ADVERTISEMENT

ದೇಶದ ಕಲಾವೈಭವ ಅನಾವರಣ

ವಿಟಿಪಿಸಿ–ದಸ್ತಕರ್ ಕರಕುಶಲ ವಸ್ತುಪ್ರದರ್ಶನ ಸೆ.7ರವರೆಗೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 16:01 IST
Last Updated 5 ಸೆಪ್ಟೆಂಬರ್ 2021, 16:01 IST
ನಗರದ ಜಯಮಹಲ್‌ ಪ್ಯಾಲೇಸ್‌ ಹೋಟೆಲ್ ಆವರಣದಲ್ಲಿ ನಡೆಯುತ್ತಿರುವ ‘ದಸ್ತಕರ್ ಬಜಾರ್‌‘ ಕರಕುಶಲ ವಸ್ತುಗಳ ಮೇಳದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಉತ್ಪನ್ನಗಳನ್ನು ನೋಡುತ್ತಿರುವ ಗ್ರಾಹಕರು  ಪ್ರಜಾವಾಣಿ ಚಿತ್ರ
ನಗರದ ಜಯಮಹಲ್‌ ಪ್ಯಾಲೇಸ್‌ ಹೋಟೆಲ್ ಆವರಣದಲ್ಲಿ ನಡೆಯುತ್ತಿರುವ ‘ದಸ್ತಕರ್ ಬಜಾರ್‌‘ ಕರಕುಶಲ ವಸ್ತುಗಳ ಮೇಳದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಉತ್ಪನ್ನಗಳನ್ನು ನೋಡುತ್ತಿರುವ ಗ್ರಾಹಕರು  ಪ್ರಜಾವಾಣಿ ಚಿತ್ರ   

ಬೆಂಗಳೂರು: ದೇಶದ 29 ರಾಜ್ಯಗಳ ಸಂಸ್ಕೃತಿ-ಕಲೆಯನ್ನು ಬಿಂಬಿಸುವ ಕಲಾಕೃತಿಗಳು, ಕರ್ನಾಟಕದ ಕುಶಲ ಕರ್ಮಿಗಳ ಪ್ರತಿಭೆಗೆ ಕನ್ನಡಿ ಹಿಡಿಯುವ ಉತ್ಪನ್ನಗಳು, ಗ್ರಾಮೀಣ ಉದ್ಯೋಗ ಸೃಷ್ಟಿಯ ಸಾಕಾರ ರೂಪದಂತಿರುವ ಮಳಿಗೆಗಳು...

ನಗರದ ಜಯಮಹಲ್‌ ಪ್ಯಾಲೇಸ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಕರಕುಶಲ ವಸ್ತುಪ್ರದರ್ಶನದಲ್ಲಿ ಕಂಡು ಬಂದ ನೋಟವಿದು.

ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರವು (ವಿಟಿಪಿಸಿ) ದಸ್ತಕರ್‌ ಸ್ವಯಂಸೇವಾ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿರುವ ಈ ಮೇಳವು ಸೆ.1ರಿಂದ ಆರಂಭವಾಗಿದ್ದು, 7ರವರೆಗೆ ನಡೆಯಲಿದೆ.

ADVERTISEMENT

ಒಂದೇ ಸೂರಿನಡಿ ದೇಶದ ಎಲ್ಲ ರಾಜ್ಯಗಳ ಕರಕುಶಲ ವಸ್ತುಗಳನ್ನು, ಕಲಾಕೃತಿಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಸಾರ್ವಜನಿಕರಿಗೆ ಸಿಗುತ್ತಿದೆ. ಆಭರಣಗಳು, ಲೋಹದ ಕಲಾಕೃತಿಗಳು, ಚರ್ಮದ ಉತ್ಪನ್ನಗಳು,ವಿಭಿನ್ನ ಪೀಠೋಪಕರಣಗಳು ಸೇರಿದಂತೆ ಹಲವು ದೇಸಿ ಉತ್ಪನ್ನಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.

ಭೌಗೋಳಿಕ ಸನ್ನದು (ಜಿಐ) ಮಾನ್ಯತೆ ಹೊಂದಿರುವ ರಾಜ್ಯದ ಉತ್ಪನ್ನಗಳ ಮಳಿಗೆಗಳೂ ಇಲ್ಲಿವೆ.ಸಂಡೂರಿನ ಬಂಜಾರ ಕಸೂತಿ ಕಲೆಯ ಉತ್ಪನ್ನಗಳು, ಬಿದರಿ ಕಲೆ, ಚನ್ನಪಟ್ಟಣದ ಬೊಂಬೆ ಮತ್ತು ಆಟಿಕೆ, ಮೈಸೂರಿನ ಸಾಂಪ್ರದಾಯಿಕ ಕಲಾಕೃತಿಗಳು ಹಾಗೂ ಇನ್ನಿತರ ಉತ್ಪನ್ನಗಳು ಗ್ರಾಹಕರ ಗಮನ ಸೆಳೆಯುತ್ತಿವೆ.

ಹೊರರಾಜ್ಯದ ಕರಕುಶಲಕರ್ಮಿಗಳು ಬಾಡಿಗೆಗೆ ಮಳಿಗೆ ಪಡೆದಿದ್ದಾರೆ. ರಾಜ್ಯಸರ್ಕಾರವು ಕರ್ನಾಟಕದ ಕಲಾವಿದರು, ಕರಕುಶಲ ಕರ್ಮಿಗಳಿಗೆ ಉಚಿತವಾಗಿ ಮಳಿಗೆ ನೀಡಿ ಪ್ರೋತ್ಸಾಹಿಸುತ್ತಿದೆ.

‘ಪ್ರತಿಯೊಂದು ರಾಜ್ಯವೂ ತನ್ನದೇ ಆದ ಕಲೆ ಮತ್ತು ಸಂಸ್ಕೃತಿ ಹೊಂದಿರುತ್ತದೆ. ಅದಕ್ಕೆ ತಕ್ಕ ಕಲಾಕೃತಿಗಳು, ಕರಕುಶಲ ಉತ್ಪನ್ನಗಳನ್ನು ತಯಾರಿಸಲಾಗಿರುತ್ತದೆ. 29ಕ್ಕೂ ಹೆಚ್ಚು ರಾಜ್ಯಗಳ ಇಂತಹ ಕಲಾಕೃತಿಗಳು ಒಂದೇ ಕಡೆ ಸಿಗುತ್ತಿರುವುದು ಖುಷಿಯ ಸಂಗತಿ’ ಎಂದು ಗ್ರಾಹಕಿ ಗೌರಿ ಹೇಳಿದರು.

‘ಬೇರೆ ರಾಜ್ಯದ ಮಳಿಗೆಯವರು ವಾರಕ್ಕೆ ₹25 ಸಾವಿರದಿಂದ ₹40 ಸಾವಿರದವರೆಗೆ ಬಾಡಿಗೆ ನೀಡಬೇಕು. ರಾಜ್ಯಸರ್ಕಾರವು ನಮಗೆ ಉಚಿತವಾಗಿ ಮಳಿಗೆ ನೀಡಿದೆ. ಕೋವಿಡ್‌ ಬಿಕ್ಕಟ್ಟಿನಿಂದ ಎರಡು ವರ್ಷಗಳಲ್ಲಿ ಯಾವುದೇ ಮೇಳ ನಡೆದಿರಲಿಲ್ಲ. ಈಗ ಬೆಂಗಳೂರಿನಲ್ಲಿ ವಸ್ತುಪ್ರದರ್ಶನ ಹಮ್ಮಿಕೊಂಡಿರುವುದು ಅನುಕೂಲವಾಗಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ’ ಎಂದು ಮೈಸೂರಿನ ಕರಕುಶಲಕರ್ಮಿ ಕೆ. ರಾಘವೇಂದ್ರ ಹೇಳಿದರು.

ಬೆಳಿಗ್ಗೆ 11ರಿಂದ ರಾತ್ರಿ 8ರವರೆಗೆ ಮೇಳ ತೆರೆದಿರುತ್ತದೆ. ₹50 ಪ್ರವೇಶ ಶುಲ್ಕವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.