ಬೆಂಗಳೂರು: ರಾಜ್ಯದಲ್ಲಿ ಎಚ್1ಎನ್1 ಜ್ವರ ವ್ಯಾಪಕವಾಗುತ್ತಿದೆ. ಆದರೆ ರಾಜ್ಯದಲ್ಲಿ ಸೋಂಕು ತಡೆ ಲಸಿಕೆಯ ತೀವ್ರ ಕೊರತೆ ಕಾಡುತ್ತಿದೆ. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕು ತಡೆ ಲಸಿಕೆ ಲಭ್ಯವಿಲ್ಲ ಎಂದು ಹೇಳುತ್ತಿರುವುದು ಕಂಡುಬಂದಿದೆ. ಲಸಿಕೆ ತರಿಸುವ ಬಗ್ಗೆಯೂ ಯಾವುದೇ ಸುಳಿವಿಲ್ಲ.
ನಗರದ ಪ್ರಮುಖ 6 ಆಸ್ಪತ್ರೆಗಳಲ್ಲಿ ‘ಪ್ರಜಾವಾಣಿ’ ವಿಚಾರಿಸಿದಾಗ ಕೇವಲ ಮೂರು ಆಸ್ಪತ್ರೆಗಳಲ್ಲಿ ಮಾತ್ರ ಲಸಿಕೆ ಲಭ್ಯವಿದೆ ಎಂಬ ಮಾಹಿತಿ ಸಿಕ್ಕಿತು. ಉಳಿದ ಆಸ್ಪತ್ರೆಗಳಲ್ಲಿ ‘ಸ್ಟಾಕ್ ಖಾಲಿಯಾಗಿದೆ. ಹೊಸ ಸ್ಟಾಕ್ ಯಾವಾಗ ಬರುವುದೋ ಗೊತ್ತಿಲ್ಲ’ ಎಂದು ಅಲ್ಲಿನ ಸಿಬ್ಬಂದಿ ಹೇಳಿದರು.
ರಾಜ್ಯ ಸರ್ಕಾರವು ಈ ಸೋಂಕು ನಿಯಂತ್ರಣ ಸಂಬಂಧಿಸಿದ ಲಸಿಕೆಯ ಕೊರತೆ ಇಲ್ಲ. ಅದು ವ್ಯಾಪಿಸುವುದನ್ನು ತಡೆಯಲು ನಾವು ಸನ್ನದ್ದವಾಗಿದ್ದೇವೆ ಎಂದು ಹೇಳುತ್ತಿರುವುದೂ, ಖಾಸಗಿ ಆಸ್ಪತ್ರೆಗಳವರು ಲಸಿಕೆಗಳು ಲಭ್ಯವಿಲ್ಲ ಎಂದು ಹೇಳುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ಖಾಸಗಿ ಆಸ್ಪತ್ರೆಗಳ ಸ್ಥಿತಿಗತಿ ಪರಿಶೀಲಿಸುವುದಾಗಿ ಹೇಳಿದರು.
‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯಿದೆ ಪ್ರಕಾರ ಇಂಥ ಕಾಯಿಲೆಗಳು ವ್ಯಾಪಕವಾಗುವ ಸನ್ನಿವೇಶ ನಿರ್ಮಾಣವಾದಾಗ ಅವುಗಳಿಗೆ ಚಿಕಿತ್ಸೆ ನೀಡುವ ಸಂಬಂಧ ಖಾಸಗಿ ಆಸ್ಪತ್ರೆಗಳು ಸರ್ಕಾರದೊಂದಿಗೆ ಕೈಜೋಡಿಸಬೇಕು. ತಪ್ಪಿದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಅವಕಾಶವಿದೆ. ಅದೇನಿದ್ದರೂ ಅಲ್ಲಿನ ಸನ್ನಿವೇಶವನ್ನು ಅವಲೋಕಿಸಿದ ಬಳಿಕವಷ್ಟೇ ನಾವು ಕ್ರಮ ಕೈಗೊಳ್ಳಬಹುದು’ ಎಂದು ಪಾಂಡೆ ಹೇಳಿದರು.
‘ನಗರದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕು ತಡೆ ಲಸಿಕೆ ಅಗತ್ಯ ಪ್ರಮಾಣದಲ್ಲಿ ಇದೆ. ಔಷಧ ಅಥವಾ ಲಸಿಕೆ ಪೂರೈಕೆಯಲ್ಲಿ ಕೊರತೆ ಆಗಿಲ್ಲ. ಎಚ್1ಎನ್1 ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಎಲ್ಲ ಆಸ್ಪತ್ರೆಗಳು ಅಗತ್ಯ ಪ್ರಮಾಣದ ಔಷಧ ಮತ್ತು ಲಸಿಕೆಗಳೊಂದಿಗೆ ಸನ್ನದ್ಧವಾಗಿರಬೇಕು. ಮತ್ತು ಪ್ರಕರಣಗಳಿಗೆ ಚಿಕಿತ್ಸೆ ಮತ್ತು ಔಷಧಿಯನ್ನು ನೀಡಬೇಕು’ ಎಂದು ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ ಡಾ.ಮನೋರಂಜನ್ ಹೆಗ್ಡೆ ಹೇಳಿದರು.
ರಾಜ್ಯದಲ್ಲಿ 8 ಬಲಿ
ರಾಜ್ಯದಲ್ಲಿ ಎಚ್1ಎನ್1 ಜ್ವರಕ್ಕೆ 8 ಮಂದಿ ಬಲಿಯಾಗಿದ್ದಾರೆ. ಈ ಪೈಕಿ ಒಬ್ಬರು ಸೋಮವಾರ ನಗರದ ರಾಜೀವ ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಎದೆರೋಗಗಳ ಆಸ್ಪತ್ರೆಗೆ ದಾಖಲಾದ ರೋಗಿ ಮಧುಮೇಹ ಸಮಸ್ಯೆ ಹೊಂದಿದ್ದರು. ಜ್ವರ ತೀವ್ರ ಏರಿ ಕೊನೇ ಕ್ಷಣದಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವೈದ್ಯರು ಹೇಳಿದರು.
ರಾಜ್ಯದಲ್ಲಿ 5,191 ಮಂದಿಯ ಸ್ವಾಬ್ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಅವುಗಳ ಪೈಕಿ 542 ಮಂದಿಗೆ ಜ್ವರದ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ನಗರವೊಂದರಲ್ಲೇ 86 ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 54, ಶಿವಮೊಗ್ಗದಲ್ಲಿ 60, ಚಿಕ್ಕಮಗಳೂರಿನಲ್ಲಿ 35 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಹೇಳಿದೆ.
‘ಜ್ವರದ ಬಗ್ಗೆ ಗ್ರಾಮ ಪಂಚಾಯಿತಿ, ತಾಲ್ಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಮಾರ್ಗದರ್ಶನ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಸ್.ಸಜ್ಜನ್ ಶೆಟ್ಟಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.