ಬೆಂಗಳೂರು: ರಾಜರಾಜೇಶ್ವರಿ ನಗರದ ಹವ್ಯಕ ಪ್ರತಿಷ್ಠಾನವು ಭಾನುವಾರ ಆಯೋಜಿಸಿದ್ದ ‘ಸಂಭ್ರಮ 2025’ ವಾರ್ಷಿಕೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಕರಾವಳಿ ಮತ್ತು ಮಲೆನಾಡಿನ ಸಂಸ್ಕೃತಿ ಬಿಂಬಿಸುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು.
ಸಮಾಜಮುಖಿ ಸಂಸ್ಕೃತಿ ಬಿಂಬಿಸುವ ಯಕ್ಷಗಾನ, ತಬಲಾ ಸೋಲೊ, ಸಿತಾರ್ ಹಾಗೂ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಮಕ್ಕಳು ಪ್ರದರ್ಶಿಸಿದರು. ‘ಜೀವಜಲ ಕಾವೇರಿ’ ರೂಪಕ ಪ್ರೇಕ್ಷಕರ ಮನ ಸೆಳೆಯಿತು.
ಕೊಳಗಿ ಕೇಶವ ಹೆಗಡೆಯವರ ಮಧುರ ಕಂಠದ ಭಾಗವತಿಕೆಯಲ್ಲಿ ದಕ್ಷ ಯಜ್ಞ ತಾಳಮದ್ದಳೆಯು ಯಶಸ್ವಿಯಾಗಿ ನೆರವೇರಿತು. ಮೃದಂಗ– ಯಲ್ಲಾಪುರದ ಶಂಕರ ಭಾಗವತ, ಅರ್ಥಧಾರಿಗಳಾಗಿ ಮೈಸೂರಿನ ಗ.ನಾ.ಭಟ್ಟ, ರಾಮಕುಂಜದ ಗಣರಾಜ ಕುಂಬ್ಳೆ, ಮೈಸೂರಿನ ಕಬ್ಬಿನಾಲೆ ವಸಂತ ಭಾರದ್ವಾಜ, ಬೆಂಗಳೂರಿನ ಶೀಗೇಹಳ್ಳಿ ಆನಂದ ಹೆಗಡೆ ಅವರು ಪಾಲ್ಗೊಂಡಿದ್ದರು.
ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ರವಿ ಹೆಗಡೆ ಮಾತನಾಡಿ, ‘ಹವ್ಯಕ ಸಂಸ್ಕೃತಿ ಉಳಿಸಿ, ಮುಂದಿನ ಪೀಳಿಗೆಗೆ ತಲುಪಿಸಲು ತಂತ್ರಜ್ಞಾನ , ಕೃತಕ ಬುದ್ಧಿಮತ್ತೆ ಹಾಗೂ ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು’ ಎಂದರು.
ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಎಂ.ಕೆ.ಸತೀಶ್, ರಾಜರಾಜೇಶ್ವರಿ ನಗರದ ಮಾಜಿ ನಗರಸಭಾ ಸದಸ್ಯ ಮಂಜು, ಪ್ರತಿಷ್ಠಾನದ ಕೋಶಾಧ್ಯಕ್ಷ ರಾಮಕೃಷ್ಣ ಹೆಗಡೆ, ಗೋಪಾಲಕೃಷ್ಣ ಹೆಗಡೆ, ಗಣಪತಿ ಹೆಗಡೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ‘ಹವಿಗನ್ನಡ’ ಕುರಿತ ಆಶುಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಚಿತ್ರಕಲೆ ಹಾಗೂ ಚುಕ್ಕಿ ರಂಗೋಲಿ ಸ್ಪರ್ಧೆಯಲ್ಲಿ ಜಯಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.