
ಬೆಂಗಳೂರು: ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ಅಖಿಲ ಹವ್ಯಕ ಮಹಾಸಭೆ, ಈ ಯೋಜನೆಯಿಂದ ಹಿಂದೆ ಸರಿಯುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ.
ಇದೇ 11 ರಂದು ಶಿರಸಿಯಲ್ಲಿ ನಡೆಯುವ ಬೃಹತ್ ಜನ ಸಮಾವೇಶಕ್ಕೆ ಮಹಾಸಭೆ ಬೆಂಬಲ ಸೂಚಿಸಿದೆ. ‘ನದಿಗಳು ಜನಸಮೂಹದ ಜೀವನಾಡಿಗಳಾಗಿದ್ದು, ಅವುಗಳ ನೈಸರ್ಗಿಕ ಹರಿವಿನ ಬದಲಾವಣೆಯು ಜೀವಸಂಕುಲಕ್ಕೆ ಅಪಾಯಕಾರಿಯಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾದರೆ, ದೀರ್ಘಕಾಲದ ಸಾಧಕ ಬಾಧಕಗಳನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಬೇಕು. ಸಮಗ್ರ ವೈಜ್ಞಾನಿಕ ಚಿಂತನೆ ಇಲ್ಲದ ಅಭಿವೃದ್ಧಿಯು ಭವಿಷ್ಯದಲ್ಲಿ ಜೀವ ಸಂಕುಲಕ್ಕೆ ಮಾರಕವಾಗಲಿದೆ. ಆದ್ದರಿಂದ ಬೇಡ್ತಿ ಹಾಗೂ ಅಘನಾಶಿನಿ ನದಿ ತಿರುವಿನ ಯೋಜನೆಯಿಂದ ಸರ್ಕಾರಗಳು ತಕ್ಷಣ ಹಿಂದೆ ಸರಿಯಬೇಕು’ ಎಂದು ಮಹಾಸಭೆ ಅಧ್ಯಕ್ಷ ಡಾ.ಗಿರಿಧರ ಕಜೆ ಒತ್ತಾಯಿಸಿದ್ದಾರೆ.
‘ಬೇಡ್ತಿ-ಅಘನಾಶಿನಿ ಹಾಗೂ ಶರಾವತಿ ನದಿಗಳು ಉತ್ತರ ಕನ್ನಡ ಜಿಲ್ಲೆಯ ಜೀವ ನದಿಗಳು. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಸೂಕ್ಷ್ಮ ಪ್ರದೇಶವಾದ ಈ ಜಿಲ್ಲೆಯ ಮೇಲೆ ಇನ್ನಷ್ಟು ಹೇರಿಕೆ ಮಾಡುವುದು ಜನಜೀವನ ಹಾಗೂ ಪ್ರಾಕೃತಿಕ ಸಂಪತ್ತಿನ ಮೇಲಿನ ದೌರ್ಜನ್ಯವಾಗಿದೆ’ ಎಂದಿದ್ದಾರೆ.
‘ಶಿರಸಿಯಲ್ಲಿ ನಡೆಯಲಿರುವ ಬೃಹತ್ ಜನ ಸಮಾವೇಶದಲ್ಲಿ ಹವ್ಯಕ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಜನವಿರೋಧಿ ಯೋಜನೆಗೆ ನಮ್ಮ ವಿರೋಧವನ್ನು ದಾಖಲಿಸಬೇಕು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.