ADVERTISEMENT

ಸಿಡಿಲು ಸಹಿತ ಅಬ್ಬರದ ಮಳೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 22:16 IST
Last Updated 22 ಏಪ್ರಿಲ್ 2021, 22:16 IST
ಟಿನ್‌ ಫ್ಯಾಕ್ಟರಿ ಬಳಿ ರಸ್ತೆ ಅಗೆದಿದ್ದ ಜಾಗದಲ್ಲಿ ನೀರು ನಿಂತುಕೊಂಡು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಯಿತು – ಪ್ರಜಾವಾಣಿ ಚಿತ್ರ
ಟಿನ್‌ ಫ್ಯಾಕ್ಟರಿ ಬಳಿ ರಸ್ತೆ ಅಗೆದಿದ್ದ ಜಾಗದಲ್ಲಿ ನೀರು ನಿಂತುಕೊಂಡು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಯಿತು – ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದಲ್ಲಿ ಗುರುವಾರ ಮಧ್ಯಾಹ್ನ ಗುಡುಗು–ಸಿಡಿಲು ಸಹಿತವಾಗಿ ಜೋರು ಮಳೆ ಸುರಿಯಿತು.

ಬುಧವಾರ ತಡರಾತ್ರಿಯೂ ನಗರದ ಹಲವೆಡೆ ಜೋರು ಮಳೆಯಾಗಿತ್ತು. ಸುಮಾರು 30 ನಿಮಿಷ ಸುರಿದ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ಹರಿಯಿತು.

ಗುರುವಾರ ಬೆಳಿಗ್ಗೆಯಿಂದ ನಗರದಲ್ಲಿ ಬಿಸಿಲು ಹಾಗೂ ಕೆಲ ಬಾರಿ ಮೋಡ ಕವಿದ ವಾತಾವರಣ ಕಾಣಿಸಿತು. ಮಧ್ಯಾಹ್ನ 2.40ಕ್ಕೆ ಜಿಟಿ ಜಿಟಿಯಾಗಿ ಮಳೆ ಆರಂಭವಾಗಿ, ನಂತರ ಮಳೆ ಅಬ್ಬರ ಹೆಚ್ಚಾಯಿತು. ಮಳೆಯ ಜೊತೆಯಲ್ಲಿ ಗಾಳಿಯೂ ಜೋರಾಗಿ ಬೀಸಿತ್ತು.

ADVERTISEMENT

ಜಾಲಹಳ್ಳಿ, ಯಶವಂತಪುರ, ಪೀಣ್ಯ, ದಾಸರಹಳ್ಳಿ, ಎಚ್ಎಂಟಿ ಲೇಔಟ್, ಲಗ್ಗೆರೆ, ರಾಜಾಜಿನಗರ, ವಿಜಯ
ನಗರ, ಮಹಾಲಕ್ಷ್ಮಿಲೇಔಟ್, ಮೆಜೆಸ್ಟಿಕ್, ಗಾಂಧಿನಗರ, ಬಸವೇಶ್ವರನಗರ, ಮಲ್ಲೇಶ್ವರ, ಕಾಮಾಕ್ಷಿಪಾಳ್ಯ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಗುಡುಗು- ಸಿಡಿಲು ಸಹಿತ ಮಳೆ ಸುರಿಯಿತು.

ಕೊರೊನಾ ಸೋಂಕು ತಡೆಗೆ ಹಲವು ಕ್ರಮಗಳನ್ನು ಸರ್ಕಾರ ಕೈಗೊಂಡಿದ್ದರಿಂದ ನಗರದಲ್ಲಿ ಜನರ ಓಡಾಟ ಕಡಿಮೆ ಇತ್ತು. ಕೆಲ ಕಡೆ ಕಾಲುವೆಗಳಲ್ಲಿ ನೀರು ತುಂಬಿ ಹರಿದು, ತ್ಯಾಜ್ಯವೆಲ್ಲ ರಸ್ತೆಗೆ ಬಂದು ಬಿದ್ದಿದೆ.

ಕೆಲಸ ಹಾಗೂ ವಸ್ತುಗಳ ಖರೀದಿ ಸಲುವಾಗಿ ಹಲವು ಸಾರ್ವಜನಿಕರು ಮಾರುಕಟ್ಟೆಗಳಿಗೆ ಬಂದಿದ್ದರು. ಮಧ್ಯಾಹ್ನವೇ ಮಳೆ ಸುರಿದಿದ್ದರಿಂದ ಹಲವರು ರಸ್ತೆ ಬದಿಗಳಲ್ಲಿ ಆಶ್ರಯ ಪಡೆದುಕೊಂಡಿದ್ದು ಕಂಡುಬಂತು.

ನಗರದ ಬಹುತೇಕ ಕಡೆ ಕಾಮಗಾರಿ ಹಾಗೂ ಕೇಬಲ್ ಅಳವಡಿಕೆಗಾಗಿ ರಸ್ತೆ ಮತ್ತು ಕಾಲುವೆಗಳನ್ನು ಅಗೆಯಲಾಗಿದೆ. ಮಳೆಯಿಂದಾಗಿ ಅಂಥ ಸ್ಥಳಗಳಲ್ಲಿದ್ದ ಗುಂಡಿಗಳಲ್ಲಿ ನೀರು ನಿಂತುಕೊಂಡಿತ್ತು. ಇದರಿಂದಾಗಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಯಿತು.

ಕೆಳಸೇತುವೆಗಳಲ್ಲಿ ತುಂಬಿ ಹರಿದ ನೀರು: ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಬಳಿಯ ಓಕಳಿಪುರದ ಕೆಳಸೇತುವೆ, ಶಿವಾನಂದ ವೃತ್ತದ ಕೆಳಸೇತುವೆಗಳಲ್ಲಿ ನೀರು ತುಂಬಿ ಹರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.