ADVERTISEMENT

ಮಾಲಿನ್ಯದ ಕ್ರಿಯಾಯೋಜನೆ ಚರ್ಚೆಯಾಗಲಿ: ಪರಿಸರ ಪ್ರಿಯರ ಒತ್ತಾಯ

ಹೆಲ್ತಿ ಏರ್‌ ಕೊಲೈಷನ್‌ ಸಂವಾದ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 19:48 IST
Last Updated 5 ಏಪ್ರಿಲ್ 2019, 19:48 IST
ಸಂವಾದದಲ್ಲಿ ರಿಕ್ಕಿ ಕೇಜ್ ಮಾತನಾಡಿದರು. ಹವಾಮಾನ ತಜ್ಞ ಎಚ್.ಪರಮೇಶ್, ಡಿ.ರಂದೀಪ್‌, ಸೇಂಟ್ ಜಾನ್ಸ್ ಸಂಶೋಧನಾ ಸಂಸ್ಥೆಯ ಡೀನ್ ಡಿ.ಎಸ್‌.ಟೋನಿ ರಾಜ್ ಹಾಗೂ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನ ಡೀನ್ ಎ.ಜಾರ್ಜ್ ಡಿಸೋಜಾ ಇದ್ದರು –ಪ್ರಜಾವಾಣಿ ಚಿತ್ರ
ಸಂವಾದದಲ್ಲಿ ರಿಕ್ಕಿ ಕೇಜ್ ಮಾತನಾಡಿದರು. ಹವಾಮಾನ ತಜ್ಞ ಎಚ್.ಪರಮೇಶ್, ಡಿ.ರಂದೀಪ್‌, ಸೇಂಟ್ ಜಾನ್ಸ್ ಸಂಶೋಧನಾ ಸಂಸ್ಥೆಯ ಡೀನ್ ಡಿ.ಎಸ್‌.ಟೋನಿ ರಾಜ್ ಹಾಗೂ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನ ಡೀನ್ ಎ.ಜಾರ್ಜ್ ಡಿಸೋಜಾ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ವಾಯುಮಾಲಿನ್ಯ ತಗ್ಗಿಸಲು ರೂಪಿಸುತ್ತಿರುವ ಕ್ರಿಯಾಯೋಜನೆಯ ಕರಡನ್ನು ಸಾರ್ವಜನಿಕರ ಚರ್ಚೆಗೆ ಒಳಪಡಿಸಿದ ಬಳಿಕವೇ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಅಂಕಿತಕ್ಕೆ ಕಳುಹಿಸಬೇಕು ಎಂಬ ಒತ್ತಾಯ ಕೇಳಿಬಂತು.

ಹೆಲ್ತ್‌ ಆ್ಯಂಡ್‌ ಎನ್‌ವಿರಾನ್‌ಮೆಂಟ್‌ ಅಲಯನ್ಸ್‌ ಸಂಸ್ಥೆಯ ‘ಹೆಲ್ತಿ ಏರ್‌ ಕೊಲೈಷನ್‌’ ಕಾರ್ಯಕ್ರಮದ ಉದ್ಘಾಟನೆ ಮತ್ತು ಸಂವಾದದಲ್ಲಿ ಪರಿಸರ ಪ್ರಿಯರು, ಸಾರಿಗೆ ತಜ್ಞರು, ವೈದ್ಯರು ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರತಿನಿಧಿಗಳು ಈ ಒತ್ತಾಯ ಮಾಡಿದರು.

‘ನೀತಿ–ನಿರೂಪಣೆಗಳು ಮುಚ್ಚಿದ ಕೊಠಡಿಯಲ್ಲಿ ಸೀಮಿತ ಜನರಿಂದ ಸಿದ್ಧಗೊಳ್ಳಬಾರದು. ಅದರಲ್ಲಿ ಜನರು, ಸ್ಥಳೀಯಾಡಳಿತ, ನಿಯಂತ್ರಣ ಸಂಸ್ಥೆ, ಅದನ್ನು ಜಾರಿ ಮಾಡಬೇಕಾದ ಸಂಸ್ಥೆಯ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ತಯಾರಾಗಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಅರಣ್ಯ, ಪರಿಸರ ಮತ್ತು ಜೀವವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ತಜ್ಞರನ್ನು ಒಳಗೊಂಡಿರುವ ಸಮಿತಿಯು ಮುಂದಿನ ವಾರ ಸಭೆ ಸೇರಲಿದೆ.

ಅಂತಿಮ ಕರಡನ್ನು ಸಿದ್ಧಪಡಿಸಿ, ಅಂಕಿತಕ್ಕಾಗಿರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಸಲ್ಲಿಸಲಿದೆ’ ಎಂದುಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಗುರುಮೂರ್ತಿ ತಿಳಿಸಿದರು.

ಬಿಬಿಎಂಪಿ ಹೆಚ್ಚುವರಿ ಆಯುಕ್ತ(ಘನತ್ಯಾಜ್ಯ ನಿರ್ವಹಣೆ) ಡಿ.ರಂದೀಪ್‌, ‘ವಾಯು ಮಾಲಿನ್ಯ ಅದೃಶ್ಯ ಕೊಲೆಗಾರ ಎಂಬುದು ಬಹುತೇಕರಿಗೂ ಗೊತ್ತಿದೆ. ಅದನ್ನು ತಗ್ಗಿಸಲು ವೈಯಕ್ತಿಕವಾಗಿ ಏನು ಮಾಡಬೇಕು ಎಂಬುದನ್ನು ಮತ್ತಷ್ಟು ಮನದಟ್ಟು ಮಾಡಬೇಕಿದೆ’ ಎಂದರು. ಸಂಗೀತ ಸಂಯೋಜಕ ರಿಕ್ಕಿ ಕೇಜ್‌,‘ಮಾಲಿನ್ಯ ನಿಯಂತ್ರಣವನ್ನು ‘ನಾನೊಬ್ಬನೇ ಮಾಡಲು ಸಾಧ್ಯವೇ. ಬೇರೆಯವರು ಮಾಡಲಿ’ ಎಂಬ ಮನಸ್ಥಿತಿಯಿಂದಾಗಿ ಸಮಸ್ಯೆ ಉಲ್ಭಣಿಸುತ್ತಿದೆ.

ಅವರಿಗೆ ಹವಾಮಾನ ವೈಪರೀತ್ಯ, ತಾಪಮಾನ ಹೆಚ್ಚಳದಂತಹ ಗಹನವಾದ ಸಮಸ್ಯೆಗಳ ಬದಲಾಗಿ, ಅವರ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ದೃಷ್ಟಿಯಲ್ಲಿ ಮಾಲಿನ್ಯ ಸಮಸ್ಯೆಯನ್ನು ಮನವರಿಕೆ ಮಾಡಿಕೊಡಬೇಕು’ ಎಂದು ಸಲಹೆ ನೀಡಿದರು.

15 ಸಾಧನ ಅಳವಡಿಕೆ

ಹೆಲ್ತಿ ಏರ್‌ ಕೊಲೈಷನ್‌ ಕಾರ್ಯಕ್ರಮದಡಿ ನಗರದ 15 ಸಾರ್ವಜನಿಕ ಸ್ಥಳಗಳಲ್ಲಿ ಗಾಳಿಯನ್ನು ಶುದ್ಧಿಕರಿಸುವ ಮತ್ತು ಮಾಲಿನ್ಯ ಅಳೆಯುವ ಸಾಧನಗಳನ್ನು ಈಗಾಗಲೇ ಅಳವಡಿಸಲಾಗಿದೆ. ಇನ್ನೂ 25 ಸಾಧನಗಳ ಅಳವಡಿಕೆ ಮಾಡಲು ಸಂಸ್ಥೆ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.