ಬೆಂಗಳೂರು: ಯುವಕನೊಬ್ಬನಿಗೆ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸಿ, ಆತನ ಮರ್ಮಾಂಗಕ್ಕೆ ಹಾನಿ ಮಾಡಿರುವ ಆರೋಪದ ಅಡಿ ಐವರು ಲಿಂಗತ್ವ ಅಲ್ಪಸಂಖ್ಯಾತರ ವಿರುದ್ಧ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರಾ, ಪ್ರೀತಿ, ಕಾಜಲ್, ಅಶ್ವಿನಿ, ಮುಗಿಲ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಡಿ.ಜೆ. ಹಳ್ಳಿ ನಿವಾಸಿ 18 ವರ್ಷದ ಯುವಕ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
‘ಡಿ.ಜೆ. ಹಳ್ಳಿಯಲ್ಲಿ ವಾಸವಾಗಿದ್ದ ಯುವಕ ಅಂಬೇಡ್ಕರ್ ಕಾಲೇಜು ಸಮೀಪದ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅದೇ ಟೀ ಅಂಗಡಿಗೆ ಬರುತ್ತಿದ್ದ ಲಿಂಗತ್ವ ಅಲ್ಪಸಂಖ್ಯಾತರು ಯುವಕನಿಗೆ ತಮ್ಮೊಂದಿಗೆ ಬಂದರೆ ಉತ್ತಮ ಸಂಪಾದನೆ ಮಾಡಬಹುದು ಎಂದು ಪುಸಲಾಯಿಸಿದ್ದರು. ಆರಂಭದಲ್ಲಿ ಯುವಕ, ಆರೋಪಿಗಳ ಜತೆಗೆ ತೆರಳಲು ನಿರಾಕರಿಸಿದ್ದ. ನಂತರ, ಯುವಕನಿಗೆ ಬೆದರಿಸಿದ್ದ ಆರೋಪಿಗಳು, ಟ್ಯಾನರಿ ರಸ್ತೆಯಲ್ಲಿರುವ ತಮ್ಮ ಮನೆಗೆ ಕರೆದೊಯ್ದು ಕೆಲವು ದಿನಗಳ ಕಾಲ ಗೃಹ ಬಂಧನದಲ್ಲಿ ಇರಿಸಿದ್ದರು’ ಎಂದು ದೂರಿನಲ್ಲಿ ವಿವರಿಸಲಾಗಿದೆ.
‘ಯುವಕನ ಮನೆಯವರನ್ನು ಹತ್ಯೆ ಮಾಡುವುದಾಗಿ ಬೆದರಿಸಿ ಯುವಕನಿಂದ ಮೂರು ವರ್ಷ ಭಿಕ್ಷಾಟನೆ ಮಾಡಿಸಿದ್ದರು. ಆರೋಪಿಗಳಿಗೆ ಯುವಕ ಪ್ರತಿನಿತ್ಯ ₹2 ಸಾವಿರ ತಂದು ಕೊಡುತ್ತಿದ್ದ. ಅದಾದ ಮೇಲೆ ಲಿಂಗ ಪರಿವರ್ತನೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದರು. ಅದಕ್ಕೆ ಯುವಕ ಒಪ್ಪದಿದ್ದಾಗ ಆತನಿಗೆ ಹಿಂಸೆ ನೀಡಿ ಪ್ರಜ್ಞೆ ತಪ್ಪಿಸುವ ಚುಚ್ಚುಮದ್ದು ನೀಡಿ ಯುವಕನ ಮರ್ಮಾಂಗ ಕತ್ತರಿಸಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.