ಬೆಂಗಳೂರು: ನಗರದಲ್ಲಿ ಗುರುವಾರ ಉತ್ತಮವಾಗಿ ಮಳೆಯಾಗಿದೆ. ಕೆಲವು ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ತೊಡಕಾಯಿತು. ಇನ್ನು ಕೆಲವೆಡೆ ಮರದ ಕೊಂಬೆ ಬಿದ್ದು ಸಂಚಾರ ವ್ಯತ್ಯಯವಾಯಿತು.
ಕಾರ್ತಿಕ್ ನಗರದ ರಸ್ತೆಯಲ್ಲಿ ಮರ ಬಿದ್ದ ಕಾರಣ ಕೆ.ಆರ್. ಪುರ ಕಡೆಗೆ ಕೆಲಹೊತ್ತು ಸಂಚಾರ ಸ್ಥಗಿತಗೊಂಡಿತು. ಮರ ತೆರವುಗೊಳಿಸದ ಬಳಿಕ ವಾಹನ ಸಂಚಾರ ಆರಂಭವಾಯಿತು. ಎಂ.ಎಸ್. ಪಾಳ್ಯ ಜಂಕ್ಷನ್ ಬಳಿ ರಸ್ತೆಯಲ್ಲಿ ಮರದ ಕೊಂಬೆ ಬಿದ್ದ ಕಾರಣ ಯಲಹಂಕ ಕಡೆಗೆ ಸಾಗುವ ವಾಹನಗಳಿಗೆ ತೊಂದರೆ ಉಂಟಾಯಿತು.
ಮಾರತಹಳ್ಳಿ ಪೊಲೀಸ್ ಠಾಣಾ ಸರ್ವೀಸ್ ರಸ್ತೆಯಲ್ಲಿ ನೀರು ನಿಂತಿದ್ದರಿಂದ ಕಾಡುಬೀಸನಹಳ್ಳಿ ಕಡೆಗೆ ಹೋಗುವ ವಾಹನಗಳು ನಿಧಾನವಾಗಿ ಸಂಚರಿಸಿದವು. ಹೆಬ್ಬಾಳ ಸರ್ಕಲ್ ಬಳಿ ನೀರು ನಿಂತು ಸಮಸ್ಯೆ ಉಂಟಾಯಿತು. ಎಸ್ಟಿಮ್ ಮಾಲ್ ಬಳಿ ನೀರು ನಿಂತಿದ್ದರಿಂದ ಹೆಬ್ಬಾಳ ಸರ್ಕಲ್ ಕಡೆಗೆ ಹೋಗುವ ವಾಹನಗಳು ತೊಂದರೆ ಅನುಭವಿಸಿದವು.
ಮಳೆ ವಿವರ: ವಿದ್ಯಾಪೀಠ 1.3 ಸೆಂ.ಮೀ., ಕೆಂಗೇರಿ 1.2 ಸೆಂ.ಮೀ., ಅರಕೆರೆ 1 ಸೆಂ.ಮೀ., ರಾಜರಾಜೇಶ್ವರಿ ನಗರ 1 ಸೆಂ.ಮೀ., ಪುಟ್ಟೇನಹಳ್ಳಿ 1 ಸೆಂ.ಮೀ., ನಾಯಂಡಹಳ್ಳಿಯಲ್ಲಿ 1 ಸೆಂ.ಮೀ. ಮಳೆ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.