ADVERTISEMENT

ಲಾಕ್‌ಡೌನ್‌: ಅಂತರ್ಜಲ ಮಟ್ಟ ಏರಿಕೆ!

ಕೈಗಾರಿಕೆ, ವಾಣಿಜ್ಯ ಕಟ್ಟಡಗಳಲ್ಲಿನ ಕೊಳವೆ ಬಾವಿ ನೀರಿನ ಬಳಕೆ ಇಳಿದ ಪರಿಣಾಮ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 17:10 IST
Last Updated 27 ಏಪ್ರಿಲ್ 2020, 17:10 IST

ಬೆಂಗಳೂರು: ಲಾಕ್‌ಡೌನ್‌ ಅವಧಿಯಲ್ಲಿ ಮನೆಗಳಲ್ಲಿ ನೀರಿನ ಬಳಕೆ ಹೆಚ್ಚಾಗಿದ್ದರೂ, ನಗರದಲ್ಲಿ ಅಂತರ್ಜಲ ಮಟ್ಟವೂ ಏರಿಕೆ ಆಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಮಾ.22ರಿಂದ ಏ.24ರ ಅವಧಿಯಲ್ಲಿ ಗೃಹ ಉದ್ದೇಶಕ್ಕೆ ಬಳಕೆಯಾಗುವ ನೀರಿನ ಪ್ರಮಾಣ ಶೇ 25ರಷ್ಟು ಏರಿಕೆಯಾಗಿದೆ. ಕೈಗಾರಿಕೆಗಳು ಮತ್ತು ವಾಣಿಜ್ಯ ಉದ್ದೇಶದ ಸಂಸ್ಥೆಗಳ ಕಾರ್ಯಚಟುವಟಿಕೆ ಸ್ಥಗಿತಗೊಂಡಿರುವುದರಿಂದ ಅಂತರ್ಜಲ ಮಟ್ಟ ಸುಧಾರಿಸಿದೆ ಎಂದು ಹೇಳುತ್ತಾರೆ ವಿಜ್ಞಾನಿ ವಿ.ಎಸ್. ಪ್ರಕಾಶ್.ಕೇಂದ್ರೀಯ ಅಂತರ್ಜಲ ಮಂಡಳಿಯಲ್ಲಿ ಪ್ರಕಾಶ್‌ ವಿಜ್ಞಾನಿಯಾಗಿದ್ದಾರೆ.

‘ನಗರದ ನಾಲ್ಕು ಕಡೆ ಅಂತರ್ಜಲ ಮಟ್ಟ ಪರೀಕ್ಷಿಸಿದ್ದು, 2.1 ಮೀಟರ್‌ನಿಂದ 90 ಮೀಟರ್‌ವರೆಗೆ ನೀರಿನ ಮಟ್ಟ ಹೆಚ್ಚಾಗಿದೆ. ಕೈಗಾರಿಕೆ ಮತ್ತು ವಾಣಿ‌ಜ್ಯ ಕಟ್ಟಡಗಳಲ್ಲಿ ಕೊಳವೆ ಬಾವಿ ನೀರಿನ ಬಳಕೆ ಕಡಿಮೆಯಾಗಿರುವುದು ಇದಕ್ಕೆ ಕಾರಣ’ ಎಂದು ಅವರು ತಿಳಿಸಿದರು.

ADVERTISEMENT

ಎಚ್‌.ಎಸ್.ಆರ್. ಲೇಔಟ್‌ ಹಾಗೂ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಕೊಳವೆಬಾವಿಗಳ ನೀರಿನ ಮಟ್ಟವನ್ನು ಪ್ರತಿ 20 ಸೆಕೆಂಡ್‌ಗಳಿಗೊಮ್ಮೆ ದತ್ತಾಂಶ ಸಂಗ್ರಹಿಸಲಾಗಿದ್ದು, ಇಲ್ಲಿನ ಕೊಳವೆಬಾವಿಗಳಲ್ಲಿನ ನೀರಿನ ಮಟ್ಟ 2.1 ಮೀಟರ್‌ನಿಂದ 90 ಮೀಟರ್‌ಗೆ ಏರಿಕೆಯಾಗಿದೆ ಎಂದು ಅವರು ತಿಳಿಸಿದರು.

ಪರೀಕ್ಷೆ ಹೇಗೆ ?

ಸೆನ್ಸರ್‌ ಒಂದನ್ನು ಅಭಿವೃದ್ಧಿಪಡಿಸಿರುವ ಪ್ರಕಾಶ್‌, ಪ್ರತಿ 10 ಸೆಕೆಂಡಿಗಳಿಗೊಮ್ಮೆಅದರಲ್ಲಿ ಅಂತರ್ಜಲ ಮಟ್ಟ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದಾರೆ. ಸುಮಾರು 100 ಅಡಿ ಆಳದವರೆಗೆ ಬೋರ್‌ವೆಲ್‌ ಕೊರೆದಿದ್ದರೆ,80 ಅಡಿಯವರೆಗೆ ಮೋಟರ್‌ ಕೂರಿಸಲಾಗಿರುತ್ತದೆ. ಸಾಮಾನ್ಯವಾಗಿ 40 ಅಡಿಯವರೆಗೆ ನೀರಿನ ಮಟ್ಟ ಇದ್ದರೆ, ಮೋಟರ್‌ ಚಾಲನೆ ಮಾಡುತ್ತಿದ್ದಂತೆ ಅದು 90 ಅಡಿ ಆಳಕ್ಕೆ ಕುಸಿಯುತ್ತದೆ. ಈ ಏರಿಳಿತವನ್ನು ಸೆನ್ಸರ್‌ ಪತ್ತೆ ಹಚ್ಚುತ್ತದೆ. ಸೆನ್ಸರ್‌ಗೆ ಕಂಪ್ಯೂಟರ್‌ ಸಂಪರ್ಕ ಕಲ್ಪಿಸಲಾಗಿದ್ದು, ಈ ದತ್ತಾಂಶಗಳು ಕಂಪ್ಯೂಟರ್‌ ಪರದೆಯಲ್ಲಿ ದಾಖಲಾಗುತ್ತವೆ. ಈ ಮೂಲಕ ಅಂತರ್ಜಲ ಮಟ್ಟ ಏರಿಕೆಯಾಗಿರುವುದನ್ನು ಪ್ರಕಾಶ್‌ ಪತ್ತೆ ಹಚ್ಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.