ ನಿರ್ಮಾಣಗಳು ಇರುವ ಜಮೀನುಗಳನ್ನು ಗುತ್ತಿಗೆ ರದ್ದುಪಡಿಸಿ ವಾಪಸ್ ಪಡೆಯುವುದಕ್ಕೂ ಕಷ್ಟವಾಗುತ್ತಿದೆ. ಆದ್ದರಿಂದ ಮಾರ್ಗಸೂಚಿ ದರದ ಆಧಾರದಲ್ಲೇ ಅವುಗಳನ್ನು ಆಯಾ ಸಂಸ್ಥೆಗಳು ಖರೀದಿಸಲು ಅವಕಾಶ ನೀಡಲು ಸರ್ಕಾರ ತೀರ್ಮಾನಿಸಿದೆ’ ಎಂದರು.

ಸಂಘ ಸಂಸ್ಥೆಗಳಿಗೆ ಗುತ್ತಿಗೆಗೆ ನೀಡಿದ ಜಮೀನುಗಳನ್ನು ಸರ್ಕಾರ ವಾಪಸ್‌ ಪಡೆದ ಉದಾಹರಣೆಗಳು ತೀರಾ ಕಡಿಮೆ. ಪ್ರತಿ ಬಾರಿಯೂ ಅವಧಿ ಮುಗಿದ ಬಳಿಕ ಗುತ್ತಿಗೆ ನವೀಕರಿಸಲಾಗುತ್ತಿದೆ. ₹ 50 ಕೋಟಿ ಮೌಲ್ಯದ ಆಸ್ತಿಯನ್ನು ಗುತ್ತಿಗೆಗೆ ನೀಡಿದ್ದರೆ, ಅದರಿಂದ ವಾರ್ಷಿಕ ₹ 50,000 ಕೂಡ ವರಮಾನ ದೊರಕುತ್ತಿಲ್ಲ. ಕೆಲವು ಪ್ರಕರಣಗಳಲ್ಲಿ ₹ 1ರಿಂದ ₹ 10ರವರೆಗೆ ಮಾತ್ರ ಗುತ್ತಿಗೆ ಶುಲ್ಕ ಇರುವುದೂ ಇದೆ. ಇದರಿಂದ ಸರ್ಕಾರಕ್ಕೆ ಆಗುತ್ತಿರುವ ನಷ್ಟ ತಪ್ಪಿಸಲು ಶುದ್ಧ ಕ್ರಯದ ಮೂಲಕ ಜಮೀನು ವಿಲೇವಾರಿ ಮಾಡಲು ಸರ್ಕಾರ ಮುಂದಾಗಿದೆ ಎಂದರು.

ADVERTISEMENT

ನಿರ್ದಿಷ್ಟ ಉದ್ದೇಶಕ್ಕೆ ಜಮೀನು ಪಡೆದಿದ್ದು, ಅದೇ ಉದ್ದೇಶಕ್ಕೆ ಬಳಸುತ್ತಿರುವವರಿಗೆ ಮಾರ್ಗಸೂಚಿ ದರಕ್ಕೆ ಜಮೀನು ನೀಡಲಾಗುವುದು. ಅನ್ಯ ಉದ್ದೇಶಕ್ಕೆ ಬಳಸಿಕೊಂಡಿರುವವರಿಗೆ ಮಾರ್ಗಸೂಚಿ ದರದ ಎರಡೂವರೆ ಪಟ್ಟು ದರ ವಿಧಿಸಲಾಗುವುದು. ಮುಂದಿನ ದಿನಗಳಲ್ಲಿ ಸರ್ಕಾರಿ ಜಮೀನುಗಳನ್ನು ಗುತ್ತಿಗೆಗೆ ನೀಡುವಾಗ ವಿಧಿಸುವ ಶುಲ್ಕದ ದರವನ್ನೂ ಹೆಚ್ಚಿಸಲಾಗುವುದು ಎಂದು ತಿಳಿಸಿದರು.

‘ಪ್ರಮುಖ ಸ್ಥಳಗಳಲ್ಲಿರುವ ಸರ್ಕಾರಿ ಜಮೀನುಗಳನ್ನು ಸಂಘ, ಸಂಸ್ಥೆಗಳಿಗೆ ಗುತ್ತಿಗೆಗೆ ನೀಡಲಾಗಿದೆ. ಕ್ರೈಸ್ತ ಮಿಷನರಿಗಳು ಸೇರಿದಂತೆ ಹಲವು ಸಂಸ್ಥೆಗಳು ಸರ್ಕಾರದಿಂದ ಗುತ್ತಿಗೆಗೆ ಪಡೆದ ಜಮೀನಿನಲ್ಲಿ ಕಟ್ಟಡ ನಿರ್ಮಿಸಿ ಬಾಡಿಗೆಗೆ ನೀಡಿವೆ. ಅವುಗಳಿಂದ ಸರ್ಕಾರಕ್ಕೆ ವರಮಾನ ಬರುತ್ತಿಲ್ಲ. ಆದರೆ, ಗುತ್ತಿಗೆ ಪಡೆದವರಿಗೆ ದೊಡ್ಡ ಪ್ರಮಾಣದ ವರಮಾನವಿದೆ. ಸರ್ಕಾರಿ ಕಚೇರಿಗಳಿಗೆ ಕಟ್ಟಡ ನಿರ್ಮಾಣಕ್ಕೆ ಸ್ಥಳಾವಕಾಶವಿಲ್ಲ. ಅನ್ಯ ಉದ್ದೇಶಕ್ಕೆ ಸರ್ಕಾರಿ ಜಮೀನು ಬಳಕೆಯನ್ನು ಪತ್ತೆಮಾಡಿ, ವಾಪಸ್‌ ಪಡೆಯಬೇಕು’ ಎಂದು ಭಾರತಿ ಶೆಟ್ಟಿ ಆಗ್ರಹಿಸಿದರು.

ಕೊಡಗು ಜಿಲ್ಲೆಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಗುತ್ತಿಗೆಗೆ ನೀಡಿದ್ದ ಜಮೀನುಗಳನ್ನು ವಾಪಸ್‌ ಪಡೆಯುವ ಕುರಿತು ಭಾರತಿ ಶೆಟ್ಟಿ ಪ್ರಶ್ನೆ ಕೇಳಿದ್ದರು. ಅಂತಹ ಯಾವುದೇ ಪ್ರಕರಣಗಳಿಲ್ಲ ಎಂದು ಉತ್ತರಿಸಿದ ಸಚಿವರು, ‘ಬೆಳಗಾವಿ ಜಿಲ್ಲೆಯ ಖಾನಾಪುರ ಗ್ರಾಮದ ಸರ್ವೆ ನಂಬರ್‌ 53/ಎ–ಯಲ್ಲಿ ಕ್ರೀಡಾ ಮಂಡಳಕ್ಕೆ ನೀಡಿದ್ದ 5 ಗುಂಟೆ ಜಮೀನಿನ ಗುತ್ತಿಗೆ ಅವಧಿ ಮುಗಿದಿತ್ತು. ಗೋಕಾಕ ತಾಲ್ಲೂಕಿನ ಕೊಣ್ಣೂರ ಗ್ರಾಮದಲ್ಲಿ 672 ಎಕರೆ 8 ಗುಂಟೆ ಮತ್ತು 312 ಎಕರೆ ಮತ್ತು 10 ಗುಂಟೆಯನ್ನು ಫಾಲ್ಸ್‌ ಮಿಲ್ಸ್‌ ಸಂಸ್ಥೆಗೆ ನೀಡಿದ್ದ ಗುತ್ತಿಗೆ ಅವಧಿಯೂ ಪೂರ್ಣಗೊಂಡಿತ್ತು. ಈ ಪ್ರಕರಣಗಳಲ್ಲಿ ಗುತ್ತಿಗೆ ನವೀಕರಿಸಲಾಗಿದೆ’ ಎಂದರು.

ವಾರದಲ್ಲಿ ₹ 35 ಕೋಟಿ ಬಿಡುಗಡೆ
ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಉಂಟಾಗಿರುವ ಆಸ್ತಿ ಹಾನಿ, ಪ್ರಾಣ ಹಾನಿಗೆ ಪರಿಹಾರ ವಿತರಿಸಲು ಒಂದು ವಾರದೊಳಗೆ ₹ 35.70 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಬುಧವಾರ ಕಾಂಗ್ರೆಸ್‌ನ ಶ್ರೀನಿವಾಸ ಮಾನೆ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಈಗಾಗಲೇ ₹ 154.65 ಕೋಟಿ ಪರಿಹಾರ ವಿತರಿಸಲಾಗಿದೆ. ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ₹ 35.70 ಕೋಟಿ ನೆರವು ಬರಬೇಕಿದೆ. ಕೇಂದ್ರ ಹಣ ನೀಡುವುದು ವಿಳಂಬವಾದರೂ ರಾಜ್ಯ ಸರ್ಕಾರ ಈ ಮೊತ್ತವನ್ನು ಬಿಡುಗಡೆ ಮಾಡಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.