ADVERTISEMENT

ಯಲಹಂಕ–ಮಾಕಳಿದುರ್ಗ ರೈಲು ಸಂಚಾರಕ್ಕೆ ಹಸಿರು ನಿಶಾನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 20:39 IST
Last Updated 23 ಫೆಬ್ರುವರಿ 2021, 20:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಯಲಹಂಕ ಮತ್ತು ಮಾಕಳಿದುರ್ಗ ನಡುವಿನ ವಿದ್ಯುದ್ದೀಕರಣ ಜೋಡಿ ಮಾರ್ಗದಲ್ಲಿ ರೈಲು ಸಂಚಾರಕ್ಕೆ ರೈಲ್ವೆ ಸುರಕ್ಷತಾ ಆಯುಕ್ತರಿಂದ (ಸಿಆರ್‌ಎಸ್‌) ಹಸಿರು ನಿಶಾನೆ ದೊರೆತಿದೆ.

35.97 ಕಿಲೋ ಮೀಟರ್ ಉದ್ದದ ಈ ಮಾರ್ಗವನ್ನು ಸಿಆರ್‌ಎಸ್ ತಂಡ ಇತ್ತೀಚೆಗೆ ಪರಿಶೀಲನೆ ನಡೆಸಿತ್ತು. ಈಗ ಅನುಮೋದನೆ ನೀಡಿದೆ.

‘ಯಲಹಂಕದಿಂದ ವಡ್ಡರಹಳ್ಳಿ ತನಕ ಮೊದಲ ಒಂದು ವಾರ ಗಂಟೆಗೆ 90 ಕಿಲೋ ಮೀಟರ್ ವೇಗ ಮತ್ತು ವಡ್ಡರಹಳ್ಳಿಯಿಂದ ಮಾಕಳಿದುರ್ಗ ತನಕ ಗಂಟೆಗೆ 75 ಕಿ.ಮೀ ವೇಗದಲ್ಲಿ ಸಂಚರಿಸಬೇಕು. ಬಳಿಕ ಕ್ರಮವಾಗಿ 110 ಮತ್ತು 80 ಕಿ.ಮೀ ವೇಗದಲ್ಲಿ ಸಂಚರಿಸಬಹುದು’ ಎಂದು ಸಿಆರ್‌ಎಸ್ ಸ್ಪಷ್ಟಪಡಿಸಿದೆ.

ADVERTISEMENT

ಮಾಕಳಿದುರ್ಗದಿಂದ ದೇವರಪಲ್ಲಿ ತನಕ 36 ಕಿ.ಮೀ ಉದ್ದ ಜೋಡಿ ಮಾರ್ಗ 2019ರ ಏಪ್ರಿಲ್‌ನಲ್ಲಿ ಲೋಕಾರ್ಪಣೆಗೊಂಡಿತ್ತು. ಯಲಹಂಕ–ಗುಂದಕಲ್ ಮಾರ್ಗ ಎಂದರೆ ದೇಶದ ರಾಜಧಾನಿ ದೆಹಲಿ ಸೇರಿ ಉತ್ತರ ಭಾರತವನ್ನು ಸಂಪರ್ಕಿಸುವ ಪ್ರಮುಖ ರೈಲು ಮಾರ್ಗ. ಈ ವಿದ್ಯುದ್ದೀಕರಣಗೊಂಡ ಜೋಡಿ ಮಾರ್ಗದಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲ ಆಗಲಿದೆ.

ವಿದ್ಯುದ್ದೀಕರಣ ರೈಲು ಮಾರ್ಗ ಒಂದೇ ಇದ್ದ ಕಾರಣ ಅಲ್ಲಲ್ಲಿ ರೈಲುಗಳ ನಿಲುಗಡೆ ಅನಿವಾರ್ಯವಾಗಿತ್ತು. ಮುಂಬೈ, ಬೀದರ್, ಅಹಮದಾಬಾದ್, ದೆಹಲಿ, ನಾಗ್ಪುರ, ಜೈಪುರ ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ರೈಲು ಸೇವೆ ಹೆಚ್ಚಿಸಲು ಈ ಮಾರ್ಗ ಅನುಕೂಲವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.