ADVERTISEMENT

ಪಂಚಾಯಿತಿ ಕಣ: ಉಳಿದ ಕನಸುಗಳ ಬೆನ್ನೇರಿ...

ನಿರ್ವಾಣ ಸಿದ್ದಯ್ಯ
Published 19 ಡಿಸೆಂಬರ್ 2020, 20:25 IST
Last Updated 19 ಡಿಸೆಂಬರ್ 2020, 20:25 IST
ಬಸವೇಗೌಡ ಮತ್ತು ಮಂಜುಳ
ಬಸವೇಗೌಡ ಮತ್ತು ಮಂಜುಳ   
""

ಹೆಸರಘಟ್ಟ: ಕಳೆದ ಅವಧಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದವರು ಈ ಬಾರಿ ಮತ್ತೆ ಅದೃಷ್ಟ ಪರೀಕ್ಷೆ ಇಳಿದಿದ್ದಾರೆ. ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬಾಕಿ ಉಳಿದಿದ್ದ ಕೆಲಸಗಳನ್ನು ಮುಂದೆ ಪೂರ್ಣಗೊಳಿಸುವ ಉಮೇದಿಯಲ್ಲಿದ್ದಾರೆ.

ಎರಡನೇಯ ಬಾರಿ ಸ್ಪರ್ಧಿಸಿರುವ ದಾಸನಪುರ ಹೋಬಳಿಯ ಗೋಪಾಲಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವೇಗೌಡ, ‘ಕೋವಿಡ್‌ ಬಿಕ್ಕಟ್ಟು ಸೃಷ್ಟಿಯಾಗಿದ್ದರಿಂದ ಸರ್ಕಾರವು ಅನೇಕ ಯೋಜನೆಗಳ ಅನುದಾನ ನೀಡಲಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲ್ಕಾರು ಗ್ರಾಮಗಳಿಗೆ ಒಳ ಚರಂಡಿ ಮಾಡಬೇಕಾಗಿತ್ತು. ಆ ಕೆಲಸ ಬಾಕಿ ಉಳಿದಿದೆ. ಉಳಿದಂತೆ ಗ್ರಾಮ ಪಂಚಾಯಿತಿಗೆ ಹೆಚ್ಚು ಆದಾಯ ಬರುವ ರೀತಿಯಲ್ಲಿ ಕೆಲಸ ಮಾಡಿದ ತೃಪ್ತಿ ಇದೆ’ ಎಂದರು.

ಮೂರು ಬಾರಿ ಗೆದ್ದು ನಾಲ್ಕನೇಯ ಬಾರಿ ಸ್ಪರ್ಧಿಸಿರುವ ಹೆಸರಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ವಸಂತಲಕ್ಷ್ಮೀ , ‘ಗ್ರಾಮದಲ್ಲಿ ಕಸವನ್ನು ವಿಲೇವಾರಿ ಮಾಡಲುಸತತ ಮೂರು ವರ್ಷಗಳಿಂದ ಸರ್ಕಾರಿ ಜಾಗಕ್ಕಾಗಿ ಹರಸಾಹಸ ಪಡಬೇಕಾಯಿತು. ಅದರೂ ಕಸವನ್ನು ಹಾಕಲು ಸರ್ಕಾರಿ ಜಾಗವಿದ್ದರೂ ಮಂಜೂರು ಆಗಲಿಲ್ಲ. ನನ್ನ ಅಧ್ಯಕ್ಷ ಅವಧಿಯಲ್ಲಿ ಇದೊಂದು ಕೆಲಸವಾಗಿದ್ದರೆ ಗ್ರಾಮಕ್ಕೆ ಒಳ್ಳೆಯದು ಮಾಡಿದ ತೃಪ್ತಿಇರುತ್ತಿತ್ತು’ ಎಂದರು.

ADVERTISEMENT

ಎರಡನೇಯ ಬಾರಿ ಸ್ಪರ್ಧಿಸುತ್ತಿರುವ ಕಸಘಟ್ಟಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಎಚ್.ಎಸ್.ಮಂಜುಳ ಮಹೇಂದ್ರ, ‘ಕಸಘಟ್ಟಪುರ ಗ್ರಾಮ ಪಂಚಾಯಿತಿ ಕಚೇರಿಗೆ ನೂತನ ಕಟ್ಟಡವನ್ನು ನಿರ್ಮಿಸಲು ಸಿದ್ಧತೆ ಮಾಡಲಾಗಿದೆ. ₹1 ಕೋಟಿ ವೆಚ್ಚದಲ್ಲಿ ಪಂಚಾಯಿತಿ ಕಟ್ಟಡವನ್ನು ಕಟ್ಟಲಾಗುವುದು. ಗ್ರಾಮದ ಕಸವನ್ನು ವಿಲೇವಾರಿ ಮಾಡಲು ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಾಪನೆ ಮಾಡಲಾಗಿದೆ. ಆದರೆ ಕಾರ್ಯಾಂಭ ಮಾಡಲು ಅಗಲಿಲ್ಲ. ಮುಂದಿನ ಅಧ್ಯಕ್ಷರು ಯಾರೇ ಬಂದರೂ ಸರಿ ಅವೆರಡು ಕೆಲಸವನ್ನು ಮಾಡಲು ಸಹಕಾರ ನೀಡುತ್ತೇನೆ’ ಎಂದರು.

‘ಶಿವಕೋಟೆ ಗ್ರಾಮ ಪಂಚಾಯಿತಿಗೆ ಅಧ್ಯಕ್ಷನಾಗಿದ್ದಾಗ ಪಂಚಾಯಿತಿಗೆ ಹೊಸ ಕಟ್ಟಡವನ್ನು ಕಟ್ಟಿದ್ದೇನೆ. ಸಾಕಷ್ಟು ದಾನಿಗಳ ನೆರವನ್ನು ಕೋರಿ ಕಟ್ಟಡದ ಕೆಲಸವನ್ನು ಮುಗಿಸಿದ್ದೇನೆ. ಈ ಸಾರಿ ಚುನಾವಣೆಗೆ ಸ್ಪರ್ಧಿಸಿಲ್ಲ. ಗ್ರಾಮದಲ್ಲಿ ಮತ್ತೊಬ್ಬರಿಗೆ ಅವಕಾಶ ಸಿಕ್ಕಿ ನಮಗಿಂತ ಒಳ್ಳೆಯ ಕೆಲಸಗಳನ್ನು ಮಾಡಲಿ ಎನ್ನುವ ಆಶಯ ನನ್ನದು’ ಎನ್ನುತ್ತಾರೆ ಶಿವಕೋಟೆ ಪಂಚಾಯಿತಿಯ ಅಧ್ಯಕ್ಷರಾಗಿದ್ದ ರಮೇಶ್.

ಗ್ರಾ.ಪಂ. ಚುನಾವಣಾ ಕಣದಲ್ಲಿ ಎಂ.ಟೆಕ್.ಪದವೀಧರೆ
ಹೆಸರಘಟ್ಟ:
ಹೋಬಳಿಯಲ್ಲಿ ಪದವೀಧರರು, ಉನ್ನತ ಶಿಕ್ಷಣ ಪಡೆದವರು ಸ್ಪರ್ಧಿಸುವ ಮೂಲಕ ಪಂಚಾಯಿತಿ ಚುನಾವಣಾ ಕಣ ರಂಗೇರಿದೆ.

ಶಿವಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀತಕೆಂಪನಹಳ್ಳಿ ಗ್ರಾಮದಲ್ಲಿ ಎಂ.ಟೆಕ್ ಪದವೀಧರೆ ವಿ.ಶ್ವೇತಾ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ವಿ.ಶ್ವೇತಾ

‘ಗ್ರಾಮದಲ್ಲಿರುವ ಜನರು ಅನೇಕ ಮಾಹಿತಿಗಳನ್ನು ತಿಳಿದುಕೊಳ್ಳಲು ನನ್ನ ಬಳಿ ಬರುತ್ತಿದ್ದರು. ಯಾವ ಅರ್ಜಿ, ಎಲ್ಲಿ ಸಿಗುತ್ತದೆ ಎಂಬ ಪ್ರಾಥಮಿಕ ಮಾಹಿತಿಯೂ ಅವರಿಗೆ ಇಲ್ಲ. ಇಂತಹ ಮುಗ್ಧ ಜನರ ಧ್ವನಿಯಾಗಿ ಇರಬೇಕು ಎನ್ನುವ ಕಾರಣಕ್ಕಾಗಿ ಸ್ಪರ್ಧಿಸಿದ್ದೇನೆ’ ಎಂದು ಅವರು ಹೇಳುತ್ತಾರೆ.

‘ಹಳ್ಳಿಗಳಲ್ಲಿರುವ ಸಮಸ್ಯೆಗಳ ಬಗ್ಗೆ ಮಹಿಳೆಯರಿಗೆ ಚೆನ್ನಾಗಿ ತಿಳಿದಿರುತ್ತದೆ. ನನ್ನ ಊರು, ನನ್ನ ಜನರ ಬಗ್ಗೆ ಕಾಳಜಿ ಇರುವುದರಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ. ಗ್ರಾಮದಲ್ಲಿರುವ ಎಲ್ಲ ಮಕ್ಕಳಿಗೂ ಶಿಕ್ಷಣ ನೀಡಬೇಕೆಂಬ ಉದ್ದೇಶ ಹೊಂದಿದ್ದೇನೆ’ ಎಂದೂ ಅವರು ಹೇಳಿದರು.

‘ರಾಜಕೀಯ ಎಂದರೆ ಏನು ಎಂದು ಗೊತ್ತಿಲ್ಲದ ನನಗೆ ಕುಟುಂಬದ ಸದಸ್ಯರು ಮಾರ್ಗದರ್ಶನ ನೀಡುತ್ತಿದ್ದಾರೆ. ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಗ್ರಾಮದ ಏಳಿಗೆಗೆ ಶ್ರಮಿಸುವ ಗುರಿ ಹೊಂದಿದ್ದೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.