ADVERTISEMENT

ನನಗೇನೂ ಗೊತ್ತಿಲ್ಲ, ಎಲ್ಲವೂ ಸುಳ್ಳು: ಜೈಲಿನಿಂದ ಹ್ಯಾಕರ್‌ ಶ್ರೀಕೃಷ್ಣ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 19:00 IST
Last Updated 10 ನವೆಂಬರ್ 2021, 19:00 IST
ಶ್ರೀಕೃಷ್ಣ
ಶ್ರೀಕೃಷ್ಣ   

ಬೆಂಗಳೂರು: ಬಿಟ್ ಕಾಯಿನ್ ಹಗರಣದ ಪ್ರಮುಖ ಸೂತ್ರಧಾರ ಎನ್ನಲಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26) ಮೊದಲ ಬಾರಿಗೆ ಮಾಧ್ಯಮದವರ ಎದುರು ಕಾಣಿಸಿಕೊಂಡಿದ್ದು, ‘ನನಗೇನು ಗೊತ್ತಿಲ್ಲ. ಎಲ್ಲವೂ ಸುಳ್ಳು’ ಎಂದು ಹೇಳಿಕೆ ನೀಡಿದ್ದಾನೆ.

ಮಾದಕ ವಸ್ತು ಸೇವಿಸಿ ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಜೀವನ್‌ಭಿಮಾನಗರ ಠಾಣೆ ಪೊಲೀಸರು ಬಂಧಿಸಿದ್ದ ಶ್ರೀಕೃಷ್ಣನಿಗೆ ನ್ಯಾಯಾಲಯವು ಮಂಗಳವಾರ ಜಾಮೀನು ಮಂಜೂರು ಮಾಡಿತ್ತು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಶ್ರೀಕೃಷ್ಣ, ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಬುಧವಾರ ಜೈಲಿನಿಂದ ಹೊರಬಂದ.

ಇದೇ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಶ್ರೀಕೃಷ್ಣ, ‘ನಾನು ಏನು ಮಾಡಿಲ್ಲ. ನನಗೇನೂ ಗೊತ್ತಿಲ್ಲ’ ಎಂದ.

ADVERTISEMENT

‘₹ 9 ಕೋಟಿ ಮೌಲ್ಯದ 31 ಕಾಯಿನ್ ಜಪ್ತಿ ಮಾಡಿರುವುದಾಗಿ ಸಿಸಿಬಿ ಪೊಲೀಸರು ಪತ್ರಿಕಾ ಪ್ರಕಟಣೆ ನೀಡಿದ್ದಾರಲ್ಲ’ ಎಂದು ಪ್ರಶ್ನಿಸಿದ್ದಕ್ಕೆ, ‘ನನ್ನಿಂದ ಯಾರೊಬ್ಬರೂ ಏನನ್ನೂ ಜಪ್ತಿ ಮಾಡಿಲ್ಲ. ಎಲ್ಲವೂ ಸುಳ್ಳು. ನನ್ನ ತಂದೆ ಆಸ್ಪತ್ರೆಯಲ್ಲಿ ಇದ್ದಾರೆ. ನಾನೀಗ ಆಸ್ಪತ್ರೆಗೆ ಹೋಗಬೇಕು. ದಯವಿಟ್ಟು, ನನ್ನನ್ನು ಹಿಂಬಾಲಿಸಬೇಡಿ’ ಎಂದ.

‘ಲ್ಯಾಪ್‌ಟಾಪ್‌ ಬಳಸಿ ಹ್ಯಾಕ್ ಮಾಡಿರುವ ಆರೋಪ ನಿನ್ನ ಮೇಲಿದೆಯಲ್ಲ’ ಎಂದು ಕೇಳಿದ್ದಕ್ಕೆ, ‘ಎಲ್ಲವೂ ಸುಳ್ಳು. ಏಕೆ ಈ ರೀತಿ ಸುದ್ದಿ ಹಬ್ಬಿಸುತ್ತಿದ್ದಾರೆಂಬುದನ್ನು ಮಾಧ್ಯಮದವರೇ ಹೇಳಬೇಕು’ ಎಂದ.

ಒಬ್ಬನೇ ಹೊರಬಂದು, ಒಬ್ಬನೇ ಹೋದ

ಜೈಲಿನ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿದ ಶ್ರೀಕೃಷ್ಣ, ಒಬ್ಬನೇ ಹೊರಗೆ ಬಂದ. ಆತನನ್ನು ಬರಮಾಡಿಕೊಳ್ಳಲು ಯಾರೂಬ್ಬರೂ ಬಂದಿರಲಿಲ್ಲ.

‘ಜಾಮೀನು ಯಾರು ಕೊಡಿಸಿದರು’ ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಶ್ರೀಕೃಷ್ಣ, ‘ಅದು ನನಗೆ ಗೊತ್ತಿಲ್ಲ. ಯಾರೋ ಜಾಮೀನು ಕೊಟ್ಟಿದ್ದಾರೆ. ನಾನು ಹೊರಗೆ ಬಂದೆ’ ಎಂದು ಹೇಳಿ ಆಟೊ ಹತ್ತಿಕೊಂಡು ಸ್ಥಳದಿಂದ ಹೊರಟು ಹೊದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.