ADVERTISEMENT

ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಆಕ್ರೋಶ

ಹಾಥರಸ್‌ ಅತ್ಯಾಚಾರ ಪ್ರಕರಣ, ಸರಣಿ ಪ್ರತಿಭಟನೆ l ರಾಷ್ಟ್ರಪತಿ ಮಧ್ಯಪ್ರವೇಶಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 19:43 IST
Last Updated 5 ಅಕ್ಟೋಬರ್ 2020, 19:43 IST
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಮತ್ತು ಸಂಘ ಸಂಸ್ಥೆಗಳ ಒಕ್ಕೂಟ ಫೆಡರೇಷನ್ ಆಫ್ ಕರ್ನಾಟಕ ಎಲೆಕ್ಟ್ರಿಸಿಟಿ ಬೋರ್ಡ್ ಮತ್ತು ಅಸೋಸಿಯೇಷನ್ ಸದಸ್ಯರು ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣದ ವಿರುದ್ಧ ಕಾವೇರಿ ಭವನದ ಆವರಣದಲ್ಲಿ ಪ್ರತಿಭಟನೆ ಮಾಡಿದರು.    – ಪ್ರಜಾವಾಣಿ ಚಿತ್ರ
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಮತ್ತು ಸಂಘ ಸಂಸ್ಥೆಗಳ ಒಕ್ಕೂಟ ಫೆಡರೇಷನ್ ಆಫ್ ಕರ್ನಾಟಕ ಎಲೆಕ್ಟ್ರಿಸಿಟಿ ಬೋರ್ಡ್ ಮತ್ತು ಅಸೋಸಿಯೇಷನ್ ಸದಸ್ಯರು ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣದ ವಿರುದ್ಧ ಕಾವೇರಿ ಭವನದ ಆವರಣದಲ್ಲಿ ಪ್ರತಿಭಟನೆ ಮಾಡಿದರು.    – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಯುವತಿ ಮೇಲೆ ಅತ್ಯಾಚಾರವೆಸಗಿ ಕೊಲೆಗೆ ಯತ್ನಿಸಿರುವ ಆರೋಪಿಗಳನ್ನು ರಕ್ಷಿಸಲು ಉತ್ತರ ಪ್ರದೇಶದ ಸರ್ಕಾರ ಪ್ರಯತ್ನಿಸುತ್ತಿದೆ. ಈ ಸರ್ಕಾರವನ್ನು ವಜಾಗೊಳಿಸಬೇಕು’ ಎಂದು ಒತ್ತಾಯಿಸಿ ಹಲವು ಸಂಘಟನೆಗಳ ಸದಸ್ಯರು ನಗರದಲ್ಲಿ ಸೋಮವಾರ ಸರಣಿ ಪ್ರತಿಭಟನೆಗಳನ್ನು ನಡೆಸಿದರು.

ಮೈಸೂರು ಬ್ಯಾಂಕ್ ವೃತ್ತದಲ್ಲಿ ‘ದಲಿತ ಸಂಘರ್ಷ ಸಮಿತಿ’ ಸಂಸ್ಥಾಪಕ ಎನ್‌. ಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

‘ಉತ್ತರ ಪ್ರದೇಶದಲ್ಲಾದ ಘಟನೆಯನ್ನು ಇಡೀ ರಾಷ್ಟ್ರವೇ ಖಂಡಿಸುತ್ತಿದೆ. ಆದರೆ, ಅಲ್ಲಿಯ ಸರ್ಕಾರ ಆರೋಪಿಗಳಿಗೆ ಶಿಕ್ಷೆ ಕೊಡಿಸುವ ಬದಲು ನಿರ್ಲಕ್ಷ್ಯ ತೋರುತ್ತಿದೆ’ ಎಂದು ಪ್ರತಿಭಟನಕಾರರು ದೂರಿದರು.

ADVERTISEMENT

ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆ: ಆನಂದರಾವ್ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆ ಸದಸ್ಯರು ಪ್ರತಿಭಟನೆ ನಡೆಸಿದರು.

ಗಾಂಧಿ ಪ್ರತಿಮೆ ಎದುರು ಸೇರಿದ್ದ ಪ್ರತಿಭಟನಕಾರರು, ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ‘ಯುವತಿಗೆ ನ್ಯಾಯ ಬೇಕು’ ಎಂಬ ಘೋಷಣಾ ಫಲಕ ಪ್ರದರ್ಶಿಸಿದರು.

‘ಸ್ಥಳೀಯ ಅಧಿಕಾರಿ, ರಾಜಕಾರಣಿಗಳು, ರಾತ್ರೋರಾತ್ರಿ ಯುವತಿಯ ಅಂತ್ಯ ಸಂಸ್ಕಾರ ಮಾಡಿ ಸಾಕ್ಷ್ಯ ನಾಶಗೊಳಿಸಿದ್ದಾರೆ. ಇದು ದೊಡ್ಡ ಅಪರಾಧ. ಸತ್ಯವನ್ನು ಕೊಲ್ಲುವ ಪ್ರಯತ್ನ ಉತ್ತರ ಪ್ರದೇಶದಲ್ಲಿ ನಡೆದಿದೆ. ರಾಷ್ಟ್ರಪತಿಯವರು
ಮಧ್ಯಪ್ರವೇಶಿಸಿ ಸರ್ಕಾರವನ್ನು ವಜಾಗೊಳಿಸಬೇಕು’ ಎಂದೂ ಪ್ರತಿಭಟನಕಾರರು ಆಗ್ರಹಿಸಿದರು. ಮಾವಳ್ಳಿ ಶಂಕರ್‌, ಲಕ್ಷ್ಮಿನಾರಾಯಣ ನಾಗವಾರ, ಗುರುಪ್ರಸಾದ್‌ ಕೆರಗೋಡು ಮತ್ತಿತರರು ನೇತೃತ್ವ ವಹಿಸಿದ್ದರು.

ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ: ಮೈಸೂರು ಬ್ಯಾಂಕ್ ವೃತ್ತದಲ್ಲಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು. ಪಾರ್ಟಿಯ ದಲಿತ ಮಹಿಳಾ ಒಕ್ಕೂಟದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

‘ಉತ್ತರ ಪ್ರದೇಶದಲ್ಲಿ ಯುವತಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಆರೋಪಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಪ್ರಜಾ ವಿಮೋಚನಾ ಸಮಿತಿ: ಜಾಲಹಳ್ಳಿ ವೃತ್ತದಲ್ಲಿ ಪ್ರಜಾ ವಿಮೋಚನಾ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ‘ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು’ ಎಂದು ಸದಸ್ಯರು ಆಗ್ರಹಿಸಿದರು.

ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸಬೇಕು ಹಾಗೂ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

‘ಕುಟುಂಬಸ್ಥರ ಅನುಪಸ್ಥಿತಿಯಲ್ಲಿ ಅತ್ಯಾಚಾರ ಸಂತ್ರಸ್ತೆಯ ಅಂತ್ಯಕ್ರಿಯೆ ಮಾಡಿರುವ ಪೊಲೀಸರು, ಸಾಕ್ಷ್ಯನಾಶ ಮಾಡಿದ್ದಾರೆ. ಈ ಕೃತ್ಯಗಳಿಗೆ ಸರ್ಕಾರವೇ ಬೆಂಬಲಿಸುತ್ತಿದೆ. ಇದಕ್ಕೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಕರಣದ ತನಿಖೆ ನಡೆಸಿ ಸಂತ್ರಸ್ತೆಗೆ ನ್ಯಾಯ ಒದಗಿಸಬೇಕು’ ಎಂದು ಪಕ್ಷದ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಒತ್ತಾಯಿಸಿದರು.

ಸಮಾನ ವೇತನಕ್ಕಾಗಿ ಪ್ರತಿಭಟನೆ

‘ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು’ ಎಂದು ಒತ್ತಾಯಿಸಿ ’ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರ ಸಂಘ’ದ ನೇತೃತ್ವದಲ್ಲಿ ನೌಕರರು ಸೋಮವಾರ ಪ್ರತಿಭಟನೆ ನಡೆಸಿದರು.

ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ಸೇರಿದ್ದ ಪ್ರತಿಭಟನಕಾರರು, ‘ಹಲವು ದಿನಗಳಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುತ್ತಿದೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸಲು ಹಿಂದೇಟು ಹಾಕುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸೇವಾ ಭದ್ರತೆ ಒದಗಿಸಬೇಕು ಹಾಗೂ ನೌಕರರಿಗೆ ಸಿಗಬೇಕಾದ ಸವಲತ್ತುಗಳನ್ನು ನೀಡಬೇಕು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಅವರು ಒತ್ತಾಯಿಸಿದರು.

ಕೆಪಿಟಿಸಿಎಲ್ ನೌಕರರರ ಪ್ರತಿಭಟನೆ

‘ರಾಜ್ಯದ ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ವಿರೋಧಿಸಿ’ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ನೌಕರರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಕಾವೇರಿ ಭವನದಲ್ಲಿರುವ ಕೆಪಿಟಿಸಿಎಲ್ ಕಚೇರಿ ಆವರಣದಲ್ಲಿ ಸೇರಿದ್ದ ನೌಕರರು, ‘ಖಾಸಗೀಕರಣ ಪ್ರಕ್ರಿಯೆ ಕೈಬಿಡಬೇಕು’ ಎಂದು ಒತ್ತಾಯಿಸಿದರು. ಕೆಪಿಟಿಸಿಎಲ್ ನೌಕರರ ಸಂಘ ಹಾಗೂ ಸಂಘ ಸಂಸ್ಥೆಗಳ ಒಕ್ಕೂಟ, ಕರ್ನಾಟಕ ವಿದ್ಯುತ್ ಮಂಡಳಿಗಳ ಒಕ್ಕೂಟದ ನೇತೃತ್ವದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಮಾಜಿ ಸೈನಿಕರ ಕುಟುಂಬದ ಪ್ರತಿಭಟನೆ

‘ಕೊಡತಿ ಗ್ರಾಮದಲ್ಲಿ ರಾಜೀವ ಗಾಂಧಿ ವಸತಿ ನಿಗಮ ನಿಯಮಿತದಿಂದ ನಿರ್ಮಿಸಿರುವ ಮನೆಗಳನ್ನು ಅರ್ಹ ಮಾಜಿ ಸೈನಿಕರ ಕುಟುಂಬಗಳಿಗೆ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿ ಮಾಜಿ ಸೈನಿಕರು
ಹಾಗೂ ಅವರ ಕುಟುಂಬದವರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಆನಂದರಾವ್ ವೃತ್ತ ಬಳಿಯ ಗಾಂಧಿ ಪ್ರತಿಮೆ ಎದುರು ‘ಮಾಜಿ ಸೈನಿಕರ ಅಭಿವೃದ್ಧಿ ಒಕ್ಕೂಟ’ ಹಾಗೂ ’ನನ್ನ ಮನೆ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸಂಘದ ಅಧ್ಯಕ್ಷ ಡಾ.ಎನ್‌.ಕೆ.ಶಿವಣ್ಣ ನೇತೃತ್ವ ವಹಿಸಿದ್ದರು. ‘ಮನೆ ಕೊಡಿ, ಇಲ್ಲವೇ ವಿಷ ಕೊಡಿ’, ‘ಲಂಚಕೋರ ಭ್ರಷ್ಟ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಿ’, ‘ಬಡವರಿಗೆ ಮನೆ ಕೊಡಿ ನೋಯಿಸಬೇಡಿ’ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.