ADVERTISEMENT

Greater Bengaluru | ‘ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ’ ಇಂದು ಜಾರಿ

​ಪ್ರಜಾವಾಣಿ ವಾರ್ತೆ
Published 15 ಮೇ 2025, 0:30 IST
Last Updated 15 ಮೇ 2025, 0:30 IST
<div class="paragraphs"><p>ಗ್ರೇಟರ್‌ ಬೆಂಗಳೂರು</p></div>

ಗ್ರೇಟರ್‌ ಬೆಂಗಳೂರು

   

ಬೆಂಗಳೂರು: ‘ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ’ಯನ್ನು ಮೇ 15ರಂದು ಜಾರಿಗೊಳಿಸುವಂತೆ ನಗರಾಭಿವೃದ್ಧಿ ಇಲಾಖೆ ಬುಧವಾರ ಅಧಿಸೂಚನೆ ಹೊರಡಿಸಿದೆ. ಗ್ರೇಟ‌ರ್ ಬೆಂಗಳೂರು ಪ್ರಾಧಿಕಾರ ಆಡಳಿತ ವಹಿಸಿಕೊಳ್ಳುವವರೆಗೆ ಬಿಬಿಎಂಪಿ ಮುಂದುವರಿಯಲಿದೆ.

ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ ಜಾರಿಯಾದ ಮೇಲೆ ಮುಖ್ಯಮಂತ್ರಿಯವರ ನೇತೃತ್ವದ ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ (ಜಿಬಿಎ) 120 ದಿನಗಳಲ್ಲಿ ರಚನೆಯಾಗಲಿದೆ. ಆಡಳಿತಾಧಿಕಾರಿ ನೇಮಕಗೊಳ್ಳಲಿದ್ದಾರೆ. ಗ್ರೇಟರ್‌ ಬೆಂಗಳೂರು ಪ್ರದೇಶ (ಜಿಬಿಎ) ಗಡಿಗುರುತು ನಡೆಯಲಿದೆ. ಆನಂತರ ನಿಧಾನವಾಗಿ ಬಿಬಿಎಂಪಿ ಅಸ್ತಿತ್ವ ಕಳೆದುಕೊಳ್ಳಲಿದೆ.

ADVERTISEMENT

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಗ್ರೇಟರ್‌ ಬೆಂಗಳೂರು ವ್ಯಾಪ್ತಿಯ ಶಾಸಕರು–ಸಚಿವರು, ನಗರಾಭಿವೃದ್ಧಿ ಸಚಿವರು, ಪಾಲಿಕೆಗಳ ಮೇಯರ್‌ಗಳು, ಬಿಡಿಎ ಆಯುಕ್ತ, ಬೆಂಗಳೂರು ಜಲಮಂಡಳಿ ಅಧ್ಯಕ್ಷ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ, ಕಂದಾಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌, ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ನಿರ್ದೇಶಕ, ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮಹಾನಗರ ಆಯುಕ್ತ ಸದಸ್ಯರಾಗಲಿದ್ದಾರೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಆಡಳಿತಾಧಿಕಾರಿ ನೇಮಕವಾದ ಮೇಲೆ ಕಾಯ್ದೆಗೆ ಅನುಗುಣವಾಗಿ ನಗರ ಪಾಲಿಕೆಗಳ ನಿಯಮಗಳು, ಕಾನೂನಿನ ಉಪಬಂಧಗಳು ರಚನೆಯಾಗಲಿದೆ. ನಗರ ಪಾಲಿಕೆಗಳಡಿ ಕಾರ್ಯನಿರ್ವಹಿಸುವ ಪ್ರಾಧಿಕಾರಗಳಿಗೆ ನಿಯಮಗಳನ್ನು ಜಾರಿ ಮಾಡಿ, ಕರ್ತವ್ಯ, ಪ್ರಕಾರ್ಯಗಳನ್ನು ನಿಗದಿಯಾಗಲಿದೆ. 

ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿರುವ ಕಾರ್ಯಗಳನ್ನು ಆಡಳಿತಾಧಿಕಾರಿ ನಿರ್ವಹಿಸುವಾಗ, ಸರ್ಕಾರದ ನಿರ್ದೇಶನ, ಮಾರ್ಗದರ್ಶನ ಪಡೆಯಬೇಕು. ಯಾವುದೇ ಕಾರ್ಯನೀತಿಯ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರಶ್ನೆ ಉದ್ಭವಿಸಿದರೆ ಸರ್ಕಾರದ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಕಲಂ 131ರಲ್ಲಿ ಹೇಳಲಾಗಿದೆ. ಆಡಳಿತಾಧಿಕಾರಿ ಮೂಲಕ ಸರ್ಕಾರವೇ ಎಲ್ಲವನ್ನೂ ನಿಯಂತ್ರಿಸಲಿದೆ.

ವ್ಯಾಪ್ತಿ: 

ನಗರದ ಕೈಗಾರಿಕಾ ಪ್ರದೇಶಗಳಲ್ಲದೆ ಎಲೆಕ್ಟ್ರಾನಿಕ್‌ ಸಿಟಿ, ಅತ್ತಿಬೆಲೆ, ಜಿಗಣಿ ಕೈಗಾರಿಕೆ ಪ್ರದೇಶ, ಬೊಮ್ಮಸಂದ್ರ, ಸರ್ಜಾಪುರ, ಬಾಗಲೂರು, ರಾಜಾನುಕುಂಟೆ, ಹೆಸರಘಟ್ಟ, ದಾಸನಪುರ, ಮಾಕಳಿ, ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ‘ಗ್ರೇಟರ್‌ ಬೆಂಗಳೂರು ಪ್ರದೇಶ’ಕ್ಕೆ ಸೇರಿಸಿಕೊಂಡು ಕನಿಷ್ಠ ಮೂರು ಪಾಲಿಕೆ ರಚನೆಯಾಗುವ ಸಾಧ್ಯತೆ ಇದೆ.

ಯಾವುದೇ ಬದಲಾವಣೆ ಇಲ್ಲ

ತೆರಿಗೆ ಪಾವತಿ, ವ್ಯಾಪ್ತಿ, ಅಧಿಕಾರಿಗಳ ಕರ್ತವ್ಯಗಳಲ್ಲಿ ಚಲಾವಣೆಯಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಜಿಬಿಎ ಜಾರಿಯಾದ ಮೇಲೆ ಹಂತಹಂತವಾಗಿ ಅಧಿಸೂಚನೆ ಹೊರಡಿಸಿ ಒಂದೊಂದೇ ಯೋಜನೆಗಳು ‘ಜಿಬಿಎ’ಯೊಂದಿಗೆ ಜೋಡಣೆಯಾಗಲಿವೆ ಎಂದುತಿಳಿಸಿದ್ದಾರೆ.

ಬಿಬಿಎಂಪಿ ಪ್ರದೇಶವನ್ನು ಗ್ರೇಟರ್‌ ಬೆಂಗಳೂರು ಪ್ರದೇಶವೆಂದು ಮೇ 15ರಂದು ಅಧಿಸೂಚನೆ ಹೊರಡಿಸಲಾಗುವುದು. ಗ್ರೇಟರ್‌ ಬೆಂಗಳೂರು ಪೂರ್ಣಗೊಳ್ಳುವವರೆಗೆ ಜಿಬಿಎ ಕಾಯ್ದೆಯ ಕಲಂ 7(5) ಮತ್ತು ಕಲಂ
360ರಲ್ಲಿ ಪ್ರದತ್ತವಾದ ಅಧಿಕಾರದ ಅನ್ವಯ ಬಿಬಿಎಂಪಿ ಅಧಿಕಾರ ಮತ್ತು ಕರ್ತವ್ಯಗಳನ್ನು ಸಂಬಂಧಿತ ಅಧಿಕಾರಿಗಳು ಚಲಾಯಿಸುತ್ತಾರೆ ಎಂದು ನಗರಾಭಿವೃದ್ಧಿ ಇಲಾಖೆ ತಿಳಿಸಿದೆ.

ಪ್ರಮುಖ ಅಂಶಗಳು

*‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ–2024’ ವಿಧಾನ ಮಂಡಲದಲ್ಲಿ ಮಾರ್ಚ್‌ 13ರಂದು ಅಂಗೀಕಾರ

*ಒಂದು ಬಾರಿ ಮಸೂದೆ ವಾಪಸ್‌ ಮಾಡಿದ್ದ ರಾಜ್ಯಪಾಲರು

*ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದ್ದರಿಂದ ಏಪ್ರಿಲ್‌ 24ಕ್ಕೆ ರಾಜ್ಯಪಾಲರ ಒಪ್ಪಿಗೆ

*ಏಪ್ರಿಲ್‌ 24ರಂದೇ ರಾಜ್ಯಪತ್ರದಲ್ಲಿ ಪ್ರಕಟ

*ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ–2024ರ 1ನೇ ಕಲಂ (3)ನೇ ಉಪ ಕಲಂನಲ್ಲಿ ಪದತ್ತವಾದ ಅಧಿಕಾರ ಚಲಾಯಿಸಿ ಅಧಿಸೂಚನೆ ಪ್ರಕಟ

*ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ನಗರ ಪಾಲಿಕೆ ರಚನೆ ಸಾಧ್ಯತೆ

*ತಲಾ 125 ವಾರ್ಡ್‌ಗಳಿಗೆ ಒಂದು ಪಾಲಿಕೆ. ಪ್ರತಿ ಪಾಲಿಕೆಗೂ ಗ್ರೇಟರ್ ಬೆಂಗಳೂರು ಪ್ರದೇಶದ ಗಡಿ ನಿಗದಿ

*ಗ್ರೇಟರ್ ಬೆಂಗಳೂರು ಪ್ರದೇಶ ವ್ಯಾಪ್ತಿಯಲ್ಲಿ ಕಟ್ಟಡಗಳ ಗಾತ್ರ, ಎತ್ತರ ನಿಯಮಗಳ ಬದಲಾವಣೆ ಸಾಧ್ಯತೆ

ಗ್ರೇಟರ್‌ ಬೆಂಗಳೂರು ಆಡಳಿತ ಅಧಿನಿಯಮ ಗುರುವಾರ ಜಾರಿಗೆ ಬರಲಿದೆ. ಸದ್ಯ ಆಡಳಿತದಲ್ಲಿ ಬದಲಾವಣೆಗಳಿಲ್ಲ. ಮುಂದೆ ಹಂತ ಹಂತವಾಗಿ ಬದಲಾವಣೆಗಳಾಗಬಹುದು
ಎಂ. ಮಹೇಶ್ವರ ರಾವ್, ಮುಖ್ಯ ಆಯುಕ್ತ, ಬಿಬಿಎಂಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.