ADVERTISEMENT

ರಕ್ತ ಸಂಗ್ರಹ ಗುರಿಯಲ್ಲಿ ಶೇ 124ರಷ್ಟು ಪ್ರಗತಿ: ಸಚಿವ ದಿನೇಶ್ ಗುಂಡೂರಾವ್

ತಾಲ್ಲೂಕು ಕೇಂದ್ರಗಳಲ್ಲಿ ಪ್ಲಾಸ್ಮಾ ರಕ್ತ ಸಂಗ್ರಹಣೆ : ದಿನೇಶ್

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 15:32 IST
Last Updated 16 ಜೂನ್ 2025, 15:32 IST
<div class="paragraphs"><p>ನಗರದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆಯಲ್ಲಿ ಸಚಿವ ದಿನೇಶ್ ಗುಂಡೂರಾವ್ ಅವರು ತಮ್ಮ ರಕ್ತವನ್ನು ಲಯನ್ಸ್ ಬ್ಲಡ್ ಬ್ಯಾಂಕ್‌ನ ಡಾ.ಪ್ರಕೃತ್ ಕೆ.ಎನ್ ಗೌಡ ಅವರಿಗೆ ಹಸ್ತಾಂತರಿಸಿದರು. </p></div>

ನಗರದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆಯಲ್ಲಿ ಸಚಿವ ದಿನೇಶ್ ಗುಂಡೂರಾವ್ ಅವರು ತಮ್ಮ ರಕ್ತವನ್ನು ಲಯನ್ಸ್ ಬ್ಲಡ್ ಬ್ಯಾಂಕ್‌ನ ಡಾ.ಪ್ರಕೃತ್ ಕೆ.ಎನ್ ಗೌಡ ಅವರಿಗೆ ಹಸ್ತಾಂತರಿಸಿದರು.

   

ಬೆಂಗಳೂರು: ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ನಿಗದಿಪಡಿಸಿದ ರಕ್ತ ಸಂಗ್ರಹಣೆಯ ಗುರಿಗಿಂತ ಶೇಕಡ 124ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆಯಲ್ಲಿ ಅವರು ನಗರದಲ್ಲಿ ಸೋಮವಾರ ಮಾತನಾಡಿದರು. 

ADVERTISEMENT

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 1ರಷ್ಟು ಜನರಿಗೆ ರಕ್ತದ ಅವಶ್ಯವಿದ್ದು, ಅದಕ್ಕೆ ಅನುಗುಣವಾಗಿ ಪ್ರಸಕ್ತ ವರ್ಷ 10 ಲಕ್ಷ ಯೂನಿಟ್‌ ರಕ್ತ ಸಂಗ್ರಹಿಸಲಾಗಿದೆ. 1 ಯೂನಿಟ್ ರಕ್ತವು 4 ಜೀವಗಳನ್ನು ಉಳಿಸಬಹುದು. ಹೀಗಾಗಿ ಯುವಜನರು ರಕ್ತದಾನಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ತಾಯಂದಿರ ಸಾವುಗಳನ್ನು ತಡೆಯುವಲ್ಲಿ ರಕ್ತದ ಪಾತ್ರ ಪ್ರಮುಖವಾಗಿದೆ. 147 ತಾಲ್ಲೂಕು ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ರಕ್ತ ಸಂಗ್ರಹಣೆ ವ್ಯವಸ್ಥೆ ಜಾರಿಗೆ ತರಲಾಗುತ್ತಿದ್ದು, ಅಗತ್ಯ ಉಪಕರಣಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.

ಹೊಸದಾಗಿ 11 ಸರ್ಕಾರಿ ರಕ್ತ ಕೇಂದ್ರಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗೆ ಬರುವ ಬಡಜನರಿಗೆ ರಕ್ತ ಹಾಗೂ ಅದರ ಅಂಗಾಂಶಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಅಲ್ಲದೇ ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಅತಿ ಹೆಚ್ಚು ರಕ್ತ ಸಂಗ್ರಹಿಸುವ ನಾಲ್ಕು ಸರ್ಕಾರಿ ರಕ್ತ ಕೇಂದ್ರಗಳನ್ನು ರೀಜನಲ್ ಸೆಂಟರ್ ಆಫ್ ಎಕ್ಸಲೆನ್ಸ್ ರಕ್ತ ಕೇಂದ್ರಗಳಾಗಿ ಮೇಲ್ದರ್ಜೇಗೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಹೊಸದಾಗಿ ನಾಲ್ಕು ರಕ್ತ ಸಾಗಾಣಿಕೆ ಮತ್ತು ರಕ್ತ ಸಂಗ್ರಹಣಾ ವಾಹನಗಳ ಖರೀದಿ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದರು.

ಹೆಚ್ಚು ಬಾರಿ ರಕ್ತದಾನ ಮಾಡಿದ ಡಾ. ರಾಜನ್, ರಾಮದಾಸ್ ಗೌಡ, ದೇವಣ್ಣ, ಸುಜಾತಾ, ವೈಟ್ ಫೀಲ್ಡ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಎನ್. ರೀನಾ ಸುವರ್ಣ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಇದೇ ವೇಳೆ ದಿನೇಶ್ ಗುಂಡೂರಾವ್ ಅವರು ರಕ್ತದಾನ ಮಾಡಿದರು.

ರಾಜ್ಯ ರಕ್ತಚಲನ ಪರಿಷತ್ ನಿರ್ದೇಶಕಿ ಆರ್. ವಿನೋತ್ ಪ್ರಿಯಾ, ಆರೋಗ್ಯ ಇಲಾಖೆ ನಿರ್ದೇಶಕಿ ಡಾ. ಉಮಾ ಬುಗ್ಗಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.