ADVERTISEMENT

ಸೇವಾ ಅವಧಿ ವಿಸ್ತರಣೆಗೆ ಶುಶ್ರೂಷಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 19:41 IST
Last Updated 15 ಸೆಪ್ಟೆಂಬರ್ 2021, 19:41 IST
ಸೇವಾ ಅವಧಿ ವಿಸ್ತರಿಸುವಂತೆ ಆಗ್ರಹಿಸಿ ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿ ಪ್ರತಿಭಟನೆ ನಡೆಸಿದರು -ಪ್ರಜಾವಾಣಿ ಚಿತ್ರ
ಸೇವಾ ಅವಧಿ ವಿಸ್ತರಿಸುವಂತೆ ಆಗ್ರಹಿಸಿ ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿ ಪ್ರತಿಭಟನೆ ನಡೆಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಒಂದು ವರ್ಷದ ಎರಡು ತಿಂಗಳಿಂದ ಕೋವಿಡ್ ಸೇವೆ ನೀಡುತ್ತಿರುವ ನಮ್ಮ ಸೇವಾ ಅವಧಿಯನ್ನು ವಿಸ್ತರಿಸಬೇಕು’ ಎಂದು ಗುತ್ತಿಗೆ ಆಧಾರದಲ್ಲಿ ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿ ಆಗ್ರಹಿಸಿದರು.

ಕೆ.ಸಿ. ಜನರಲ್ ಹಾಗೂ ಜಯನಗರ ಸಾರ್ವಜನಿಕ ಆಸ್ಪತ್ರೆಯ ಶುಶ್ರೂಷಕರು, ಪ್ರಯೋಗಾಲಯದ ತಂತ್ರಜ್ಞರು ಹಾಗೂ ಗ್ರೂಪ್ ಡಿ ಸಿಬ್ಬಂದಿವಿಕಾಸಸೌಧದ ಮುಂಭಾಗದ ರಸ್ತೆಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ‘ಸೇವಾ ಭದ್ರತೆ ಒದಗಿಸಬೇಕು’ ಎಂದು ಆಗ್ರಹಿಸಿದಪ್ರತಿಭಟನನಿರತ 70ಕ್ಕೂ ಅಧಿಕ ಮಂದಿ, ಇದೇ 17ಕ್ಕೆ ರಾಜ್ಯ ಮಟ್ಟದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಕೋವಿಡ್ ಕರ್ತವ್ಯಕ್ಕೆ ಗುತ್ತಿಗೆ ಆಧಾರದಲ್ಲಿ ನೇಮಕರಾದವರ ಸೇವಾ ಅವಧಿಇದೇ 30ಕ್ಕೆ ಅಂತ್ಯವಾಗಲಿದೆ.

‘ಕೋವಿಡ್ ಮೊದಲ ಹಾಗೂ ಎರಡನೇ ಅಲೆಯ ಅವಧಿಯಲ್ಲಿ ಕುಟುಂಬದಿಂದ ಅಂತರ ಕಾಯ್ದುಕೊಂಡು ಸೋಂಕಿತರಿಗೆ ಸೇವೆ ನೀಡಿದ್ದೇವೆ. ಈ ವೇಳೆ ಹಲವು ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿ ಕೋವಿಡ್ ಪೀಡಿತರಾಗಿದ್ದಾರೆ. ನಮ್ಮ ಸೇವೆಯನ್ನು ಸರ್ಕಾರವು ಗುರುತಿಸಿಲ್ಲ. ಕೇವಲ ಹೂಮಳೆ ಸುರಿದು, ಚಪ್ಪಾಳೆ ತಟ್ಟಲಾಯಿತು. ಈಗ ಸೇವಾ ಅವಧಿ ವಿಸ್ತರಿಸದಿದ್ದಲ್ಲಿ ನಮ್ಮನ್ನೇ ಅವಲಂಬಿಸಿರುವ ಕುಟುಂಬಗಳು ಬೀದಿಗೆ ಬೀಳಲಿವೆ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಕೋವಿಡ್ ಸೇವೆಗೆ ಕಾಯಂ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದ ಅವಧಿಯಲ್ಲಿ ನಾವು ಸೇವೆ ನೀಡಿದ್ದೇವೆ. ಸಂಭಾವ್ಯ ಕೋವಿಡ್ ಮೂರನೇ ಅಲೆಯ ಎಚ್ಚರಿಕೆ ನೀಡಿರುವುದರಿಂದ ಸೇವಾ ಅವಧಿಯನ್ನು ವಿಸ್ತರಿಸಿ, ಉದ್ಯೋಗ ಭದ್ರತೆ ಒದಗಿಸಬೇಕು. ಇಲ್ಲದಿದ್ದರೆ ಇಲಾಖೆಯಲ್ಲಿನ ವಿವಿಧ ಯೋಜನೆಗಳಡಿ ನೇಮಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುವಾಗ ನಮಗೆ ಮೊದಲ ಆದ್ಯತೆ ನೀಡಬೇಕು’ ಎಂದು ಪ್ರತಿಭಟನನಿರತ ಶುಶ್ರೂಷಕಿ ಸೌಮ್ಯಶ್ರೀ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.