‘ಜಿಬಿಎ ರಚನೆಯ ನಂತರ ಮುಂದೇನಾಗಬೇಕು’– ಈ ಪ್ರಶ್ನೆಗೆ ಸಾರ್ವಜನಿಕರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಇಲ್ಲಿವೆ.
ಮೂಲಸೌಕರ್ಯ ಮತ್ತು ಸ್ವಚ್ಛತೆಗೆ ಜಿಬಿಎ ಪರಿಹಾರವಾಗಲಿ. ಬೆಂಗಳೂರು ನಗರ ಎಲ್ಲ ಕ್ಷೇತ್ರಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ನೀಡಲು ಜಿಬಿಎ ಸಹಕಾರಿ ಆಗಲಿದೆ. ನಗರದ ರಸ್ತೆಗಳು, ಕಸದ ವಿಲೇವಾರಿ ಸಮಸ್ಯೆಗಳಿಗೆ ಪರಿಹಾರ ನೀಡಬೇಕಿದೆ. ಬೇಸಿಗೆಯಲ್ಲಿ ನಗರದಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.– ಕೆ.ಎಸ್. ನಾಗರಾಜ್, ಹನುಮಂತನಗರ
ಜಿಬಿಎ ಮಾಡುವ ಸರ್ಕಾರದ ನಿರ್ಧಾರ ಸರಿಯಾಗಿದೆ. ಇದರಿಂದ ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ಸಿಗಲಿದೆ. ಮಳೆಗಾಲದಲ್ಲಿ ಉಂಟಾಗುವ ಪ್ರವಾಹ ಪರಿಸ್ಥಿತಿಗೆ ಇದರಿಂದಾದರೂ ಮುಕ್ತಿ ಸಿಗಲಿ. ಮಳೆ ನೀರು ರಸ್ತೆಯಲ್ಲಿ ಸಂಗ್ರಹವಾಗದಂತೆ ಕ್ರಮ ಕೈಗೊಳ್ಳಬೇಕು. ಶುದ್ಧ ಕುಡಿಯುವ ನೀರು, ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ನಗರದ ಜನಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಬೇಕು.– ದಿವ್ಯಶ್ರೀ ವಿ., ವಿದ್ಯಾರ್ಥಿ
ಗ್ರೇಟರ್ ಬೆಂಗಳೂರಿಗೆ ಮೊದಲು ಚುನಾವಣೆ ಆಗಬೇಕು. ಹೊಸ ಯೋಜನೆಗಳನ್ನು ಕನಿಷ್ಠ ಮುಂದಿನ 50 ವರ್ಷಗಳಿಗೆ ಬೇಕಾಗುವಂತೆ ಯೋಜನೆಗಳನ್ನು ರೂಪಿಸಬೇಕು. ಸಮಸ್ಯೆಗಳು ಬಂದಾಗ ಅದನ್ನು ಪರಿಹರಿಸುವ ಮುನ್ನ ಮೊದಲೇ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಬೆಂಗಳೂರಿನ ಎಲ್ಲ ಕಡೆಗೆ ಮೆಟ್ರೊ ಜಾಲವನ್ನು ವಿಸ್ತರಿಸಬೇಕು. ಪ್ರತಿಯೊಬ್ಬರು ಸಾರ್ವಜನಿಕ ಸಾರಿಗೆಯನ್ನು ಉಪಯೋಗಿಸಬೇಕು. ಒಬ್ಬರೇ ಮೇಯರ್ 5 ವರ್ಷ ಇರಬೇಕು. ಆಗ ಆಡಳಿತ ಸಂಪೂರ್ಣ ಹಿಡಿತದಲ್ಲಿ ಇರುತ್ತದೆ. ಪಾರ್ಕಿಂಗ್, ಹೊಸಕಟ್ಟಡ, ಸಂಚಾರ ನಿಯಮ, ಪೊಲೀಸ್ ವ್ಯವಸ್ಥೆಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು.– ಬಸವರಾಜು ಎಂ.ಎನ್., ರಾಜರಾಜೇಶ್ವರಿ ನಗರ
ಜಿಬಿಎ ಮಾಡುವ ಸರ್ಕಾರದ ನಿರ್ಧಾರ ಸರಿಯಾಗಿದೆ. ಆದರೆ ಅದು ಕಾರ್ಯ ರೂಪಕ್ಕೆ ಬರಲು ಸಮಯ ತೆಗೆದುಕೊಳ್ಳಲಿದೆ. 2003ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಬಿಡಿಎ ನಿವೇಶನ ಪಡೆದುಕೊಂಡು ಮನೆಗಳನ್ನು ನಿರ್ಮಿಸಿಕೊಂಡಿದ್ದೇವೆ. ಆದರೂ ಬಿಬಿಎಂಪಿ ಈ ಬಡಾವಣೆಯ ನಿರ್ವಹಣೆ ಮಾಡುತ್ತಿಲ್ಲ. ಮೂಲಸೌಕರ್ಯ ಅಭಿವೃದ್ಧಿ ಮಾಡುವಂತೆ ನಿತ್ಯ ಬಿಡಿಎಗೆ ಅಲೆಯಬೇಕಾಗಿದೆ. ಆದ್ದರಿಂದ ಸರ್ಕಾರ ಬಿಬಿಎಂಪಿಯನ್ನು ಜಿಬಿಎ ಮಾಡಿದರೆ ಈ ಸಮಸ್ಯೆಗಳಿಗೆ ಪರಿಹಾರ ಸಿಗುವ ಭರವಸೆ ಇದೆ.– ಸಿ.ಎನ್.ಭಂಡಾರೆ, ವಿಶ್ವೇಶ್ವರಯ್ಯ ಬಡಾವಣೆ, ಕೆಂಗೇರಿ ಉಪನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.