ADVERTISEMENT

ಬೆಂಗಳೂರು | ಜೋರು ಮಳೆ: ಉರುಳಿಬಿದ್ದ ಮರಗಳು

​ಪ್ರಜಾವಾಣಿ ವಾರ್ತೆ
Published 7 ಮೇ 2022, 2:06 IST
Last Updated 7 ಮೇ 2022, 2:06 IST
ನಗರದಲ್ಲಿ ಶುಕ್ರವಾರ ಸಂಜೆ ಮಳೆ ಸುರಿಯುತ್ತಿದ್ದ ವೇಳೆ ಸಾರ್ವಜನಿಕರು ಕೊಡೆ ಹಿಡಿದು ದ್ವಿಚಕ್ರ ವಾಹನದಲ್ಲಿ ಸಂಚರಿಸಿದರು (ಎಡಚಿತ್ರ). ನಗರದ ಪಿಇಎಸ್ ಕಾಲೇಜು ಬಳಿ ಮಳೆಯಿಂದಾಗಿ ಬಿಎಂಟಿಸಿ ಬಸ್‌ ಮೇಲೆ ಮರ ಉರುಳಿರುವುದು              – ಪ್ರಜಾವಾಣಿ ಚಿತ್ರಗಳು
ನಗರದಲ್ಲಿ ಶುಕ್ರವಾರ ಸಂಜೆ ಮಳೆ ಸುರಿಯುತ್ತಿದ್ದ ವೇಳೆ ಸಾರ್ವಜನಿಕರು ಕೊಡೆ ಹಿಡಿದು ದ್ವಿಚಕ್ರ ವಾಹನದಲ್ಲಿ ಸಂಚರಿಸಿದರು (ಎಡಚಿತ್ರ). ನಗರದ ಪಿಇಎಸ್ ಕಾಲೇಜು ಬಳಿ ಮಳೆಯಿಂದಾಗಿ ಬಿಎಂಟಿಸಿ ಬಸ್‌ ಮೇಲೆ ಮರ ಉರುಳಿರುವುದು              – ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ನಗರದಲ್ಲಿ ಶುಕ್ರವಾರವೂ ಹಲವೆಡೆ ಜೋರು ಮಳೆ ಆಯಿತು. ನಗರದ 6 ಕಡೆಗಳಲ್ಲಿ ಮರಗಳು ಉರುಳಿಬಿದ್ದಿದ್ದವು.

ಕೆಲದಿನಗಳಿಂದ ನಗರದಲ್ಲಿ ಮೋಡ ಕವಿದ ವಾತಾವರಣ ಸಾಮಾನ್ಯವಾಗಿದೆ. ಆಗಾಗ ಬಿಸಿಲು ಕಾಣಿಸಿಕೊಳ್ಳುತ್ತಿದೆ. ಸಂಜೆ ಹಾಗೂ ರಾತ್ರಿ ಸಮಯದಲ್ಲಿ ಗುಡುಗು–ಸಿಡಿಲು ಹಾಗೂ ಜೋರು ಗಾಳಿ ಸಮೇತ ಮಳೆ ಆಗುತ್ತಿದೆ.

ರಾಜರಾಜೇಶ್ವರಿನಗರ, ಕೆಂಗೇರಿ, ನಾಯಂಡನಹಳ್ಳಿ, ದೀಪಾಂಜಲಿನಗರ, ವಿಜಯನಗರ, ಚಂದ್ರಾಲೇಔಟ್, ನಾಗರಬಾವಿ, ರಾಜಾಜಿನಗರ, ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಪೀಣ್ಯ, ಗೊರಗುಂಟೆಪಾಳ್ಯ, ಜಾಲಹಳ್ಳಿ, ಮಲ್ಲೇಶ್ವರ, ಶೇಷಾದ್ರಿಪುರ, ಗಾಂಧಿನಗರ, ಮೆಜೆಸ್ಟಿಕ್ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಜೋರು ಮಳೆ ಇತ್ತು.

ADVERTISEMENT

ಹೆಬ್ಬಾಳ, ಆರ್‌.ಟಿ.ನಗರ, ಸಂಜಯ ನಗರ, ಅಮೃತಹಳ್ಳಿ, ಸದಾಶಿವನಗರ, ವಸಂತನಗರ, ಪುಲಿಕೇಶಿನಗರ, ಭಾರತಿನಗರ, ಶಿವಾಜಿನಗರ, ಎಂ.ಜಿ.ರಸ್ತೆ, ಅಶೋಕನಗರ, ವಿವೇಕನಗರ, ಕೋರಮಂಗಲ, ಮಡಿವಾಳ, ಎಚ್‌ಎಸ್‌ಆರ್ ಲೇಔಟ್ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲೂ ಮಳೆ ಆಯಿತು.

ಇಂದಿರಾನಗರದ 13ನೇ ಅಡ್ಡರಸ್ತೆಯಲ್ಲಿ ತೆಂಗಿನ ಮರವೊಂದು ಉರುಳಿ ರಸ್ತೆ ಮೇಲೆ ಬಿದ್ದಿತ್ತು. ಮಾರತ್ತಹಳ್ಳಿ, ಬೆಮೆಲ್ ಬಡಾವಣೆ, ಚನ್ನಸಂದ್ರ, ಉತ್ತರಹಳ್ಳಿ ಬಸ್‌ ತಂಗುದಾಣ ಬಳಿ, ಕೋರಮಂಗಲ ಬಳಿ ಮರಗಳು ಉರುಳಿಬಿದ್ದಿದ್ದವು. 12 ಕಡೆ ಮರದ ದೊಡ್ಡ ಗಾತ್ರದ ಕೊಂಬೆಗಳು ಬಿದ್ದಿದ್ದವು.

ರಸ್ತೆ ಮೇಲೆಯೇ ಮರಗಳು ಹಾಗೂ ಕೊಂಬೆಗಳು ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಬಿಬಿಎಂಪಿ ಸಿಬ್ಬಂದಿ ಹಾಗೂ ಸ್ಥಳೀಯರು ಮರಗಳನ್ನು ತೆರವು ಮಾಡಿ, ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

ಹೊರವರ್ತುಲ ರಸ್ತೆಯ ಪಿಇಎಸ್‌ ಕಾಲೇಜು ಬಳಿ ಬಿಎಂಟಿಸಿ ಬಸ್‌ ಮೇಲೆ ಮರವೊಂದು ಬಿದ್ದಿತ್ತು. ಬಸ್ಸಿನ ಚಾವಣಿ ಮಾತ್ರ ಜಖಂಗೊಂಡಿತು. ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ.

‘ನಾಯಂಡನಹಳ್ಳಿಯಿಂದ ಹೊಸಕೆರೆಹಳ್ಳಿ ಕಡೆಗೆ ಬಸ್ ಹೊರಟಿದ್ದಾಗ ಈ ಅವಘಡ ಸಂಭವಿಸಿತ್ತು’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

‘ನಗರದ ಬಹುತೇಕ ಕಡೆ ಮಳೆಯಾಗಿದ್ದು, ಮರಗಳು ಹಾಗೂ ಅದರ ಕೊಂಬೆಗಳು ಉರುಳಿಬಿದ್ದಿದ್ದ ಬಗ್ಗೆ ದೂರುಗಳು ಬಂದಿವೆ. ಮನೆಗಳಿಗೆ ನೀರು ನುಗ್ಗಿದ್ದ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಆಯಾ ವಲಯಗಳಿಗೂ ದೂರುಗಳು ಬರುತ್ತಿದ್ದು, ಸಿಬ್ಬಂದಿ ತ್ವರಿತವಾಗಿ ಸ್ಪಂದಿಸುತ್ತಿದ್ದಾರೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.