
ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದರೆ, ಮತ್ತೊಂದೆಡೆ ಮಠಗಳು ಬಡವರಿಗೆ, ದುರ್ಬಲರಿಗೆ ಶಿಕ್ಷಣ ನೀಡುವ ಕೆಲಸ ಮಾಡುತ್ತಿವೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಹಮ್ಮಿಕೊಂಡಿದ್ದ 17ನೇ ಬಿಜಿಎಸ್ ಸಂಸ್ಥಾಪನಾ ದಿನ ಹಾಗೂ ಬಿಜಿಎಸ್ ಉತ್ಸವದ ಉದ್ಘಾಟನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರು, ಬಡವರು, ಆರ್ಥಿಕ ದುರ್ಬಲರ ಮಕ್ಕಳು ವ್ಯಾಸಂಗ ಮಾಡುವ ಶಾಲೆಗಳಿಗೆ ಸರ್ಕಾರ ಬೀಗ ಹಾಕುತ್ತಿದೆ. ಇಂತಹ ಸಂದರ್ಭದಲ್ಲಿ ಮಠಗಳು ನಾಡಿನ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡುವ ಕೆಲಸ ಮಾಡುತ್ತಿವೆ. ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದು ಸುಲಭ. ಅವುಗಳ ನಿರ್ವಹಣೆ ಸುಲಭವಲ್ಲ. ಆದರೆ, ದಕ್ಷತೆ, ಕ್ಷಮತೆಯಿಂದ ಮಠಗಳು ನಡೆಸಿಕೊಂಡು ಹೋಗುತ್ತಿವೆ ಎಂದರು.
ಮಠಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಸಮಾಜ ಸೇವೆಯ ನಡುವೆಯೇ ಅಧ್ಯಾತ್ಮ ಕ್ಷೇತ್ರದಲ್ಲಿಯೂ ನಿಸ್ವಾರ್ಥವಾಗಿ ತೊಡಗಿಸಿಕೊಂಡಿವೆ ಎಂದು ಸಚಿವರು ಪ್ರತಿಪಾದಿಸಿದರು.
ಆದಿಚುಂಚನಗಿರಿ ಮಠದ ನಿರ್ಮಲಾನಂದ ನಾಥ ಸ್ವಾಮೀಜಿ, ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಭಾಗವಹಿಸಿದ್ದರು.
ಆದಿಚುನಚಗಿರಿ ಶಿಕ್ಷಣ ಟ್ರಸ್ಟ್ ಮುಖ್ಯಸ್ಥ ಪ್ರಕಾಶನಾಥ ಸ್ವಾಮೀಜಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪತ್ರಕರ್ತರಾದ ಎಚ್.ಆರ್. ರಂಗನಾಥ್, ಶಿವಸ್ವಾಮಿ, ನಟಿಯರಾದ ಮಾಲಾಶ್ರೀ, ಆರಾಧನಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.