ADVERTISEMENT

ಬೆಂಗಳೂರು: ನಗರದೆಲ್ಲೆಡೆ ಆಂಜನೇಯನ ಆರಾಧನೆ

ಮಾರುತಿ ಮಂದಿರಗಳಲ್ಲಿ ಹನುಮದ್ ವ್ರತ ಆಚರಣೆ * ವಾಯುಪುತ್ರನಿಗೆ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 21:00 IST
Last Updated 27 ಡಿಸೆಂಬರ್ 2020, 21:00 IST
ನಗರದ ಮಹಾಲಕ್ಷ್ಮಿ ಬಡಾವಣೆಯಲ್ಲಿನ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ದೇವರ ದರ್ಶನ ಪಡೆದ ಭಕ್ತರು– ಪ್ರಜಾವಾಣಿ ಚಿತ್ರ
ನಗರದ ಮಹಾಲಕ್ಷ್ಮಿ ಬಡಾವಣೆಯಲ್ಲಿನ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ದೇವರ ದರ್ಶನ ಪಡೆದ ಭಕ್ತರು– ಪ್ರಜಾವಾಣಿ ಚಿತ್ರ   
""

ಬೆಂಗಳೂರು: ನಗರದಲ್ಲಿ ಭಾನುವಾರ ಆಂಜನೇಯ ಸ್ವಾಮಿ ಆರಾಧನೆ ಜೋರಾಗಿತ್ತು. ಹನುಮ ಜಯಂತಿ ಪ್ರಯುಕ್ತ ಮಾರುತಿ ದೇಗುಲಗಳಲ್ಲಿ ಹನುಮದ್‌ ವ್ರತಾಚರಣೆ ಮಾಡಲಾಯಿತು.

ಮಹಾಲಕ್ಷ್ಮಿಪುರದ ಪ್ರಸನ್ನ ವೀರಾಂಜನೇಯಸ್ವಾಮಿ ದೇವಸ್ಥಾನ, ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಾಲಯ, ಗುಟ್ಟೆ ಆಂಜನೇಯಸ್ವಾಮಿ ದೇವಸ್ಥಾನ ಸೇರಿದಂತೆ ನಾನಾ ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ಅಲಂಕಾರ ಮಾಡಲಾಗಿತ್ತು.

ವ್ರತಾಚರಣೆಯ ಮೊದಲ ದಿನ: ’ಡಿ.27 ಹನುಮ ಜಯಂತಿ (ಆಂಜನೇಯನ ಜನ್ಮದಿನ) ಅಲ್ಲ. ರಾವಣನ ಹಿಡಿತದಲ್ಲಿದ್ದ ಸೀತೆಯನ್ನು ಕರೆತರುವವರೆಗೆ ನೀರು, ಫಲಾಹಾರ ಯಾವುದನ್ನೂ ಸೇವಿಸುವುದಿಲ್ಲ ಎಂದು ರಾಮನ ಭಕ್ತ ಆಂಜನೇಯ ಸ್ವಾಮಿ ಪಣತೊಟ್ಟು ವ್ರತಾಚರಣೆ ಆರಂಭಿಸಿದ ಮೊದಲ ದಿನವಿದು. ಈ ದಿನ ಅತ್ಯಂತ ಶ್ರೇಷ್ಠವಾದುದು. ಈ ಹಿನ್ನೆಲೆಯಲ್ಲಿ ಹನುಮದ್ ವ್ರತಾಚರಣೆಯನ್ನು ಭಕ್ತಿಯಿಂದ ಆಚರಿಸಲಾಗುತ್ತಿದೆ‘ ಎಂದು ಅರ್ಚಕರೊಬ್ಬರು ಹೇಳಿದರು.

ADVERTISEMENT

ಮಹಾಲಕ್ಷ್ಮಿಪುರದ ಪ್ರಸನ್ನ ವೀರಾಂಜನೇಯಸ್ವಾಮಿ ದೇವಸ್ಥಾನ ಸೇರಿದಂತೆ ಬಹುತೇಕ ಆಂಜನೇಯ ದೇವಾಲಯಗಳಲ್ಲಿ ಭಾನುವಾರ ಹನುಮದ್ ವ್ರತ ಆಚರಿಸಲಾಯಿತು.

ಭಕ್ತರ ಸಂಖ್ಯೆ ವಿರಳ: ನಗರದ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಜರುಗಿತು. ಆಂಜನೇಯ ದೇವರ ಮೂರ್ತಿಗಳಿಗೆ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಕೆಲವೆಡೆ ತೋಮಾಲೆ ಮತ್ತು ವಡೆಮಾಲೆ ಸೇವೆ ನಡೆಯಿತು. ಸಿಹಿಯನ್ನು ಪ್ರಸಾದವಾಗಿ ಹಂಚಲಾಯಿತು. ಕೋವಿಡ್‌ ಕಾರಣದಿಂದ ಈ ಬಾರಿ ದೇಗುಲಗಳಲ್ಲಿ ನಿರೀಕ್ಷಿಸಿದಷ್ಟು ಭಕ್ತರು ಕಂಡು ಬರಲಿಲ್ಲ.

ಹಾಲಿನ ಅಭಿಷೇಕ, ಅನ್ನದಾನ: ಯಡಿಯೂರಿನ ಪ್ರಸನ್ನ ಆಂಜನೇಯ ದೇವಸ್ಥಾನ, ವಿಜಯನಗರದ ಸನಾತನ ಭಕ್ತ ಮಂಡಳಿ, ಕತ್ರಿಗುಪ್ಪೆಯ ಹರಕೆ ಹನುಮ ದೇವಸ್ಥಾನ, ಆರ್‌ಪಿಸಿ ಬಡಾವಣೆಯ ಪಂಚಮುಖಿ ಆಂಜನೇಯ ದೇವಾಲಯ, ಮಾರತ್ತಹಳ್ಳಿಯ ಆಂಜನೇಯಸ್ವಾಮಿ ದೇವಸ್ಥಾನ, ದಾಸನಪುರದ ವೀರಾಂಜನೇಯಸ್ವಾಮಿ, ಹೊಸಕೆರೆಹಳ್ಳಿಯ ಅಭಯಾಂಜನೇಯಸ್ವಾಮಿ, ಮಹಾಲಕ್ಷ್ಮಿಪುರದ ಪ್ರಸನ್ನ ಆಂಜನೇಯಸ್ವಾಮಿ, ಯಶವಂತಪುರದ ದಾರಿ ಆಂಜನೇಯ ಸ್ವಾಮಿ, ಗುಟ್ಟಹಳ್ಳಿಯ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಜೈಮಾರುತಿ ನಗರದಲ್ಲಿ ಹನುಮ ಹಬ್ಬ ಆಚರಿಸಿದರೆ, ಹೊಂಬೇಗೌಡನಗರದ ರಾಮಸೇವಾ ಮಂಡಳಿಯು ಆಂಜನೇಯ ಮೂರ್ತಿಗೆ ಹಾಲಿನಿಂದ ಅಭಿಷೇಕ ಮಾಡಿಸಿತು.

ಹನುಮ ಜಯಂತಿ ಅಂಗವಾಗಿ ರಾಮ, ಲಕ್ಷ್ಮಣ, ಆಂಜನೇಯ ದೇವರಂತೆ ವೇಷ ತೊಟ್ಟ ಕಲಾವಿದರು ನಗರದ ಮೈಸೂರು ಬ್ಯಾಂಕ್‌ ವೃತ್ತದ ಬಳಿ ಕಂಡಿದ್ದು ಹೀಗೆ..

ಮಂಗಗಳಿಗೆ ಆಹಾರ
ಬೆಂಗಳೂರು:
ಹನುಮ ಜಯಂತಿಯನ್ನು ವೈಯಾಲಿಕಾವಲ್‌ನ ಶ್ರೀ ಆಂಜನೇಯ ದೇವಾಲಯ ಟ್ರಸ್ಟ್‌ನ ಸದಸ್ಯರು ವಿಭಿನ್ನವಾಗಿ ಆಚರಿಸಿದರು. ಹನುಮಂತನ ಅವತಾರವೆಂದೇ ಭಾವಿಸುವ ಮಂಗಗಳಿಗೆ ಆಹಾರ ನೀಡಿದರು.

ಯಲಹಂಕದ ಸಂತೆ ವೃತ್ತದಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಅತಿ ಎತ್ತರದ ಆಂಜನೇಯಸ್ವಾಮಿ ಮೂರ್ತಿಗೆ ಭಕ್ತರಿಂದ ಕುಂಭಾಭಿಷೇಕ ನೆರವೇರಿಸಲಾಯಿತು. ಜಕ್ಕೂರು ಬಡಾವಣೆಯ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಷ್ಣು ಸಹಸ್ರನಾಮ ಹಾಗೂ ಭಜನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಯಲಹಂಕ ಸಮೀಪದ ಕೊಡಿಗೇಹಳ್ಳಿ ಗೇಟ್ ಬಳಿಯಿರುವ ಗುಂಡಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಸಾವಿರಾರು ಜನರಿಗೆ ಅನ್ನಸಂತರ್ಪಣೆ
ಹೆಸರಘಟ್ಟ:
ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಗ್ರಾಮಸ್ಥರು ಭಾನುವಾರ ಹನುಮ ಜಯಂತಿಯನ್ನು ಭಕ್ತಿಯಿಂದ ಆಚರಿಸಿದರು.

ಗೋಪಾಲಪುರ, ಹೆಸರಘಟ್ಟ, ಟಿ.ಬಿ.ಕ್ರಾಸ್, ಬ್ಯಾತ, ಹುಸ್ಕೂರು ಗ್ರಾಮಗಳಲ್ಲಿ ಗ್ರಾಮದ ಯುವಕರು ಗ್ರಾಮಸ್ಥರಿಗೆ ಪಾನಕ, ಕೋಸಂಬರಿಯನ್ನು ಹಂಚಿ ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಿದರು. ಚಿಕ್ಕಬಾಣಾವರ ಗ್ರಾಮದ ಕೂರ್ಮನಳ್ಳಿ ಆಂಜನೇಯ ದೇವಸ್ಥಾನದಲ್ಲಿ ಯಶಸ್ಸು ವಿದ್ಯಾ ಸಂಸ್ಥೆಯ ಕೃಷ್ಣಪ್ಪ ಅವರು ಪ್ರಸಾದ ವಿನಿಯೋಗ ಸೇವೆ ಮಾಡಿದರು.

ಸೀತಕೆಂಪನಹಳ್ಳಿ,ಕಾಕೋಳು,ಹಾರೋಹಳ್ಳಿ ಪಾಳ್ಯ ಗ್ರಾಮಸ್ಥರು ಪಶುಸಂಗೋಪನೆ ಕ್ಷೇತ್ರದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಹಮ್ಮಿಕೊಂಡಿದ್ದರು. ಹದಿನಾರು ಗ್ರಾಮಗಳ ಗ್ರಾಮಸ್ಥರು ಭಾಗಿಯಾಗಿದ್ದರು. ಸಾವಿರಾರು ಜನರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

ಮಾಲಾಧಾರಿಗಳಿಂದ ಪಾದಯಾತ್ರೆ
ನೆಲಮಂಗಲ:
ಶ್ರೀನಿಜಗಲ್ಲು ಸಿದ್ಧರಬೆಟ್ಟದಲ್ಲಿರುವ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಹನುಮಜಯಂತಿ ಪ್ರಯುಕ್ತ ಮಾಲಾಧಾರಿಗಳಿಂದ ಪಟ್ಟಣದ ರಾಮಾಂಜನೇಯ ದೇವಸ್ಥಾನದಿಂದ ಬೆಟ್ಟದವರೆಗೂ ಪಾದಯಾತ್ರೆ ನಡೆಯಿತು.

ಬೆಟ್ಟದ ತುದಿಯಲ್ಲಿ ಸಿದ್ಧೇಶ್ವರಸ್ವಾಮಿ, ಗಣಪತಿ, ಲಕ್ಷ್ಮೀನರಸಿಂಹ, ಮಲ್ಲಿಕಾರ್ಜುನ, ವೀರಭದ್ರ, ಮತ್ಸ್ಯಕನ್ಯೆ, ಗಾಯತ್ರಿ, ಕಾಲಭೈರವ, ಸುಬ್ರಹ್ಮಣ್ಯ ದೇವಸ್ಥಾನಗಳಿವೆ.

ಬಸವಣ್ಣದೇವರ ಮಠದ ಸಿದ್ದಲಿಂಗ ಸ್ವಾಮೀಜಿ ಆಂಜನೇಯನ ಚಿತ್ರಕ್ಕೆ ಆರತಿ ಮಾಡುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.

ವೀರಗಾಸೆ ಆಕರ್ಷಣೆ: ನೆಲಮಂಗಲ ತಾಲ್ಲೂಕಿನ ಎಲ್ಲ ಹನುಮ ದೇವಾಲಯಗಳಲ್ಲಿ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶನಿವಾರದಿಂದಲೇ ಹೋಮ ಹವನ, ದೈವಿಕ ಕಾರ್ಯಕ್ರಮಗಳು ನಡೆದವು.

ಉತ್ತರಘಟ್ಟ ಆಂಜನೇಯ ದೇವಾಲಯದಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೆ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿತ್ತು. ಜನಪದ ಕಲಾ ಪ್ರಕಾರಗಳು ಅದರಲ್ಲೂ ವೀರಗಾಸೆ ನೆರೆದಿದ್ದವರ ಗಮನ ಸೆಳೆಯಿತು.

ಹೋಮ–ಹವನ
ಯಲಹಂಕ:
ವೆಂಕಟೇಶಪುರ (ಕಳ್ಳಿಪಾಳ್ಯ)ಗ್ರಾಮದಲ್ಲಿರುವ ಅಭಯ ಆಂಜನೇಯಸ್ವಾಮಿ ದೇವಸ್ಥಾನದ 14ನೇ ವಾರ್ಷಿಕೋತ್ಸವ ಹಾಗೂ ಹನುಮ ಜಯಂತಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಶನಿವಾರ ಸಂಜೆಯಿಂದಲೇ ಧ್ವಜಾರೋಹಣ, ಕಳಶಸ್ಥಾಪನೆ, ವಾಸುದೇವ ಪುಣ್ಯಾರಾಧನೆ, ಲೋಕಕಲ್ಯಾಣಾರ್ಥವಾಗಿ ರಾಮತಾರಕ ಹೋಮ, ನವಗ್ರಹ, ಗಣಪತಿ, ಪವಮಾನ ಹಾಗೂ ರಾಯಶ್ಚಿತ್ತ ಹೋಮಗಳು ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ಭಾನುವಾರ ಬೆಳಿಗ್ಗೆ 5 ಗಂಟೆಯಿಂದ ಕಳಸಾರಾಧನೆ, ಪಂಚಾಮೃತ ಅಭಿಷೇಕ, ಪ್ರಾಕಾರೋತ್ಸವ ಹಾಗೂ ಸೀತಾರಾಮ ಕಲ್ಯಾಣೋತ್ಸವವನ್ನು ಏರ್ಪಡಿಸಲಾಗಿತ್ತು.

ಪಾನಕ–ಕೋಸಂಬರಿ ವಿತರಣೆ
ಕೆ.ಆರ್.ಪುರ:
ಹನುಮ ಜಯಂತಿ ಮಹೋತ್ಸವದ ಪ್ರಯುಕ್ತ ರಾಮಮೂರ್ತಿನಗರದ ಕಲ್ಕೆರೆಯ ಭಕ್ತಾಂಜನೇಯ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಬೆಳಿಗ್ಗೆ ಆಂಜನೇಯಸ್ವಾಮಿಗೆ ಪೂಜೆ ಅಭಿಷೇಕ ಮಾಡಿ ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಉತ್ಸವ ಮೂರ್ತಿಯನ್ನು ಶೃಂಗರಿಸಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಭಕ್ತರಿಗೆ ತೀರ್ಥ, ಪಾನಕ,ಮಜ್ಜಿಗೆ, ಕೋಸಂಬರಿ ಪ್ರಸಾದ ವಿತರಿಸಲಾಯಿತು. ಕಲಾ ತಂಡದ ವತಿಯಿಂದ ಭಕ್ತಿ ಗೀತೆ ಸಾಂಸ್ಕೃತಿಕ
ಕಾರ್ಯಕ್ರಮಗಳು ದಿನವಿಡೀ ನಡೆದವು.

ಕಲ್ಕೆರೆ ಸುತ್ತಮುತ್ತಲಿನ ಕನಕನಗರ, ಚನ್ನಸಂದ್ರ, ಬಂಜಾರ ಬಡಾವಣೆ, ಎನ್.ಆರ್.ಐ ಬಡಾವಣೆ, ಅಗರ ಊರಿನ ಭಕ್ತರು ಸರತಿ ಸಾಲಿನಲ್ಲಿ ನಿಂತು ಆಂಜನೇಯಸ್ವಾಮಿ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.